ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಕ್ಕಳ ಮುದ್ದಿನ ಬೆಕ್ಕು ರಕ್ಷಿಸಿದ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ 

Last Updated 24 ಜುಲೈ 2022, 4:34 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಖಡೇಬಜಾರ್ ನಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಬಾಲ್ಕನಿ ತುದಿಯಲ್ಲಿ ಸಿಕ್ಕಿಕೊಂಡಿದ್ದ ಬೆಕ್ಕನ್ನು ಕಾಪಾಡಲು ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಹಾಗೂ ಪೊಲೀಸರೇ ಬರಬೇಕಾಯಿತು!

ಹೌದು. ಖಡೇಬಜಾರಿನಲ್ಲಿ ವಾಸವಾಗಿರುವ ಕುಟುಂಬದ ಮಕ್ಕಳು ಸಾಕಿದ ಮುದ್ದಿನ ಬೆಕ್ಕು, ಶನಿವಾರ ರಾತ್ರಿ ಕಟ್ಟಡದ ಮೂರನೇ ಅಂತಸ್ತಿನ ಬಾಲ್ಕನಿಯ ತುದಿಗೆ ಇಳಿದಿತ್ತು. ಅತ್ತ ಮರಳಿ ಬಾಲ್ಕನಿಯ ಕಿಟಕಿಗೂ ನೆಗೆಯಲಾಗದೇ, ಇತ್ತ ಕೆಳಗೂ ಇಳಿಯಲಾಗದೆ ಪ್ರಾಣ ಭಯದಿಂದ ಪರದಾಡುತ್ತಿತ್ತು.

ಎರಡು ತಾಸು 'ಮ್ಯಾಂವ್ ಗುಡುತ್ತ...' ಅತ್ತಿಂದಿತ್ತ ಅಲ್ಲೇ ಸುಳಿದಾಡಿತು.

ಬೆಕ್ಕನ್ನು ಕಾಪಾಡುವಂತೆ ಮಕ್ಕಳು ಪಾಲಕರ ಬಳಿ ಹಠ ಹಿಡಿದರು. ಆಗ ಬಾಲ್ಕನಿಗೆ ಬಂದ ಅವಧೂತ ತುಬವೇಕರ್ ಎನ್ನುವವರು ಬೆಕ್ಕಿನ ರಕ್ಷಣೆಗೆ ಯತ್ನಿಸಿದರು. ಹತ್ತಿರ ಹೋಗುತ್ತಿದ್ದಂತೆ ಅದು ಭಯದಿಂದ ಇನ್ನೊಂದು ಕಡೆ ಜಿಗಿಯುತ್ತಿತ್ತು. ಆಯತಪ್ಪಿದರೆ ಕೆಳಗೆ ಬೀಳಬಹುದು ಎಂದು ಅವಧೂತ ಅವರು ಸಾಹಸ ಕೈಬಿಟ್ಟರು.

ನಗರದಲ್ಲಿ ಪ್ರಾಣಿಗಳ ರಕ್ಷಣೆಗೆ ನಿಂತಿರುವ ಬೆಳಗಾವಿ ಅನಿಮಲ್ ವೆಲ್ಫೇರ್ ಅಸೋಸಿಯೇಷನ್ (BAWA)ಗೆ ಕರೆ ಮಾಡಲಾಯಿತು. ಈ ಎನ್.ಜಿ.ಒ. ಮುಖಂಡ ವರುಣ್ ಕರ್ಕನೀಸ್ ಹಾಗೂ ತಂಡದವರು ರಾತ್ರಿ 10ರ ಸುಮಾರಿಗೆ ಸ್ಥಳಕ್ಕೆ ಬಂದರು. ಕಟ್ಟಡದ ಮೇಲಿಂದ ಬೆಕ್ಕನ್ನು ತಳ್ಳಿ, ಕೆಳಗೆ ಬಟ್ಟೆಯಲ್ಲಿ ಹಿಡಿದು ಕಾಪಾಡಬಹುದು ಎಂದು ಕೆಲವರು ಮಾಡಿದ ಉಪಾಯ ಸಫಲವಾಗಲಿಲ್ಲ. ಅತ್ತ ಬಾಲ್ಕನಿಗೆ ಹತ್ತಿದಾಗಲೂ ಪ್ರಯತ್ನ ಸಾಧ್ಯವಾಗಲಿಲ್ಲ.

ಕೊನೆಗೆ ಅವರು ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದರು.

ಅಷ್ಟೊತ್ತಿಗೆ ಸ್ಥಳದಲ್ಲಿ ಹಲವು ಜನ ಸೇರಿದರು. ಬೆಕ್ಕನ್ನು ಹೇಗೆ ಕಾಪಾಡುತ್ತಾರೆ ನೋಡೇ ಬಿಡಬೇಕು ಎಂದು ಕಣ್ಣಿಟ್ಟು ನಿಂತರು. ಜನರನ್ನು ರಸ್ತೆ ಬದಿಗೆ ಕಳುಹಿಸಿದ ಪೊಲೀಸರು ಸಂಚಾರಕ್ಕೆ ಅನುವು ಮಾಡಿದರು.

ಅಗ್ನಿಶಾಮಕ ವಾಹನ ಸಮೇತ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಕ್ಕಿನ ರಕ್ಷಣೆಗೆ ಮುಂದಾದರು.

ಮೂರು ಅಂತಸ್ತಿನಷ್ಟು ಉದ್ದದ ಏಣಿ ಇಟ್ಟು ಅದರ ಮೇಲೆ ಒಬ್ಬರು ಹತ್ತಿದರು, ಇನ್ನೊಬ್ಬರು ಬಾಲ್ಕನಿಯಲ್ಲಿ ನಿಂತರು. ಆಗ ಬೆಕ್ಕು ಓಡಿ ಬಂದು ಏಣಿ ಮೇಲೆ ನಿಂತಿದ್ದ ಸಿಬ್ಬಂದಿ ಕೈಗೆ ಸಿಕ್ಕಿತು.

ಈ ದೃಶ್ಯ ನೋಡುತ್ತಿದ್ದಂತೆ ಸುತ್ತ ಸೇರಿದ್ದ ಜನ ಚಪ್ಪಾಳೆ ತಟ್ಟಿ ಕೂಗಾಡಿ ಖುಷಿ ವ್ಯಕ್ತಪಡಿಸಿದರು.

ಮುದ್ದಿನ ಬೆಕ್ಕು ಎತ್ತಿಕೊಂಡು ಮಕ್ಕಳು ಕುಣಿದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT