ಬುಧವಾರ, ಏಪ್ರಿಲ್ 14, 2021
31 °C
‘ಪದ್ಮಶ್ರೀ’ ಪುರಸ್ಕೃತೆ ಮಂಜಮ್ಮ ಜೋಗತಿ

ಹೆಣ್ಣು ಮನೆಯ ಬೆಳಕೆನ್ನುವುದು ಅರಿಯಿರಿ: ಮಂಜಮ್ಮ ಜೋಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಹೆಣ್ಣು ಮನೆಯ ಬೆಳಕು ಎನ್ನುವುದನ್ನು ಅರಿಯಬೇಕು’ ಎಂದು ಕರ್ನಾಟಕ ಜಾನಪದ ಆಕಾಡೆಮಿ ಅಧ್ಯಕ್ಷೆ ಹಾಗೂ ‘ಪದ್ಮಶ್ರೀ’ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.

ಇಲ್ಲಿನ ಜೆಎನ್ಎಂಸಿಯಲ್ಲಿ ಕೆಎಲ್‌ಇ ಸಂಸ್ಥೆಯ ಮಹಿಳಾ ಸ್ವಶಕ್ತಿ ಸಬಲೀಕರಣ ಘಟಕದಿಂದ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಣ್ಣು ಮಗು ಜನಿಸಿತೆಂದು ಅಯ್ಯೋ ಎಂದು ಮರುಗಬಾರದು’ ಎಂದರು.

‘ಗ್ರಾಮೀಣ ಮಹಿಳೆಯರು ಅತ್ಯಂತ ಕಷ್ಟದ ಜೀವನ ಸಾಗಿಸುತ್ತಾರೆ. ಅನೇಕ ತಾಪತ್ರಯಗಳ ನಡುವೆಯೂ ಸಾಧಕರಾಗಿ ಹೊರಹೊಮ್ಮುತ್ತಾರೆ. ಕೊರತೆಯನ್ನು ಸವಾಲಾಗಿ ಸ್ವೀಕರಿಸಲು ಒಂದು ಹೆಜ್ಜೆ ಮುಂದಿರುತ್ತಾರೆ’ ಎಂದು ತಿಳಿಸಿದರು.

ಸುಶಿಕ್ಷಿತ ಸಮಾಜ ನಿರ್ಮಾಣವಾಗಲಿ:

‘ಇತ್ತೀಚಿನ ದಿನಗಳಲ್ಲಿ ಲಿಂಗ ತಾರತಮ್ಯ ಹೆಚ್ಚುತ್ತಿದೆ. ಅದು ತಪ್ಪಬೇಕಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಶಿಕ್ಷಣ ಪಡೆದರೆ ಸಾಲದು, ಅದನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು. ಸ್ತ್ರೀ ಎಂದರೇನೇ ಶಕ್ತಿ ಅಡಗಿದೆ. ಸ್ತ್ರೀ ಇಲ್ಲದ ಸಮಾಜ ಊಹಿಸಿಕೊಳ್ಳುವುದು ಅಸಾಧ್ಯ. ಮಗಳಾಗಿ ಹುಟ್ಟುವ ಹೆಣ್ಣು ತಾಯಿಯಾಗಿ ಎಲ್ಲ ಜವಾಬ್ದಾರಿಗಳನ್ನೂ ನಿಭಾಯಿಸುತ್ತಾಳೆ. ಆದ್ದರಿಂದ ನಾರಿಯನ್ನು ಕಡೆಗಣಿಸಬಾರದು’ ಎಂದರು.

‘ನಾನು ತೃತೀಯ ಲಿಂಗಿಯಾಗಿದ್ದು, ಇಂದು ಈ ಮಟ್ಟಕ್ಕೆ ಬೆಳೆಯಬೇಕಾದರೆ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಆದರೆ, ನಮ್ಮಲ್ಲಿರುವ ಛಲ ಬಿಟ್ಟು ಕೊಡಬಾರದು. ನನ್ನಲ್ಲಿರುವ ಕಲೆ ಮುಚ್ಚಿಡದೆ ಸಮಾಜಕ್ಕೆ ಅರ್ಪಿಸುತ್ತಾ, ಇತರರಿಗೆ ತರಬೇತಿ ನೀಡುತ್ತಾ, ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದಲು ಬಳಸಿಕೊಂಡೆ. ಆದರೂ ಸಮಾಜ ನನ್ನನ್ನು ನೋಡುವ ದೃಷ್ಟಿಯೇ ಬೇರೆ ಇತ್ತು. ಎದೆಗುಂದದೆ ಮುನ್ನಡೆದೆ. ನನ್ನಂಥವರಿಗೆ ಜಾನಪದ ಹಾಗೂ ಕುಣಿತ ಕಲೆಯ ತರಬೇತಿ ನೀಡಿ ಅವರು ಯಾರ ಹಂಗಿಗೂ ತಲೆಬಾಗದೆ ಒಳ್ಳೆಯ ಜೀವನ ನಡೆಸುವಂತಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ’ ಎಂದು ತಿಳಿಸಿದರು.

ಶ್ಲಾಘನೀಯ:

‘ಸಪ್ತರ್ಷಿಗಳು ಸೇರಿ ಸ್ಥಾಪಿಸಿದ ಕೆಎಲ್‌ಇ ಸಂಸ್ಥೆ ಈಗ ಸಪ್ತ ಸಾಗರದಾಚೆಯೂ ಹೆಸರು ಮಾಡಿದೆ. ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಇಲ್ಲಿ ಬೆಳೆದವರು ತಮ್ಮ ಸೇವೆಯ ಮೂಲಕ ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಖುಷಿಯ ಸಂಗತಿ’ ಎಂದು ಶ್ಲಾಘಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಸ್ತ್ರೀಯಯನ್ನು ತಾಯಿಯೆಂದು ಪೂಜಿಸುವ ನಮ್ಮ ದೇಶದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ದೌರ್ಜನ್ಯ ಪ್ರಕರಣಗಳನ್ನು ನಿಲ್ಲಿಸಬೇಕಾದರೆ, ಹುಡುಗಿಯರಿಗೆ ಶಿಕ್ಷಣವನ್ನು ಅತ್ಯವಶ್ಯವಾಗಿ ನೀಡಬೇಕು. ಹುಡುಗ ಉನ್ನತ ಶಿಕ್ಷಣ ಪಡೆದರೆ ಸ್ವಾರ್ಥಿ ಆಗುತ್ತಾನೆ. ಅದೇ ಹುಡುಗಿ ಶಿಕ್ಷಣ ಪಡೆದರೆ ಕುಟುಂಬದ ಬದಲಾವಣೆಗೆ ನಾಂದಿ ಹಾಡುತ್ತಾಳೆ. ಹೀಗಾಗಿ, ಮಹಿಳಾ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

ಘಟಕದ ಅಧ್ಯಕ್ಷ ಆಶಾ ಕೋರೆ, ಡಾ.ವಿವೇಕ ಸಾವೋಜಿ, ಡಾ.ವಿ.ಎ. ಕೋಠಿವಾಲೆ, ಡಾ.ಪ್ರೀತಿ ದೊಡವಾಡ, ಡಾ.ಅಲ್ಕಾ ಕಾಳೆ, ಡಾ.ಸುಜಾತಾ ಜಾಲಿ, ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ನೇಹಾ ದಡೇದ, ಡಾ.ಹರಪ್ರೀತ ಕೌರ್, ಡಾ.ರೇಣುಕಾ ಮೆಟಗುಡ್ ಉಪಸ್ಥಿರಿದ್ದರು.

ಡಾ.ಸ್ನೇಹಲ್ ಧರ‍್ಮಾಯತ ಹಾಗೂ ಡಾ.ಜ್ಯೋತಿ ಕಾವಳೇಕರ ನಿರೂಪಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು