ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಎಸ್‌ಎಲ್‌ಸಿ ಫಲಿತಾಂಶ | ಕನ್ನಡ ಮಾಧ್ಯಮದಲ್ಲಿ ಸಹನಾ, ಶ್ರುತಿ ಟಾಪರ್‌ಗಳು

Last Updated 10 ಆಗಸ್ಟ್ 2020, 11:56 IST
ಅಕ್ಷರ ಗಾತ್ರ

ಬೆಳಗಾವಿ: ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಚಿಕ್ಕೋಡಿಯ ಎಂ.ಕೆ. ಕವಟಗಿಮಠ ಕನ್ನಡ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ ಶಂಕರ ಕಾಮಗೌಡರ ಮತ್ತು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಘಟಪ್ರಭಾದ ಕೆ.ಆರ್. ಹುಕ್ಕೇರಿ ಪ್ರೌಢಶಾಲೆಯ ಶ್ರುತಿ ಬಸಗೌಡ ಪಾಟೀಲ 625ಕ್ಕೆ 623 ಅಂಕಗಳನ್ನು ಗಳಿಸಿ ಕನ್ನಡ ಮಾಧ್ಯಮದಲ್ಲಿ ರಾಜ್ಯದ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಹತ್ತರ ಪರೀಕ್ಷೆಯಲ್ಲಿ ಎತ್ತರದ ಸಾಧನೆ ಮಾಡಿ ಗಮನಸೆಳೆದಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ಉಡಿಕೇರಿಯ ಎಸ್.ಆರ್. ಪ್ರೌಢಶಾಲೆ ವಿದ್ಯಾರ್ಥಿ ವೀರಭದ್ರ ಕಲಭಾವಿ, ರಾಯಬಾಗ ತಾಲ್ಲೂಕಿನ ಹಾರೂಗೇರಿಯ ಪ್ರಗತಿ ಪ್ರೌಢಶಾಲೆಯ ದೀಪಾ ನಾಗನೂರ ತಲಾ 622 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಹನಾ ಸಾಧನೆ:ಸಹನಾಗೆ ಇಂಗ್ಲಿಷ್ ಹಾಗೂ ಸಮಾಜವಿಜ್ಞಾನದಲ್ಲಿ ತಲಾ 1 ಅಂಕ ಕಡಿಮೆಯಾಗಿದೆ. ಕನ್ನಡದಲ್ಲಿ 125ಕ್ಕೆ 125 ಸೇರಿ ಉಳಿದ ಎಲ್ಲ ವಿಷಯಗಳಲ್ಲೂ ಸಂಪೂರ್ಣ ಅಂಕಗಳನ್ನು ಗಳಿಸಿದ್ದಾರೆ. ಮೂಲತಃ ಚಿಕ್ಕೋಡಿ ತಾಲ್ಲೂಕಿನ ಕಬ್ಬೂರಿನ ಅವರು ಇವರು ಬ್ಯಾಂಕ್‌ ವ್ಯವಸ್ಥಾಪಕ ಶಂಕರ ಗೃಹಿಣಿ ಶೋಭಾ ದಂಪತಿಯ ಪುತ್ರಿ.

‘620ರ ಮೇಲೆ ಬರಬಹುದು ಎಂದು ನಿರೀಕ್ಷಿಸಿದ್ದೆ. ಇನ್ನೂ ಮೂರಂಕ ಜಾಸ್ತಿಯೇ ಬಂದಿದೆ. ತರಗತಿಯಲ್ಲಿ ಹೇಳಿಕೊಟ್ಟ ಪಾಠವನ್ನು ಮನೆಯಲ್ಲೂ ಚೆನ್ನಾಗಿ ಓದುತ್ತಿದ್ದೆ. ಕೊರೊನಾ ಕಾರಣದಿಂದ ಲಾಕ್‌ಡೌನ್‌ ಆದಾಗ ಹೆಚ್ಚಿನ ಸಮಯ ಸಿಕ್ಕಿತು. ಎಲ್ಲ ವಿಷಯಗಳನ್ನೂ ಮತ್ತೊಮ್ಮೆ, ಮಗದೊಮ್ಮೆ ಓದಿದ್ದೆ. ಪರೀಕ್ಷೆ ರದ್ದಾಗುವುದಿಲ್ಲ ಎಂಬ ನಿರೀಕ್ಷೆ ಇತ್ತು. ಕೊರೊನಾದಿಂದ ಅಂಜಿಕೆಯೇನೂ ಆಗಲಿಲ್ಲ. ಲಾಕ್‌ಡೌನ್‌ನಿಂದ ಅನುಕೂಲವೇ ಆಯಿತು. ದೂರದರ್ಶನ ಚಂದನ ವಾಹಿನಿಯಲ್ಲಿ ಪಾಠಗಳನ್ನು ನೋಡುತ್ತಿದ್ದೆ. ಅದರಿಂದಲೂ ಸಹಾಯವಾಯಿತು’ ಎಂದು ಸಹನಾ ತಿಳಿಸಿದರು.

‘ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಒಳ್ಳೆಯ ಅಂಕ ಗಳಿಸಲು ಸಾಧ್ಯವಾಯಿತು. ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಳ್ಳಬೇಕು. ಉತ್ತಮ ಅಂಕ ಗಳಿಸಬೇಕು. ವೈದ್ಯೆ ಆಗಬೇಕು ಎನ್ನುವ ಗುರಿ ಇದೆ.

ಗೊಂದಲವೇ ಇರಲಿಲ್ಲ:‘ಕೊರೊನಾ ಹೋಗಲಿ ಬಿಡಲಿ ಪರೀಕ್ಷೆ ನಡೆದೇ ತೀರುತ್ತದೆ ಎನ್ನುವ ನಿರೀಕ್ಷೆ ಇತ್ತು. ಈ ವಿಷಯದಲ್ಲಿ ಗೊಂದಲವೇ ಇರಲಿಲ್ಲ. ಹೀಗಾಗಿ, ಚೆನ್ನಾಗಿ ಓದಿಕೊಂಡಿದ್ದೆ. ಲಾಕ್‌ಡೌನ್‌ನಿಂದ ಇನ್ನೂ ಹೆಚ್ಚಿನ ಸಮಯ ಸಿಕ್ಕಿದ್ದು ಒಳ್ಳೆಯದೇ ಆಯಿತು’ ಎಂದು ಶ್ರುತಿ ಪಾಟೀಲ ಪ್ರತಿಕ್ರಿಯಿಸಿದರು.

‘ಸಮಾಜ ವಿಜ್ಞಾನದಲ್ಲಿ 2 ಅಂಕಗಳು ಹೋದವು. ಟಾಪರ್‌ ಆಗುತ್ತೇನೆ ಎನ್ನುವ ನಿರೀಕ್ಷೆ ಇತ್ತು. ಹಿಂದೆ ನಿಗದಿಯಾಗಿದ್ದ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆದಿದ್ದರೂ ಫಲಿತಾಂಶದಲ್ಲಿ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಮುಂಜಾನೆ ಹೆಚ್ಚು ಸಮಯ ಓದುತ್ತಿದ್ದೆ. ಪೋಷಕರು ಹಾಗೂ ಶಿಕ್ಷಕರ ಬೆಂಬಲದಿಂದ ಹೆಚ್ಚು ಅಂಕ ಗಳಿಕೆ ಸಾಧ್ಯವಾಯಿತು. ಚಂದನ ವಾಹಿನಿಯಲ್ಲಿನ ತರಗತಿಗಳಿಂದಲೂ ಅನುಕೂಲವಾಯಿತು’ ಎಂದು ಹೇಳಿದರು.

‘ಮುಂದೆಯೂ ಚೆನ್ನಾಗಿ ಓದಿ, ವೈದ್ಯೆ ಆಗಬೇಕು ಎನ್ನುವ ಕನಸಿದೆ’ ಎಂದು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT