ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಅಸ್ಪತ್ರೆಗಳಲ್ಲಿ ಪರಿಸ್ಥಿತಿ ಸುಧಾರಣೆ; ದೂರುಗಳೂ ತಪ್ಪಿಲ್ಲ!

ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ ಆದ್ಯತೆ
Last Updated 19 ಜನವರಿ 2021, 6:15 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಸರ್ಕಾರಿ ವೈದ್ಯಕೀಯ ಸೇವಾ ಸಂಸ್ಥೆಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರ ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬಹುತೇಕಅಸ್ಪತ್ರೆಗಳಲ್ಲಿ ವ್ಯವಸ್ಥೆ ಸುಧಾರಿಸಿದೆ. ಸಹಜ ಹೆರಿಗೆಗೆ ಆದ್ಯತೆ ಕೊಡುತ್ತಿರುವುದು ಗಮನಸೆಳೆದಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯೂ ಸಹಜ ಹೆರಿಗೆಗಾಗಿ ಹೆಸರು ಗಳಿಸಿದೆ. ಜಿಲ್ಲೆಯೊಂದಿಗೆ ನೆರೆಯ ಮಹಾರಾಷ್ಟ್ರ, ಗೋವಾದಿಂದಲೂ ಬರುತ್ತಾರೆ. ಪ್ರಸೂತಿ ಹಾಗೂ ಮಕ್ಕಳ ವಿಭಾಗದ ನವೀಕೃತ ಕಟ್ಟಡವನ್ನು ಈಚೆಗೆ ಉದ್ಘಾಟಿಸಲಾಗಿದ್ದು, ಉತ್ತಮ ವ್ಯವಸ್ಥೆಯನ್ನು ಒಳಗೊಂಡಿದೆ.

‘ಹೊಸ ಕಟ್ಟಡದಲ್ಲೂ ಶುಚಿತ್ವ ಇಲ್ಲ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಫ್ಯಾನ್ ಇಲ್ಲ. ವೈದ್ಯರು ಬೆಳಿಗ್ಗೆ ಬಂದರೆ ಮತ್ತೆ ನಾಳೆ ಬೆಳಿಗ್ಗೆವರೆಗೂ ಬರುವುದಿಲ್ಲ’ ಎಂದು ರೋಗಿಗಳ ಕುಟುಂಬದವರು ಈಚೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಎದುರು ದೂರಿದ್ದರು. ಆಗ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದಕೊಂಡಿದ್ದರು. ಬಳಿಕ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕ್ರಮ ಕೈಗೊಂಡ ‍ಪರಿಣಾಮ, ಪರಿಸ್ಥಿತಿ ಸುಧಾರಿಸಿದೆ. ಆದರೂ ವೈದ್ಯರು ಸೇರಿದಂತೆ ಕೆಲವು ಸಿಬ್ಬಂದಿ ಸಮರ್ಪಕವಾಗಿ ಸ್ಪಂದಿಸುವುದಿಲ್ಲ ಎಂಬ ದೂರುಗಳು ಸಂಪೂರ್ಣವಾಗಿ ನಿಂತಿಲ್ಲ! ನವೀಕೃತ ಕಟ್ಟಡದ ನಿರ್ವಹಣೆಗೆ ಗಮನಹರಿಸಬೇಕು ಎನ್ನುವ ಒತ್ತಾಯ ಸಾರ್ವಜನಿಕರದಾಗಿದೆ.

ಕೋವಿಡ್ ಭೀತಿಯಲ್ಲೂ:ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇಲ್ಲಿನ ಶ್ರೀನಗರ ಜೋಡಿ ಮಾರ್ಗದ ವಂಟಮುರಿ ಕಾಲೊನಿಯಲ್ಲಿ 30 ಹಾಸಿಗೆಗಳ ಪ್ರಸೂತಿ ಹಾಗೂ ಮಕ್ಕಳ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿಯೇ ₹ 2.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ, ನವಜಾತ ಶಿಶು ತುರ್ತು ನಿಗಾ ಘಟಕ, ವಿಶ್ರಾಂತಿ ಘಟಕ, ತಜ್ಞ ವೈದ್ಯರ ಕೊಠಡಿಗಳು, ನವಜಾತ ಶಿಶು ಆರೈಕೆ ಘಟಕ, ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಗಳು, ಚುಚ್ಚುಮದ್ದು ಘಟಕ, ಪ್ರಸವಪೂರ್ವ ಕೊಠಡಿಗಳನ್ನು ಆಸ್ಪತ್ರೆಯು ಒಳಗೊಂಡಿದೆ. ಈ ಭಾಗದವರು ಜಿಲ್ಲಾಸ್ಪತ್ರೆಗೆ ಬರುವುದು ಕೊಂಚ ತಪ್ಪಿದೆ.

ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್–19 ದೃಢಪಟ್ಟಿದ್ದ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಬಹುತೇಕ ಸರ್ಕಾರಿ ಸಂಸ್ಥೆಗಳಲ್ಲಿ ಕೋವಿಡ್ ಭೀತಿಯ ನಡುವೆಯೂ ಗರ್ಭಿಣಿಯರಿಗೆ ಸೇವೆ ಒದಗಿಸಲಾಗಿದೆ. ಕೆಲವು 24x7 ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಸಮೀಪದ ಆಸ್ಪತ್ರೆಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಹುದ್ದೆಗಳ ಭರ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಪ್ರತ್ಯೇಕ ವ್ಯವಸ್ಥೆ:ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗಾಗಿ ಪ್ರತ್ಯೇಕ ವಿಭಾಗವಿದೆ. ತಜ್ಞ ವೈದ್ಯರು, ನರ್ಸ್‌ಗಳು ಇದ್ದಾರೆ. 30 ಹಾಸಿಗೆಗಳ ಸೌಲಭ್ಯವಿರುವ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 40–50 ಹೆರಿಗೆಗಳು ಆಗುತ್ತವೆ’ ಎಂದು ಮುಖ್ಯ ವೈದ್ಯಾಧಿಕಾರಿ ಭಾರತಿ ಕೋಣಿ ತಿಳಿಸಿದರು.

‘ಸುಸಜ್ಜಿತ ಆಪರೇಷನ್‌ ಥಿಯೇಟರ್‌ ಇದೆ. ಆಕ್ಸಿಜನ್‌ ಸೌಲಭ್ಯ ಸಹ ಒದಗಿಸಲಾಗಿದೆ. ಖಾಸಗಿ ಆಸ್ಪತ್ರೆಯಂತೆಯೇ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ವಿಶೇಷ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ 2008ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. 100 ಹಾಸಿಗೆಗಳ ಸೌಲಭ್ಯ ಸಹ ಸಿಗಲಿದೆ ಎಂದು ಶಾಸಕರ ಕಚೇರಿಯಿಂದ ತಿಳಿದುಬಂದಿದೆ’ ಎಂದು ಹೇಳಿದರು.

ಬೈಲಹೊಂಗಲದಲ್ಲಿ ಹಿಂದಿಗಿಂತ ಈಗ ಪರಿಸ್ಥಿತಿ ಸುಧಾರಿಸಿದೆ ಎಂಬ ಮಾತುಗಳು ಸಾರ್ವಜನಿಕರದಾಗಿದೆ.

ತಾಲ್ಲೂಕು ಆಸ್ಪತ್ರೆಯಲ್ಲಿ ನಿರ್ವಹಣೆ ಇಲ್ಲ:ಸವದತ್ತಿ ತಾಲ್ಲೂಕಿನ ಹಿರೇಕುಂಬಿ, ಅಸುಂಡಿ ಹಾಗೂ ಮದ್ಲೂರ ಗ್ರಾಮಗಳ ಆರೋಗ್ಯ ಕೇಂದ್ರಗಳು ತಾಲ್ಲೂಕು ಆಸ್ಪತ್ರೆಯನ್ನೇ ಮೀರಿಸಿ ಮೆಚ್ಚುವ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದ ಆಸ್ಪತ್ರೆಗಳ ಸದುಪಯೋಗವನ್ನು ಜನರು ಪಡೆದುಕೊಳ್ಳುತ್ತಿದ್ದಾರೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ಹೆರಿಗೆ ವಾರ್ಡ್‌ ಇದೆ. ಆದರೆ, ನಿರ್ವಹಣೆ ಸರಿ ಇಲ್ಲ. ಸಿಬ್ಬಂದಿಯು ತ್ವರಿತವಾಗಿ ಸ್ಪಂದಿಸದೆ ಇರುವ ಬಗ್ಗೆ ದೂರುಗಳಿವೆ. ಕೆಲವರು ಕಿರಿಕಿರಿಯೇ ಬೇಡವೆಂದು, ದುಬಾರಿಯಾದರೂ ಸರಿಯೇ ಖಾಸಗಿ ಆಸ್ಪತ್ರೆಗಳಿಗೆ ಹೋಗೋಣವೆಂದು ಅತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ವೈದ್ಯರು ಸಕಾಲದಲ್ಲಿ ಸಿಗದೇ ಇದ್ದ ಸಂದರ್ಭದಲ್ಲಿ ಪರಿಸ್ಥಿತಿಗೆ ತಕ್ಕಂತೆ ಹೆರಿಗೆ ಮಾಡಿ ಭೇಷ್ ಎನಿಸಿಕೊಂಡ ಉದಾಹರಣೆಗಳೂ ಸರ್ಕಾರಿ ಆಸ್ಪತ್ರೆಯಲ್ಲಿವೆ. ಸವದತ್ತಿ ಜೊತೆಗೆ ರಾಮದುರ್ಗ, ನರಗುಂದ, ನವಲಗುಂದದಿಂದಲೂ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆ ಹೊರಾಂಗಣದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ.

ಬಿಸಿ ನೀರು, ಸೊಳ್ಳ ಪರದೆ:ಚನ್ನಮ್ಮನ ಕಿತ್ತೂರಿನ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ಹೆರಿಗೆ ವಾರ್ಡ್‌ ವ್ಯವಸ್ಥಿತ ಮತ್ತು ಸುರಕ್ಷಿತವಾಗಿದೆ. ‘ಹೆರಿಗೆಯಾದ ಮೇಲೆ ವಾರ್ಡ್‌ಗೆ ಸ್ಥಳಾಂತರಿಸಿದ ಮೇಲೆ ಅಲ್ಲಿಯೂ ಕೆಲವು ಸೌಲಭ್ಯಗಳನ್ನು ಬಾಣಂತಿಯರಿಗೆ ಒದಗಿಸಿಕೊಡಲಾಗಿದೆ. ವಾರ್ಡ್ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬಾಣಂತಿಯರಿಗೆ ಸೊಳ್ಳೆ ಪರದೆ, ಬಳಸಲು ಬಿಸಿನೀರು, ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಲಾಗುತ್ತಿದೆ. ಬಿಸಿನೀರಿಗಾಗಿ ಗೀಸರ್ ಬಳಸಲಾಗುತ್ತಿದೆ’ ಎಂದು ವೈದ್ಯೆ ಅನ್ನಪೂರ್ಣ ಅಂಗಡಿ ತಿಳಿಸುತ್ತಾರೆ.

‘ಇಲ್ಲಿ ತಿಂಗಳಿಗೆ ಸರಾಸರಿ 30ರಿಂದ 35ರವರೆಗೆ ಹೆರಿಗೆ ಮಾಡಿಸಲಾಗುತ್ತದೆ. ಬಾಣಂತಿಯರು ನವಜಾತ ಶಿಶುವಿಗೆ ಅಕ್ಕರೆಯ ಆರೈಕೆ ಸೇವೆ ಜೊತೆಗೆ ಸುರಕ್ಷತೆಯೂ ಇಲ್ಲಿದೆ’ ಎಂದು ಹೇಳಿದರು.

ಪ್ರತ್ಯೇಕ ವಾರ್ಡ್‌:ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಕೇಂದ್ರ ಸ್ಥಾನವೂ ಆಗಿರುವ ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿಯರ ಕೊಠಡಿಯಲ್ಲಿ ಅಗತ್ಯ ವ್ಯವಸ್ಥೆ ಇದೆ. ಸ್ತ್ರೀ ರೋಗ ತಜ್ಞ ಹುದ್ದೆಯೂ ಭರ್ತಿ ಆಗಿರುವುದರಿಂದ ಪ್ರತಿ ತಿಂಗಳು ಕನಿಷ್ಠ 100 ಹೆರಿಗೆಗಳನ್ನು ಮಾಡಿಸಲಾಗುತ್ತಿದೆ.

‘ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಬಾಣಂತಿಯರಿಗೆ ಪ್ರತ್ಯೇಕ ವಾರ್ಡ್ ಇದೆ. ಚಿಕ್ಕೋಡಿ ಪಟ್ಟಣದೊಂದಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಗರ್ಭಿಣಿಯರಿಗೆ ಪ್ರಸವಪೂರ್ವ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಕೊರೊನಾ ಕಾರಣದಿಂದ ಐದಾರು ತಿಂಗಳುಗಳ ಕಾಲ ಆಸ್ಪತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರು ಆಸ್ಪತ್ರೆಗೆ ಬಾರದ ಕಾರಣ ಹೆರಿಗೆ ಪ್ರಮಾಣ ಕಡಿಮೆಯಾಗಿತ್ತು. ಎರಡು ತಿಂಗಳುಗಳಿಂದ ಹೆರಿಗೆ ಪ್ರಮಾಣ ಹೆಚ್ಚಳವಾಗಿದೆ. ಪ್ರತಿ ತಿಂಗಳು ಸರಾಸರಿ 100 ಹೆರಿಗೆಗಳಾದರೂ ಆಗುತ್ತವೆ’ ಎಂದು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಕುನ್ನೂರೆ ಹೇಳುತ್ತಾರೆ.

‘ಬಾಣಂತಿಯರ ಕೊಠಡಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಬಾಣಂತಿಯರಿಗೆ ಊಟದ ಕೂಪನ್ ನೀಡಲಾಗುತ್ತಿದೆ. ಜೊತೆಗೆ ಬಿಸಿ ನೀರಿನ ವ್ಯವಸ್ಥೆ, ಔಷಧೋಪಚಾರ ನೀಡಲಾಗುತ್ತಿದೆ. ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದೆ. ಚಿಕ್ಕ ಮಕ್ಕಳ ತಜ್ಞ ಹುದ್ದೆ ಖಾಲಿ ಇದ್ದು, ಎನ್ಐಸಿಯು ವ್ಯವಸ್ಥೆಯೂ ಇಲ್ಲ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ನವಜಾತ ಶಿಶುಗಳನ್ನು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಳವಡಿಸಿಕೊಂಡಿರುವ ಪಟ್ಟಣದ ಸಲಗರೆ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.

