ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌ನವರಿಗೆ ಜಾಮೀನು: ಶಿವಸೇನಾ ರ‍್ಯಾಲಿ ರದ್ದು

Last Updated 22 ಜನವರಿ 2022, 12:56 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಶಿವಸೇನಾ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರ ಮೇಲೆ ದಾಖಲಿಸಿರುವ ದೇಶದ್ರೋಹದ ಪ್ರಕರಣ ವಾಪಸ್ ಪಡೆಯುವಂತೆ ಆಗ್ರಹಿಸಿ ಮಹಾರಾಷ್ಟ್ರದ ಶಿವಸೇನಾ ಕಾರ್ಯಕರ್ತರು ಕೊಲ್ಹಾಪುರದಿಂದ ಪಾದಯಾತ್ರೆ (ರ‍್ಯಾಲಿ) ನಡೆಸಿ, ಬೆಳಗಾವಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದರು.

‘ಶನಿವಾರ ಮುತ್ತಿಗೆ ಹಾಕಲಾಗುವುದು’ ಎಂದು ಆ ಸಂಘಟನೆಯ ಮುಖಂಡರು ಮಹಾರಾಷ್ಟ್ರದಲ್ಲಿ ತಿಳಿಸಿದ್ದರು.

‘ನಮ್ಮ ಕಾರ್ಯಕರ್ತರಿಗೆ ಜಾಮೀನು ಮಂಜೂರಾಗುತ್ತಿದೆ. ನಮ್ಮ ಹೋರಾಟಕ್ಕೆ ಕರ್ನಾಟಕ ಸರ್ಕಾರ ಮೆತ್ತಗಾಗಿದೆ. ಪ್ರತಿಭಟನೆಗೆ ಬೆದರಿ ಜಾಮೀನು ಸಿಗುವಂತೆ ನೋಡಿಕೊಂಡಿದೆ’ ಎಂಬಿತ್ಯಾದಿಯಾಗಿ ಶಿವಸೇನಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದೆ ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ, ನಗರದಲ್ಲಿ ಡಿ.17ರಂದು ತಡರಾತ್ರಿ ಹಮ್ಮಿಕೊಂಡಿದ್ದ ಪ್ರತಿಭಟನೆ ಬಳಿಕ ಹಲವೆಡೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಸರ್ಕಾರಿ ವಾಹನಗಳನ್ನು ಜಖಂಗೊಳಿಸಿದ್ದರು ಮತ್ತು ಡಿ.18ರ ನಸುಕಿನಲ್ಲಿ ಅನಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ್ದರು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 38 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಎಂಇಎಸ್ ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ ಮತ್ತು ಉಪಾಧ್ಯಕ್ಷ ಅಂಕುಶ ಕೇಸರಕರ ಅವರಿಗೆ ಖಡೇಬಜಾರ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಕ್ಕಿದೆ ಎನ್ನಲಾಗುತ್ತಿದೆ. ಉಳಿದವರಿಗೆ ಹಾಗೂ ಮಾರ್ಕೆಟ್, ಕ್ಯಾಂಪ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿಲ್ಲ. ಹೀಗಾಗಿ, ಅವರಿಗೆ ಸದ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಬಂಧಿತರಲ್ಲಿ ಶ್ರೀರಾಮಸೇನಾ ಹಿಂದೂಸ್ತಾನ ಸಂಘಟ‌ನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಕೂಡ ಸೇರಿದ್ದಾರೆ.

‘ಆರೋಪಿಗಳ ವಿರುದ್ಧ ದೇಶದ್ರೋಹದ ‍ಪ್ರಕರಣ ದಾಖಲಿಸಲಾಗಿತ್ತು. ಆದರೆ, ಆರೋಪ ಪಟ್ಟಿಯಲ್ಲಿ ಆ ಅಂಶವನ್ನು ಕೈಬಿಡಲಾಗಿತ್ತು. ಹೀಗಾಗಿ, ಜಾಮೀನು ಸಿಗುತ್ತಿದೆ ಎನ್ನಲಾಗುತ್ತಿದೆ. ಆರೋಪಿಗಳ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ಸಾರ್ವಜನಿಕ ನೆಮ್ಮದಿ ಭಂಗ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮೊದಲಾದ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT