ಮಂಗಳವಾರ, ಸೆಪ್ಟೆಂಬರ್ 22, 2020
26 °C

ಮಿಂಚಿನ ಈಜುಗಾರ್ತಿ ಜಾಹ್ನವಿ ಪೆಡ್ನೇಕರ

ಮಾಲತೇಶ ಮಟಿಗೇರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಹಲವು ವರ್ಷಗಳ ಹಿಂದೆ ಅಜ್ಜಿಯ ಬಯಕೆ ಮತ್ತು ಕನಸಿನಂತೆ ಈಜು ಕಲಿಯಲು ಆರಂಭಿಸಿದ ಇಲ್ಲಿನ ಚನ್ನಮ್ಮ‌ನಗರ‌ ನಿವಾಸಿ ಜಾಹ್ನವಿ ಪೆಡ್ನೇಕರ, ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಕುಂದಾನಗರಿ‌ಯ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ.

9 ವರ್ಷಗಳ ಹಿಂದೆ ಜಾಹ್ನವಿ ಅಜ್ಜಿ ಮಾಧುರಿ ಪೆಡ್ನೇಕರ ಮೊಮ್ಮಗಳಿಗೆ ಈಜಿನ ಪ್ರೇರಣೆ ನೀಡಿದರು. ಆರೋಗ್ಯದ ದೃಷ್ಟಿಯಿಂದ ಸ್ವಿಮಿಂಗ್ ಮಾಡುವುದು ಉತ್ತಮ ಎಂದು ತಿಳಿಸಿಕೊಟ್ಟಿದ್ದರು. ಇದರಿಂದಾಗಿ ಜಾಹ್ನವಿ ಈಜು ಕಲಿಯಲು ಆರಂಭಿಸಿದರು. 4 ವರ್ಷ ವಯಸ್ಸಿನವಳಿದ್ದಾಗ (2009ರಲ್ಲಿ) ಮೀನಿನಂತೆ ಸರಾಗವಾಗಿ ಈಜುವುದನ್ನು ಕರಗತ ಮಾಡಿಕೊಂಡ ಆಕೆಯ ಚುರುಕುತನ ಗಮನಿಸಿದ ಅಜ್ಜಿ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.

ವಿವಿಧೆಡೆ ಸ್ಪರ್ಧೆ: ನಾಡಹಬ್ಬ ದಸರಾ ಪ್ರಯುಕ್ತ ಮೈಸೂರಿನಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಜಾಹ್ನವಿ 800 ಮೀಟರ್‌ ಫ್ರೀಸ್ಟೈಲ್‌ನಲ್ಲಿ ಚಿನ್ನ, 4x100 ಮೀಟರ್‌ ಮೆಡ್ಲೆ ರಿಲೇ, ಫ್ರೀಸ್ಟೈಲ್ ರಿಲೇಯಲ್ಲಿ ಕಂಚಿನದ ಪದಕಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ 2018ರಲ್ಲಿ ನಡೆದ ಸಿಲ್ವರ್ ಜ್ಯುಬಿಲಿ ಈಜು ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನ ಹಾಗೂ 4 ಬೆಳ್ಳಿ, 2 ಕಂಚಿನ ಪದಗಳನ್ನು ಪಡೆದಿದ್ದಾರೆ. ಈಜಿನಲ್ಲಿ ಭರವಸೆ ಮೂಡಿಸಿದ್ದಾರೆ.

2011ರಿಂದ 2019ರವರೆಗೆ 26 ಚಿನ್ನ, 15 ಬೆಳ್ಳಿ, 8 ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ. 2006ರಲ್ಲಿ ಗುಜರಾತ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಮತ್ತಷ್ಟು ಸ್ಪರ್ಧೆಗಳು ಹಾಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕು ಎಂಬ ಕನಸಿನೊಂದಿಗೆ ಮುನ್ನುಗ್ಗುತ್ತಿದ್ದಾರೆ; ತಾಲೀಮು ಮಾಡುತ್ತಿದ್ದಾರೆ.

ಮೊಮ್ಮಗಳ ಭವಿಷ್ಯ ನಿರ್ಮಾಣಕ್ಕೆ ಪಣ ತೊಟ್ಟು ಅಜ್ಜಿ ಬೆನ್ನಿಗೆ ನಿಂತಿದ್ದಾರೆ. ಮೊಮ್ಮಗಳ ಪ್ರತಿ ಹೆಜ್ಜೆಯಲ್ಲೂ ಜೊತೆಗಿರುತ್ತಾರೆ. 2011ರಿಂದ ಅವರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ‘ಅಜ್ಜಿ ಪ್ರೋತ್ಸಾಹವೇ ನನ್ನ ಮಗಳು ಪ್ರಶಸ್ತಿಗಳನ್ನು ಗೆಲ್ಲಲು ಕಾರಣವಾಗಿದೆ. ಆಕೆ ಯಾವ ಬಟ್ಟೆ ಧರಿಸಬೇಕು, ಯಾವ ಆಹಾರ ಸೇವಿಸಬೇಕು ಎನ್ನುವುದರ ಕುರಿತು ಅಜ್ಜಿಯೇ ಮಾರ್ಗದರ್ಶನ ನೀಡುತ್ತಾರೆ. ಸ್ಪರ್ಧೆಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ; ಪ್ರೋತ್ಸಾಹಿಸುತ್ತಾರೆ’ ಎನ್ನುತ್ತಾರೆ ಜಾಹ್ನವಿ ತಂದೆ ವಿಶಾಲ ಪೆಡ್ನೇಕರ.

ವಿಶಾಲ–ವೈಷ್ಣವಿ ದಂಪತಿ ಮಗಳಾದ ಜಾಹ್ನವಿ, ಜೈನ್ ಹೆರಿಟೇಜ್ ಸ್ಕೂನ್‌ನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಓದಿನಲ್ಲೂ ಮುಂದಿದ್ದಾಳೆ. ಬೆಳಿಗ್ಗೆ 6ರಿಂದ 7.30ರವರೆಗೆ ಈಜು ಅಭ್ಯಾಸ ಮಾಡುತ್ತಾರೆ. ಅಕ್ಷಯಸಾಗರ ಪ್ರಸಾದ್ ಹಾಗೂ ಉಮೇಶ ಕಲಘಟಗಿ ಆಕೆಯ ಕೋಚ್ ಆಗಿದ್ದಾರೆ. ಶಾಲೆಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಫುಟ್‌ಬಾಲ್‌ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳಲ್ಲೂ ಕ್ರಿಯಾಶೀಲವಾಗಿ ಭಾಗವಹಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.