ಸಹಜ ಹೆರಿಗೆಗೆ ಹೆಸರುವಾಸಿ:ಸುತ್ತಮುತ್ತಲಿನ 200ಕ್ಕೂ ಹೆಚ್ಚು ಹಳ್ಳಿಗಳ ಪ್ರಮುಖ ಕೇಂದ್ರ ಮತ್ತು ತಾಲ್ಲೂಕು ಕೇಂದ್ರವಾದ ಖಾನಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ಪ್ರತ್ಯೇಕ ವಾರ್ಡ್ ಇಲ್ಲ. ಆಸ್ಪತ್ರೆಯ ಕಟ್ಟಡದ ಒಂದು ಭಾಗದಲ್ಲಿ ಹೆರಿಗೆ ವಾರ್ಡ್ ಇದೆ. ಇಲ್ಲಿ ಸರಾಸರಿ ತಿಂಗಳಿಗೆ 80ರಿಂದ 100 ಹೆರಿಗೆಗಳಾಗುತ್ತವೆ. ಇದರಲ್ಲಿ ನಾರ್ಮಲ್ ಹೆರಿಗೆಯ ಪ್ರಮಾಣ ಶೇ 90ಕ್ಕೂ ಹೆಚ್ಚಿಗೆ ಇದೆ.

ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞ ವೈದ್ಯರು ಮತ್ತು ಹೆರಿಗೆ ವಾರ್ಡಿಗೆ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಆಸ್ಪತ್ರೆಯಲ್ಲಿ ಬಾಣಂತಿ ಮತ್ತು ಮಗುವಿನ ಆರೈಕೆ ಕಡೆಗೆ ಗಮನ ಹರಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ. ಆದರೂ ಗ್ರಾಮೀಣ ಭಾಗದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಗರ್ಭಿಣಿಯರ ಹಾರೈಕೆಗೆ ಕ್ರಮ ವಹಿಸಲಾಗಿದೆ.

ಗೋಕಾಕದಲ್ಲಿ ನೂರು ಹಾಸಿಗೆಗಳ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ ಸಕಲ ವ್ಯವಸ್ಥೆಗಳಿಂದ ಕೂಡಿದೆ. ನಿತ್ಯ ಸರಾಸರಿ 20 ಹೆರಿಗೆಗಳು ಆಗುತ್ತಿವೆ. 2018ರಲ್ಲಿ ನಿರ್ಮಿಸಲಾದ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಗಳಿಂದ ಕೂಡಿರುವ ಈ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕ, ಔಷಧಿ ಉಗ್ರಾಣ, ಕ್ಯಾಂಟೀನ್, ಧೋಬಿ ಘಾಟ್ ಮೊದಲಾದವು ಇವೆ.

ಸ್ವಚ್ಛತೆಗೆ ಸಿಗದ ಆದ್ಯತೆ
ರಾಮದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಅಷ್ಟೊಂದು ಆದ್ಯತೆ ಇಲ್ಲ. ಅದರಲ್ಲೂ ಹೆರಿಗೆ ವಿಭಾಗದಲ್ಲಿ ಇದ್ದುದರಲ್ಲಿಯೇ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿದೆ. ಸುತ್ತಲಿನ ಗಲೀಜು ಪರಿಸರ ಸೊಳ್ಳೆಗಳಿಗೆ ವಾಸಸ್ಥಳವಾಗಿದೆ. ಅಲ್ಲಿಂದ ಬರುವ ಸೊಳ್ಳೆಗಳಿಂದ ರಕ್ಷಣೆ ಹೊಂದಲು ಪರದೆಯ ಸಹಾಯ ಪಡೆಯುವುದು ಅನಿವಾರ್ಯವಾಗಿದೆ.

ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಮಂಜೂರಾದಷ್ಟು ವೈದ್ಯರ ಹುದ್ದೆ ಭರ್ತಿಯಾಗಿಲ್ಲ. ಇಲ್ಲಿದ್ದ ಕೆಲವು ವೈದ್ಯರನ್ನು ವರ್ಗಾವಣೆ ಮಾಡಿದ ಬಳಿಕ ಭರ್ತಿಯಾಗಿಲ್ಲ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹುದ್ದೆ ಖಾಲಿ ಉಳಿದು ಒಂದು ವರ್ಷ ಗತಿಸುತ್ತಿದ್ದರೂ ನೇಮಕವಾಗಿಲ್ಲ. ಇಲ್ಲಿ ಯಾರೂ ಯಾರ ಮಾತನ್ನು ಕೇಳುವುದಿಲ್ಲ. ಹಿರಿಯ ವೈದ್ಯರು ಇದ್ದರೂ ಇಲ್ಲದಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಇಲ್ಲಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎನ್ನುವ ಒತ್ತಾಯ ಸಾರ್ವಜನಿಕರದಾಗಿದೆ.

ಪ್ರಸೂತಿ ಹಾಗೂ ಮಕ್ಕಳ ಆಸ್ಪತ್ರೆ ಪ್ರತ್ಯೇಕವಾಗಿ ನಿರ್ಮಿಸಲು ಮಂಜೂರಾತಿ ದೊರೆತಿದೆ ಎಂದು ಮೂಲಗಳು ತಿಳಿಸಿವೆ.

‘ರಾಮದುರ್ಗ ಆಸ್ಪತ್ರೆಯಲ್ಲಿ 6 ಜನ ವೈದ್ಯರಿದ್ದಾರೆ. ಇನ್ನೂ ವೈದ್ಯರ ಕೊರತೆ ಇದೆ’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ಹೇಳಿದರು.

**

ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗಾಗಿ ಪ್ರತ್ಯೇಕ ವಿಭಾಗವಿದೆ. 30 ಹಾಸಿಗೆಗಳ ಸೌಲಭ್ಯವಿದ್ದು, ಪ್ರತಿ ತಿಂಗಳು 40–50 ಹೆರಿಗೆಗಳು ಆಗುತ್ತವೆ.
-ಡಾ.ಭಾರತಿ ಕೋಣಿ, ಮುಖ್ಯ ವೈದ್ಯಾಧಿಕಾರಿ

**

ಗೋಕಾಕದ ಸರ್ಕಾರಿ ಆಸ್ಪತ್ರೆ ಅದರಲ್ಲೂ ಹೆರಿಗೆ ವಿಭಾಗ ಸಂಪೂರ್ಣ ಮೇಲ್ದರ್ಜೆಗೇರಿದೆ. ಮಹಿಳೆಯರಿಗೆ ಔಷಧಿ, ಉಪಚಾರ ನೀಡಲಾಗುತ್ತಿದೆ.
-ಡಾ.ಎಂ.ಎಸ್. ಕೊಪ್ಪದ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ, ಗೋಕಾಕ

**

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವಿಭಾಗ ದಲ್ಲಿ 240 ಹಾಗೂ ಚಿಕ್ಕಮಕ್ಕಳ ಚಿಕಿತ್ಸೆಗೆ 90 ಹಾಸಿಗೆಗಳಿವೆ. ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ.
-ಡಾ.ವಿನಯ ದಾಸ್ತಿಕೊಪ್ಪ, ವೈದ್ಯಕೀಯ ನಿರ್ದೇಶಕ, ಜಿಲ್ಲಾಸ್ಪತ್ರೆ

**

ಜಿಲ್ಲಾಸ್ಪತ್ರೆ, 9 ತಾಲ್ಲೂಕು ಆಸ್ಪತ್ರೆಗಳು, 16 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 84 ಆಸ್ಪತ್ರೆಗಳಲ್ಲಿ ಹೆರಿಗೆಗೆ ಸೌಲಭ್ಯವಿದೆ. -ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ, ಬೆಳಗಾವಿ

(ಪ್ರಜಾವಾಣಿ ತಂಡ: ಎಂ.ಮಹೇಶ, ಪ್ರಸನ್ನ ಕುಲಕರ್ಣಿ, ಪ್ರದೀಪ ಮೇಲಿನಮನಿ, ಸುಧಾಕರ ತಳವಾರ, ರವಿ ಎಂ. ಹುಲಕುಂದ, ಬಸವರಾಜ ಶಿರಸಂಗಿ, ಬಾಲಶೇಖರ ಬಂದಿ, ಚನ್ನಪ್ಪ ಮಾದರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT