ಶುಕ್ರವಾರ, ಆಗಸ್ಟ್ 6, 2021
27 °C
ಮಳೆ ಮಧ್ಯೆಯೂ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಸಮೀಕ್ಷೆ

ಪ್ರತಿರೋಧಕ್ಕೂ ಜಗ್ಗದ ಕೊಳವೆ ಸದ್ದು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪರಿಸರವಾದಿಗಳ ತೀವ್ರ ವಿರೋಧವನ್ನೂ ಲೆಕ್ಕಿಸದೆ ಮಳೆಯ ಮಧ್ಯೆಯೇ ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆಯ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ.

ಕೊರೊನಾ ಕಾರಣಕ್ಕಾಗಿ ವಿವಿಧ ಪರಿಸರ ಸಂಘಟನೆಯವರು ಗುಂಪುಗೂಡಿ ಪ್ರತಿಭಟನೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕಾಗಿ ಪತ್ರ ಚಳವಳಿ, ಸರ್ಕಾರಕ್ಕೆ ಮನವಿ ಸಲ್ಲಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಭೌತಿಕ ಪ್ರತಿರೋಧ ಇಲ್ಲದ ಕಾರಣಕ್ಕೆ ತಡೆ ಇಲ್ಲದೇ ಸಮೀಕ್ಷಾ ಕಾರ್ಯ ಮುಂದುವರಿದಿದೆ.

ಲಾರಿಗಳು ಆಯಕಟ್ಟಿನಜಾಗಗಳಲ್ಲಿ ಯಂತ್ರಗಳನ್ನು ಇಳಿಸಿವೆ. ಕಾರ್ಮಿಕರು ದಟ್ಟ ಕಾನನದ ಒಳಗೆ ಯಂತ್ರಗಳನ್ನು ಹೊತ್ತು ಸಾಗುತ್ತಿದ್ದಾರೆ. ಶರಾವತಿ ನದಿ ಕೊಳ್ಳದ ಸೂಕ್ಷ್ಮ ಜೀವ ಪರಿಸರದ ಸಿಂಗಳೀಕ ಸಂರಕ್ಷಣಾ ವಲಯದಲ್ಲೂ ಭೂಗರ್ಭದಲ್ಲಿ ಅರ್ಧ ಕಿ.ಮೀ. ರಂಧ್ರಗಳನ್ನು ಕೊರೆಯಲಾಗುತ್ತಿದೆ. ಯಂತ್ರಗಳ ಸದ್ದಿಗೆ ಪ್ರಾಣಿ, ಪಕ್ಷಿಗಳು ಬೆಚ್ಚಿವೆ.

ಜೋಗ ಜಲಪಾತದ ಸಮೀಪ ದಟ್ಟ ಅರಣ್ಯದ ತಲಕಳಲೆ, ಗೇರುಸೊಪ್ಪಜಲಾಶಯಗಳ ಮಧ್ಯೆ 800 ಎಕರೆ ಅರಣ್ಯ ಪ್ರದೇಶದಲ್ಲಿ ನೆಲಮಟ್ಟದಿಂದ ಸುಮಾರು 300 ಅಡಿ ಆಳದಲ್ಲಿ ₹ 6 ಸಾವಿರ ಕೋಟಿ ವೆಚ್ಚದ ಜಲ ವಿದ್ಯುದಾಗಾರ ನಿರ್ಮಾಣಕ್ಕಾಗಿ ಸಮೀಕ್ಷೆ ನಡೆಯುತ್ತಿದೆ. ಪ್ರಸ್ತುತ ಮಣ್ಣಿನ ಪರೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ.

ವಿದೇಶದಲ್ಲಿ ಹುಲಿಯೊಂದಕ್ಕೆ ಕೊರೊನಾ ಸೋಂಕು ದೃಢಪಟ್ಟ ನಂತರ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಮೃಗಾಲಯ, ಅರಣ್ಯ ಪ್ರದೇಶದ ಒಳಗೆ ಸುರಕ್ಷತಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಅನಗತ್ಯವಾಗಿ ಮಾನವರು ಅರಣ್ಯ ಪ್ರವೇಶಿಸದಂತೆ ತಡೆಯಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಶರಾವತಿ ಕೊಳ್ಳ ಹುಲಿ ಸಂರಕ್ಷಿತ ಅಭಯಾರಣ್ಯ. ಇಂತಹಪ್ರದೇಶದಲ್ಲಿ ಕಾರ್ಮಿಕರಿಗೆ ಅರಣ್ಯಪ್ರವೇಶಿಸಲು ಅರಣ್ಯ ಇಲಾಖೆಯೇ ಅನುಮತಿ ನೀಡಿರುವುದು ಆತಂಕ ಮೂಡಿಸಿದೆ.

*
ಪ್ರಾಣಿಗಳ ಹಿತ ದೃಷ್ಟಿಯಿಂದ ನಾವು ಅರಣ್ಯ ಪ್ರವೇಶಿಸಿಲ್ಲ. ಇದನ್ನು ಸರ್ಕಾರ ಹೋರಾಟಗಾರರ ದೌರ್ಬಲ್ಯ ಎಂದು ಪರಿಗಣಿಸಬಾರದು
–ಅಖಿಲೇಶ್ ಚಿಪ್ಪಳಿ, ಪರಿಸರ ಹೋರಾಟಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು