ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ದರ ಏರಿಕೆಯಿಂದ ಕಂಗಾಲು; ಪರ್ಯಾಯಗಳತ್ತ ದಾಪುಗಾಲು

ಬ್ಯಾಟರಿಚಾಲಿತ ಸ್ಕೂಟರ್‌ಗಳತ್ತ ಗ್ರಾಹಕರ ಚಿತ್ತ
Last Updated 6 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಪೆಟ್ರೋಲ್ ಹಾಗೂ ಡೀಸೆಲ್‌ ದರ ಗಗನಕ್ಕೇರುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ. ತೈಲ ಬಳಕೆಯ ಅನಿವಾರ್ಯತೆ ತಪ್ಪಿಸಿಕೊಳ್ಳುವುದಕ್ಕಾಗಿ ಪರ್ಯಾಯ ಮಾರ್ಗಗಳತ್ತ ದಾಪುಗಾಲು ಇಡುತ್ತಿರುವುದು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಂಡುಬರುತ್ತಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಎಕ್ಸೈಸ್ ಸುಂಕ ಮತ್ತು ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ಇಳಿಕೆ ಮಾಡಿದೆ. ಇದರಿಂದ ಕೊಂಚ ದರ ತಗ್ಗಿದೆ. ಆದರೆ, ಹಿಂದೆಂದೂ ಕಂಡರಿಯದ ರೀತಿಯಲ್ಲಿ ಆಗಿರುವ ದರ ಏರಿಕೆಯು, ಜನರನ್ನು ಪರ್ಯಾಯ ಇಂಧನ ಬಳಕೆಯ ವಾಹನಗಳತ್ತ ಗಮನಹರಿಸುವಂತೆ ಮಾಡಿದೆ. ವೆಚ್ಚ ತಗ್ಗಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.

ಬೇಡಿಕೆ ಕಂಡುಬಂದಿದೆ
ಇತ್ತೀಚೆಗೆ, ಬ್ಯಾಟರಿಚಾಲಿತ ದ್ವಿಚಕ್ರವಾಹನಗಳಿಗೆ ಬೇಡಿಕೆ ಕಂಡುಬರುತ್ತಿದೆ. ಅಲ್ಲಲ್ಲಿ ಇಂತಹ ಮಳಿಗೆಗಳು ಕಾರ್ಯಾರಂಭ ಮಾಡಿವೆ. ನಿತ್ಯವೂ ಹಲವರು ಈ ವಾಹನ, ದರದ ಬಗ್ಗೆ ವಿಚಾರಿಸುತ್ತಿದ್ದಾರೆ. ಹತ್ತಾರು ಸ್ಕೂಟರ್‌ಗಳು ಸಂಚರಿಸುವುದು ಕಾಣಸಿಗುತ್ತಿವೆ. ಬಹುತೇಕರು, ವ್ಯವಸ್ಥೆಯನ್ನು ಶಪಿಸುತ್ತಾ ದರ ಏರಿಕೆಯ ನಡುವೆಯೂ ಪೆಟ್ರೋಲ್, ಡೀಸೆಲ್‌ ಬೇಡುವ ವಾಹನಗಳಲ್ಲೆ ಅನಿವಾರ್ಯವಾಗಿ ಸಂಚರಿಸುತ್ತಿದ್ದಾರೆ. ಕೆಲವರು, ಬಸ್, ಆಟೊರಿಕ್ಷಾ ಮೊದಲಾದ ಸಮೂಹ ಸಾರಿಗೆ ವ್ಯವಸ್ಥೆಯ ಮೇಲೆ ಅವಲಂಬನೆ ಆಗಿದ್ದಾರೆ.

ಅಲ್ಲಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಮಳಿಗೆಗಳು ಆರಂಭವಾಗಿವೆ. ಗ್ರಾಮೀಣ ಪ್ರದೇಶದಲ್ಲೂ ಜನರು ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೊರೆ ಹೋಗುತ್ತಿದ್ದಾರೆ. ಮುನವಳ್ಳಿಯಂತಹ ಪಟ್ಟಣದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ ಮಾರುವ ಮಳಿಗೆಗಳು ತಲೆ ಎತ್ತಿವೆ. ಅವುಗಳ ಬೆಲೆ ಒಂದು ಲಕ್ಷ ರೂಪಾಯಿ ಆಸುಪಾಸಿನಲ್ಲಿದ್ದರೂ, ನಿರ್ವಹಣೆಯ ಖರ್ಚು ತಗ್ಗಲೆಂದು ಅವುಗಳ ಖರೀದಿಗೆ ಮುಂದಾಗುತ್ತಿದ್ದಾರೆ.

ಉತ್ತೇಜನಕ್ಕೆ ಕ್ರಮ
ಪೆಟ್ರೋಲ್ ಅಥವಾ ಡೀಸೆಲ್‌ ಮೇಲಿನ ಅವಲಂಬನೆ ತಗ್ಗಿಸಲು ಮತ್ತು ಬ್ಯಾಟರಿಚಾಲಿತ ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ನಗರದ ಕೆಎಲ್‌ಎಸ್‌ ಸಂಸ್ಥೆಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ಪರಿಸರ ಸ್ನೇಹಿ ಕ್ರಮ ಕೈಗೊಂಡಿದೆ. ಕ್ಯಾಂಪಸ್‌ನಲ್ಲಿ ‘ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ’ ಸ್ಥಾಪಿಸಿದೆ. ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ವಿಭಾಗದಿಂದ ಈ ‘ಹಸಿರು ಉಪಕ್ರಮ’ ಕೈಗೊಳ್ಳಲಾಗಿದೆ.

ದ್ವಿಚಕ್ರವಾಹನಗಳು ಹಾಗೂ ಕಾರುಗಳನ್ನು ಚಾರ್ಜ್‌ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. 12 ಟರ್ಮಿನಲ್‌ಗಳನ್ನು ಮಾಡಲಾಗಿದೆ. ಏಕಕಾಲಕ್ಕೆ 12 ದ್ವಿಚಕ್ರವಾಹನ ಅಥವಾ ಕಾರುಗಳನ್ನು ಚಾರ್ಜ್ ಮಾಡಬಹುದಾಗಿದೆ. ಪ್ರಸ್ತುತ ಆ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬ್ಯಾಟರಿಚಾಲಿತ 40 ದ್ವಿಚಕ್ರವಾಹನಗಳು ಹಾಗೂ 4 ಕಾರುಗಳನ್ನು ಬಳಸುತ್ತಿದ್ದಾರೆ. ಇದು ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲೂ ಸಹಕಾರಿಯಾಗಿದೆ.

ರಿಕ್ಷಾ ಚಾಲಕರಿಗೆ ಸಂಕಷ್ಟ
ಆಟೊರಿಕ್ಷಾ ಚಾಲಕರು ಎಲ್‌‍ಪಿಜಿ ಕಿಟ್‌ಗಳ ಆಳವಡಿಕೆಗೆ ಮುಂದಾಗುತ್ತಿದ್ದಾರೆ. ‘ಡೀಸೆಲ್‌ ಬೆಲೆ ಗಗನಕ್ಕೇರಿದೆ. ಅದಕ್ಕೆ ತಕ್ಕಂತೆ ಹೆಚ್ಚಿನ ಪ್ರಯಾಣಶುಲ್ಕ ಕೊಡುವುದಕ್ಕೆ ಗ್ರಾಹಕರು ತಯಾರಿಲ್ಲ. ಆದ್ದರಿಂದ ನಾವು ನಷ್ಟ ಅನುಭವಿಸುತ್ತಿದ್ದೇವೆ. ಕೋವಿಡ್ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಮಗೆ ಡೀಸೆ‌ಲ್ ದರ ಏರಿಕೆಯು ಭಾರಿ ತೊಂದರೆ ತಂದೊಡ್ಡಿದೆ’ ಎಂದು ಅವರು ಅಳಲು ತೋಡಿಕೊಂಡರು. ಟ್ಯಾಕ್ಸಿ ಚಾಲಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಕಾರ್‌ಗಳ ಚಾರ್ಜಿಂಗ್‌ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪಿಸಿದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅವಲಂಬನೆ ತಗ್ಗಿಸಬಹುದು’ ಎನ್ನುತ್ತಾರೆ ಮುನವಳ್ಳಿಯ ನಿವಾಸಿ ಕಿರಣ ಯಲಿಗಾರ.

‘ನಾನು ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಖರೀದಿಸಿದ್ದೇನೆ. 5 ತಾಸು ಚಾರ್ಜ್‌ ಮಾಡಿದರೆ 120 ಕಿ.ಮೀ.ವರೆಗೂ ಕ್ರಮಿಸಬಹುದು. ಪೆಟ್ರೋಲ್‌ ದರ ಏರುತ್ತಿರುವುದರಿಂದಾಗಿ, ಎಲೆಕ್ಟ್ರಿಕ್ ಸ್ಕೂಟರ್‌ ಮೊರೆ ಹೋಗಿದ್ದೇನೆ’ ಎಂದು ಮುನವಳ್ಳಿಯ ವಿಷ್ಣು ಬೆಟಗೇರಿ ಎನ್ನುವವರು ತಿಳಿಸಿದರು.

ಅನಿವಾರ್ಯವಿದ್ದಾಗ ಮಾತ್ರ
ತೆಲಸಂಗ:
ಪೆಟ್ರೋಲ್ ಹಾಗೂ ಡೀಸೆಲ್ ದರ ಗಗನಕ್ಕೇರುತ್ತಿದ್ದಂತೆಯೇ ಜನರು ಕಾರು ಅಥವಾ ದ್ವಿಚಕ್ರವಾಹನಗಳನ್ನು ಅನಗತ್ಯವಾಗಿ ಬಳಸುವುದಕ್ಕೆ ಬ್ರೇಕ್ ಹಾಕಿದ್ದಾರೆ. ತೀರಾ ಅನಿವಾರ್ಯವಿದ್ದಾಗ ಮಾತ್ರ ಬಳಸುವುದು ಕಂಡುಬರುತ್ತಿದೆ. ಸಾರಿಗೆ ಸಂಸ್ಥೆಯ ಬಸ್‌ ಅವಲಂಬಿಸಿದ್ದಾರೆ.

‘ಹೊಲ–ಗದ್ದೆಗಳಿಗೆ ತೆರಳಲು ರೈತರು ಹಿಂದೆ ವಾಹನಗಳನ್ನು ಬಳಸುತ್ತಿದ್ದರು. ಆದರೆ, ತೈಲ ದರ ಏರಿಕೆಯಿಂದಾಗಿ ರೈತರು ಸ್ಕೂಟರ್ ಬದಲಿಗೆ ಸೈಕಲ್‌ ಬಳಸುತ್ತಾರೆ. ಇಲ್ಲವೇ ನಡೆದುಕೊಂಡೇ ಹೋಗುತ್ತಿದ್ದಾರೆ. ಸಾಮಾನ್ಯ ಜನರ ಪರಿಸ್ಥಿತಿಯನ್ನು ಅರಿಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಜನರು ಪಕ್ಷಾತೀತವಾಗಿ ಶಪಿಸುತ್ತಿದ್ದಾರೆ’ ಎನ್ನುತ್ತಾರೆ ತೆಲಸಂಗದ ಸರ್ವೋದಯ ಸಹಕಾರಿ ಸಂಘದ ಅಧ್ಯಕ್ಷಸುರೇಶ ಖೊಳಂಬಿ.

‘ವಾಹನಗಳು ಮತ್ತು ವಿವಿಧ ಯಂತ್ರಗಳ ಬಳಕೆಯ ಮೇಲೆ ಜನರು ಅವಲಂಬಿತರಾಗಿದ್ದಾರೆ. ದರ ಏರಿಕೆಯಾದರೂ ನಿತ್ಯ ಬಳಕೆ ಅನಿವಾರ್ಯ. ಪೆಟ್ರೋಲ್‌ಗೆ ₹ 100ಕ್ಕಿಂತ ಹೆಚ್ಚಿನ ಬೆಲೆ ಆದಾಗಿನಿಂದ ಮಾರಾಟದಲ್ಲಿ ವ್ಯತ್ಯಾಸವಾಗಿದೆ’ ಎಂದು ಮೋರೆ ಪೆಟ್ರೋಲ್ ಬಂಕ್ ಮಾಲೀಕ ವಾಸುದೇವ ಮೋರೆ ಪ್ರತಿಕ್ರಿಯಿಸಿದರು.

ಜೀವನ ದುಸ್ತರ
ರಾಯಬಾಗ:
ತಾಲ್ಲೂಕಿನಲ್ಲೂ ಕೆಲವರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ಅಂತಹ ವಾಹನಗಳು ಲಭ್ಯವಾಗುತ್ತಿವೆ. ಸಾರಿಗೆ ಬಸ್‌ಗಳನ್ನು ಅವಲಂಬಿಸುವುದೂ ಕಂಡುಬಂದಿದೆ.

‘ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾಗುತ್ತಿದೆ. ಇದರಿಂದ ಬೇಸತ್ತು ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸಿದ್ದೇನೆ. ಇದರಿಂದ ಹಣ ಉಳಿತಾಯ ಆಗುತ್ತದೆ ಮತ್ತು ಪರಿಸರ ಮಾಲಿನ್ಯವನ್ನೂ ತಡೆಯಬಹುದು’ ಎಂದು ರಾಯಬಾಗದ ನಿವಾಸಿ ಬಸವರಾಜ ಕಿರಸೂರ ತಿಳಿಸಿದರು.

ಅನಿವಾರ್ಯವಾಗಿದೆ
ಚನ್ನಮ್ಮನ ಕಿತ್ತೂರು:
ಗ್ರಾಮಾಂತರ ಪ್ರದೇಶದ ದ್ವಿಚಕ್ರವಾಹನ, ಕಾರು ಮತ್ತು ಸರಕು ವಾಹನಗಳಿಗೆ ಪೆಟ್ರೋಲ್ ಹಾಗೂ ಡಿಸೇಲ್ ತುಂಬಿಸಿಕೊಳ್ಳುವುದು ಅನಿವಾರ್ಯವಾಗಿದೆ. ಟಂಟಂ, ಸರಕು ವಾಹನಗಳವರು ತೈಲ ದರ ಏರಿಕೆಯ ಹೊರೆಯನ್ನು ಸಾರ್ವಜನಿಕರ ಮೇಲೆಯೇ ಹಾಕುತ್ತಿವೆ. ದ್ವಿಚಕ್ರವಾಹನ ಸವಾರರಿಗೂ ಬೇರೆ ಮಾರ್ಗಗಳಿಲ್ಲ. ಎಲೆಕ್ಟ್ರಿಕ್ ವಾಹನ ಖರೀದಿಸಬೇಕೆಂದರೆ ಕನಿಷ್ಠ ₹99ಸಾವಿರ ವ್ಯಯಿಸಬೇಕು. ಅಷ್ಟು ದುಡ್ಡು ಹೊಂದಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಬಹುತೇಕರು. ಕೆಲವರು ಬ್ಯಾಟರಿಚಾಲಿತ ವಾಹನಗಳ ಮೊರೆ ಹೋಗುತ್ತಿರುವುದು ಕಂಡುಬಂದಿದೆ.

ಬೇಡಿಕೆ ಕಂಡುಬಂದಿದೆ
ಸವದತ್ತಿ:
ತೈಲ ಬೆಲೆ ಏರಿಕೆ ಪರಿಣಾಮ ಜನರು ವಾಹನಗಳ ಬಳಕೆ ತಗ್ಗಿಸಿದ್ದಾರೆ. ಸಮೀಪದ ಸ್ಥಳಗಳಿಗೆ ನಡೆದುಕೊಂಡೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಎಲ್‍ಪಿಜಿ ಪಂಪ್‌ ಇಲ್ಲ. ಅಂತಹ ವಾಹನ ಬಳಸುವವರು ಇಂಧನಕ್ಕಾಗಿ ಧಾರವಾಡ ಜಿಲ್ಲೆಗೆ ಹೋಗುತ್ತಾರೆ.

‘ಸವದತ್ತಿಯಲ್ಲಿ ಎರಡು ಎಲೆಕ್ಟ್ರಿಕ್ ವಾಹನಗಳ ಮಳಿಗೆ ಇವೆ. ಹೆಚ್ಚು ಮೈಲೇಜ್ ನೀಡುವ ಸ್ಕೂಟರ್‌ಗಳಿಗೆ ಬೇಡಿಕೆ ಇದೆ’ ಎಂದು ಹೀರೊ ಎಲೆಕ್ಟ್ರಿಕ್ ಮಳಿಗೆ ಮಾಲೀಕ ಅರುಣ ಶಿರಸಂಗಿ ಹೇಳಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೈಲ ದರವನ್ನು ಮತ್ತಷ್ಟು ಇಳಿಸಬೇಕು. ಬೆಲೆ ಏರಿಕೆಗೆ ನಿಯಂತ್ರಣವೇ ಇಲ್ಲದಂತಾಗಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸುತ್ತಾರೆ ಹಿರೇಕುಂಬಿ ಗ್ರಾ.ಪಂ. ಸದಸ್ಯ ಗಂಗಯ್ಯ ಅಮೋಘಿಮಠ.

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ಅನಂದ ಮನ್ನಿಕೇರಿ, ಜಗದೀಶ ಖೋಬ್ರಿ, ಏಕನಾಥ ಅಗಸಿಮನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT