ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ಘಟಿಕೋತ್ಸವ: 62,228 ಮಂದಿಗೆ ಪದವಿ ಪ್ರದಾನ

ವಿಶ್ವ ಶೈಕ್ಷಣಿಕ ಕ್ಷೇತ್ರದ ನಾಯಕನಾಗುವತ್ತ ಭಾರತ: ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅಭಿಮತ ಪ್ರಜಾವಾಣಿ ವಾರ್ತೆ
Last Updated 24 ಫೆಬ್ರುವರಿ 2023, 14:53 IST
ಅಕ್ಷರ ಗಾತ್ರ

ಬೆಳಗಾವಿ: ‘ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದ ಅಗ್ರಗಣ್ಯ ಸ್ಥಾನ ಪಡೆದ ಭಾರತ, ಶಿಕ್ಷಣ ಕ್ಷೇತ್ರದಲ್ಲೂ ನಾಯಕತ್ವ ಹೊಂದಲು ಸಾಧ್ಯವಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಈ ಅವಕಾಶ ಒದಗಿಸಿದೆ’ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅಭಿಪ್ರಾಯ ಪಟ್ಟರು.

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದಲ್ಲಿರುವ ಡಾ.ಎಪಿಜೆ ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ಶುಕ್ರವಾರ 22ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಕೋವಿಡ್‌ ನಂತರದ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಅಪರಿಮಿತವಾಗಿ ಬೆಳೆದಿದೆ. ಹೊಸ ತಾಂತ್ರಿಕ ಕೌಶಲಕ್ಕೆ, ಸಂಶೋಧನೆಗೆ ವೇಗ ಸಿಕ್ಕಿದೆ. ಮಲಗುವ ಕೋಣೆಗಳನ್ನೂ ತರಗತಿಗಳಾಗಿ ಮಾರ್ಪಾಡು ಮಾಡುವಷ್ಟು ಬದಲಾವಣೆಯಾಗಿದೆ. ಲಾಕ್‌ಡೌನ್‌ ನಂತರದಲ್ಲಿ ತಾಂತ್ರಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಇಷ್ಟೊಂದು ಸಮರ್ಥವಾಗಿ ಬೆಳೆದಿದ್ದು ಭಾರತ ಮಾತ್ರ’ ಎಂದರು.

‘‍ಪ್ರಪಂಚದ ತಾಂತ್ರಿಕ ‍ಪರಿಧಿಯಲ್ಲಿ ಎಐಸಿಟಿಇ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಆಧುನಿಕ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ದೊಡ್ಡ ಹೆಜ್ಜೆ ಇಟ್ಟಿದೆ’ ಎಂದೂ ಹೇಳಿದರು.

‘1980ರಲ್ಲಿ ಕಂಪ್ಯೂಟರ್‌ ಬಳಕೆಗೆ ಬಂದಾಗ ಇದರಿಂದ ದೊಡ್ಡ ಸಂಖ್ಯೆಯ ಜನ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂಬ ಭಯ ಹುಟ್ಟಿತ್ತು. ಎಂಜಿನಿಯರ್‌ಗಳು ನೌಕರಿಗೆ ಸೀಮಿತವಾದರೆ ಸಾಲದು, ಉದ್ಯಮಪತಿಗಳಾಗಬೇಕು. ತಂತ್ರಜ್ಞಾನ ಹೊಸ ಉದ್ಯೋಗ ಸೃಷ್ಟಿಸುತ್ತಿದೆ ಎಂಬುದನ್ನು ತೋರಿಸಬೇಕು’ ಎಂದೂ ಸಲಹೆ ನೀಡಿದರು.

‘ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ, ಕೌಶಲ ಭಾರತ, ಪರಿಣಾಮಕಾರಿ ಸಂಶೋಧನೆ, ನಾವೀನ್ಯತೆ ಹಾಗೂ ತಂತ್ರಜ್ಞಾನ, ರಾಷ್ಟ್ರೀಯ ಪ್ರಾಜೆಕ್ಟ್‌ ಇಂಪ್ಲಿಮೆಂಟೇಷನ್‌ ಯೂನಿಟ್‌... ಹೀಗೆ ಹಲವಾರು ದೊಡ್ಡ ಹೆಜ್ಜೆಗಳನ್ನು ಇಡಲಾಗಿದೆ. ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ ಮುಂತಾದ ಯೋಜನೆಗಳು ಶ್ಲಾಘನೀಯವಾಗಿವೆ’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯ ನಂತರ ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆ ಹೆಚ್ಚಾಗಿದೆ. ಈ ಮೊದಲು ಶಿಕ್ಷಣ ಪಡೆಯುವುದು ಬೇರೆಯದ್ದೇ ರೀತಿಯಲ್ಲಿತ್ತು. ಮೊಬೈಲ್, ಕಂಪ್ಯೂಟರ್ ತಂತ್ರಜ್ಞಾನ ಯುಗದಲ್ಲಿ ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗಿದೆ ಎಂದರು.

ಪದವಿ ಪ್ರದಾನ ಮಾಡಿ, ಅಧ್ಯಕ್ಷೀಯ ಭಾಷಣ ಮಾಡಿದ ರಾಜ್ಯಪಾಲ ಥಾವಚಂದ್ ಗೆಹಲೋತ್‌ ಅವರು, ‘ದೇಶದ ಅಭಿವೃದ್ದಿಗೆ ತಂತ್ರಜ್ಞಾನ ಅವಶ್ಯಕವಾಗಿದೆ. 25 ವರ್ಷಗಳ ಹಿಂದೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಸ್ಮರಣೆಗಾಗಿ ಈ ವಿಶ್ವ ವಿದ್ಯಾಲಯ ಸ್ಥಾಪಿಸಲಾಗಿತ್ತು. ಈಗ ದೇಶದ ಹೆಮ್ಮೆಯ ಮಾದರಿ ವಿಶ್ವವಿದ್ಯಾಲಯವಾಗಿ ಬೆಳೆದಿದೆ. ಇಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಹಿಂದೆ ಭಾರತವೇ ಶೈಕ್ಷಣಿಕ ಗುರು ಆಗಿತ್ತು. ಹೊಸ ಶಿಕ್ಷಣ ನೀತಿಯಿಂದ ಆ ಅವಕಾಶ ಮತ್ತೆ ಸಿಗಲಿದೆ. ಶಿಕ್ಷಣ ಕ್ಷೇತ್ರ ಮತ್ತಷ್ಟು ಸುಧಾರಣೆ ಹಂತದಲ್ಲಿದೆ. ದೇಶದ ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಬೀರಿದ್ದಾರೆ. ದೇಶವೀಗ ಜಗತ್ತಿನ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ’ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ಸ್ವಾಗತಿಸಿದರು. ಕುಲಸಚಿವ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವ ಟಿ.ಎನ್ ಶ್ರೀನಿವಾಸ, ಕಾರ್ಯಕಾರಿ ಪರಿಷತ್ ಸದಸ್ಯ ಪ್ರೊ.ಎಂ.ಎಸ್ ಶಿವಕುಮಾರ್, ಹಣಕಾಸು ಅಧಿಕಾರಿ ಎಂ.ಎ.ಸ್ವಪ್ನ, ವಿವಿಧ ವಿಭಾಗಗಳ ಡೀನ್‌ಗಳು ವೇದಿಕೆ ಮೇಲಿದ್ದರು.

62,228 ಮಂದಿಗೆ ಪದವಿ ಪ್ರದಾನ

51,905 ಬಿಇ/ ಬಿ.ಟೆಕ್, 1,032 ಬಿ.ಆರ್ಚ್, 4,279 ಎಂಬಿಎ, 2,028 ಎಂಸಿಎ, 1,363 ಎಂ.ಟೆಕ್, 701 ಪಿಎಚ್‌.ಡಿ, 82 ಎಂ.ಆರ್ಚ್, 9 ಬಿ.ಪ್ಲಾನ್, 4 ಇಂಟಿಗ್ರೇಡಿಯಟ್ ಡ್ಯುಯಲ್, 2 ಎಂ.ಎಸ್.ಸಿ ಬೈ ರಿಸರ್ಚ್, 1 ಪಿಜಿ ಡಿಪ್ಲೊಮಾ ಸೇರಿ 62,228 ಪದವಿಗಳನ್ನು ಪ್ರದಾನ ಮಾಡಲಾಯಿತು.

ಮೂವರಿಗೆ ಗೌರವ ಡಾಕ್ಟರೇಟ್‌

ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ನ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ (ಮರಣೋತ್ತರ), ವೆಬ್ಕೊ ಇಂಡಿಯಾ ಲಿಮಿಟೆಡ್‌ ಹಾಗೂ ಟಿವಿಎಸ್‌ ಆಟೊಮೆಟಿವ್‌ ಸಲ್ಯೂಷನ್ಸ್‌ನ ಪ್ರೈವೇಟ್‌ ಲಿಮಿಟೆಡ್‌ ಅಧ್ಯಕ್ಷ ಎಂ.ಲಕ್ಷ್ಮೀನಾರಾಯಣ್‌, ಬೆಲಗಮ್‌ ಫೆರೊಕಾಸ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಸಚಿನ್‌ ಸಬ್ನಿಸ್‌ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು.
*
ಚಿನ್ನದ ವಿದ್ಯಾರ್ಥಿಗಳು ಇವರು

ಬೆಂಗಳೂರು ಎ.ಸಿ.ಎಸ್. ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಎಸ್.ಸ್ವಾತಿ 7 ಚಿನ್ನ, ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಎಸ್.ವಿ.ಸುಶ್ಮಿತಾ 6 ಚಿನ್ನದ ಪದಕ, ಬಿ.ಎನ್.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಪೂಜಾ ಬಾಸ್ಕೇರ 6, ಬೆಂಗಳೂರಿನ ಆರ್.ಎನ್.ಎಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಷನ್‌ ವಿಭಾಗದ ಎಂ.ಅಭಿಲಾಷ 4, ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಇನ್ಫರ್ಮೇಷನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಯುವಿಕಾ ರಮೇಶ್‌ಬಾಬು 4, ಆರ್.ಎನ್.ಎಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಎಂಬಿಎ ವಿಭಾಗದ ಜೆ.ಹರ್ಷವರ್ಧಿನಿ 4, ಬಿಎಂಎಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಯು.ಕೆ.ಅರ್ಜುನ್‌ 3 ಹಾಗೂ ದಾವಣಗೆರೆ ಯುಬಿಟಿಡಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಂ.ಟೆಕ್ ವಿಭಾಗದ ಜಿ.ಆರ್.ಸಂಗೀತ 2 ಚಿನ್ನದ ಪದಕ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT