ಗುರುವಾರ , ನವೆಂಬರ್ 26, 2020
22 °C
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಬಿಜೆಪಿ ಕಾರ್ಯಕರ್ತರ ಸಭೆ

ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ ದಿಕ್ಸೂಚಿ ಬದಲು: ಕೆ.ಎಸ್. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ಎರಡು ಉಪಚುನಾವಣೆ ಮತ್ತು ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್‌ ದಿಕ್ಸೂಚಿ ಬದಲಾಗುತ್ತದೆ. ಏಕೆಂದರೆ ಆರೂ ಕಡೆ ಬಿಜೆಪಿಯೇ ಗೆಲ್ಲುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.

ನಗರದಲ್ಲಿ ಬುಧವಾರ ಸಂಜೆ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರದ ಸಲುವಾಗಿ ಏರ್ಪಡಿಸಿದ್ದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಉಪಚುನಾವಣೆಗಳು ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಕಾಂಗ್ರೆಸ್‌ ಹೇಳುವುದನ್ನೇ ನಾನೂ ಹೇಳುತ್ತಿದ್ದೇನೆ. ಈಗಾಗಲೇ ಶಿಥಿಲಗೊಂಡಿರುವ ಕಾಂಗ್ರೆಸ್, ಎರಡು ಕ್ಷೇತ್ರದಲ್ಲಿ ಗೆದ್ದರೆ ಮಾತ್ರ ಅದು ಬದುಕಿ ಉಳಿಯಲು ಸಾಧ್ಯ’ ಎಂದು ಪ್ರತಿಪಾದಿಸಿದರು.

‘ಕಾಂಗ್ರೆಸ್‍ನ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿಯವರು ಭೇಟಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಪಕ್ಷದ ನಾಯಕರು ಎಲ್ಲ ಕಡೆ ಸುತ್ತಾಡಿ ಜನರ ಸಂಕಷ್ಟಗಳನ್ನು ಆಲಿಸುತ್ತಿರುವುದು ಕಾಣುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ’ಮಕ್ಕಳ ಪ್ರವಾಸದಲ್ಲೂ ಜಾತಿಯ ವಿಷ ಬೀಜ ಬಿತ್ತುವ. ನಿರ್ದಿಷ್ಟ ಕೋಮಿಗೆ ಮಾತ್ರ ಶಾದಿಭಾಗ್ಯ ಯೋಜನೆ ತಂದು ಮತಬ್ಯಾಂಕ್ ರಾಜಕಾರಣ ಮಾಡುವ ಕಾಂಗ್ರೆಸ್‍ನ ಹುಟ್ಟುಗುಣ ಸುಟ್ಟರೂ ಹೋಗದು’ ಎಂದು ಟೀಕಿಸಿದರು.

‘ಕಾಂಗ್ರೆಸ್‍ನಲ್ಲಿ ಸೋನಿಯಾಗಾಂಧಿ, ರಾಹುಲ್‍ಗಾಂಧಿ ಅವರ ನಂತರ ಪ್ರಿಯಾಂಕ ಗಾಂಧಿ ಅವರ ಹೆಸರೇ ಕೇಳಿಬರುತ್ತದೆ. ಜೆಡಿಎಸ್‍ನಲ್ಲಿ ದೊಡ್ಡಗೌಡರು, ಸಣ್ಣಗೌಡರು ಆದ ಮೇಲೆ ಮರಿಗೌಡರು ರಾಜಕಾರಣಕ್ಕೆ ಬಂದರು. ಚಹಾ ಮಾರುವವರು ಪ್ರಧಾನಿಯಾಗುವುದು, ಸಾಮಾನ್ಯ ರೈತನ ಮಗ ಮುಖ್ಯಮಂತ್ರಿಯಾಗುವುದು ಬಿಜೆಪಿಯಲ್ಲಿ ಮಾತ್ರ’ ಎಂದು ಪ್ರತಿಪಾದಿಸಿದರು.

‘ಪಕ್ಷದ ಬಾವುಟ ಕಟ್ಟುತ್ತಿದ್ದ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಪಕ್ಷವು ಶಾಸಕ, ಸಚಿವ ಸ್ಥಾನ ದೊರಕಿಸಿ ಈಗ ಸಂಘಟನೆಯ ಹೊಣೆ ಹೊರಿಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ ಇದು ಸಾಧ್ಯವಿಲ್ಲ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸವನಗೌಡ, ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಜಿ.ಕರುಣಾಕರ ರೆಡ್ಡಿ, ಮುಖಂಡರಾದ ನೇಮಿರಾಜ ನಾಯ್ಕ, ಚಂದ್ರನಾಯ್ಕ, ಕೆ.ಎ.ರಾಮಲಿಂಗಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮಹಿಳಾ ಮೋರ್ಚಾದ ಡಾ.ಅರುಣಾಕಾಮಿನೇನಿ, ಡಾ.ಎಸ್‌.ಜೆ.ವಿ.ಮಹಿಪಾಲ್, ಎಸ್.ಗುರುಲಿಂಗನಗೌಡ, ಸಾಧನಾ ಹಿರೇಮಠ, ಗಣಪಾಲ್ ಐನಾಥ ರೆಡ್ಡಿ, ಅನಿಲ್‍ನಾಯ್ಡು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು