ಬುಧವಾರ, ಮಾರ್ಚ್ 3, 2021
19 °C
ಜೂನ್‌, ಜುಲೈನಲ್ಲಿ ಸಂಪೂರ್ಣವಾಗಿ ಕೈಕೊಟ್ಟ ಮಳೆ; ಶೇ 15ರಷ್ಟು ಬಿತ್ತನೆ

ಅನ್ನದಾತನಿಗೆ ಭರವಸೆ ಮೂಡಿಸಿದ ಆಗಸ್ಟ್‌

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಜೂನ್‌, ಜುಲೈನಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ತಾಲ್ಲೂಕಿನಾದ್ಯಂತ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ.

ಆದರೆ, ಆಗಸ್ಟ್‌ ತಿಂಗಳ ಮೊದಲ ದಿನದಿಂದಲೇ ಸತತವಾಗಿ ಎಲ್ಲೆಡೆ ಜಿಟಿಜಿಟಿ ಮಳೆ ಸುರಿಯುತ್ತಿರುವ ಕಾರಣ ರೈತರಲ್ಲಿ ಭರವಸೆ ಚಿಗುರೊಡೆದಿದೆ. ಅಷ್ಟೇ ಅಲ್ಲ, ಎರಡು ವಾರಗಳಿಂದ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನಿತ್ಯ ಸರಾಸರಿ ಒಂದು ಟಿ.ಎಂ.ಸಿ. ಅಡಿಯಷ್ಟು ನೀರು ಅಣೆಕಟ್ಟೆಗೆ ಬರುತ್ತಿದೆ. ಇದುವರೆಗೆ ಕಾಲುವೆಗಳಿಗೆ ನೀರು ಹರಿಸಿಲ್ಲ. ಆದರೆ, ಬರುವ ದಿನಗಳಲ್ಲಾದರೂ ನೀರು ಹರಿಸಬಹುದು ಎಂಬುದು ಕಾಲುವೆ ಭಾಗದ ರೈತರ ನಿರೀಕ್ಷೆಯಾಗಿದೆ.

8,428 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶ ಸೇರಿದಂತೆ ಒಟ್ಟು 33,100 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಕೊರತೆ ಮಳೆ ಆಗಿರುವುದರಿಂದ ಸುಮಾರು ನಾಲ್ಕು ಸಾವಿರ ಹೆಕ್ಟೇರ್‌ನಲ್ಲಷ್ಟೇ ರೈತರು ಬಿತ್ತನೆ ಮಾಡಿದ್ದಾರೆ. ಜೋಳ, ಮೆಕ್ಕೆಜೋಳ, ಸಜ್ಜೆ ಬಿತ್ತನೆಗೆ ರೈತರು ಹೆಚ್ಚು ಒತ್ತು ಕೊಟ್ಟಿದ್ದಾರೆ. ಕಾಲುವೆಗಳಿಗೆ ನೀರು ಬಿಡದ ಕಾರಣ ಭತ್ತ, ಕಬ್ಬು ಇನ್ನಷ್ಟೇ ರೈತರು ನಾಟಿ ಮಾಡಬೇಕಿದೆ.

ಜೂನ್‌ನಲ್ಲಿ ಕೈಕೊಟ್ಟಿದ್ದ ಮಳೆ ಜುಲೈನಲ್ಲಾದರೂ ಬರಬಹುದು ಎಂದು ರೈತರು ಭರವಸೆ ಇಟ್ಟುಕೊಂಡಿದ್ದರು. ಆದರೆ, ಅವರ ಭರವಸೆ, ನಿರೀಕ್ಷೆ ಹುಸಿಯಾಗಿದೆ. ಆಗಸ್ಟ್‌ ಮೊದಲ ದಿನದಿಂದ ಎಲ್ಲ ಕಡೆಗಳಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಇದರಿಂದಾಗಿ ಅನೇಕ ಕಡೆ ರೈತರು ಈಗ ಬಿತ್ತನೆಗೆ ಒಲವು ತೋರುತ್ತಿದ್ದಾರೆ. ಕೆಲವರಂತೂ ಈ ಬಾರಿ ಬಿತ್ತನೆ ಮಾಡುವುದೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

‘ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಆಗಸ್ಟ್‌ ನಂತರ ಉತ್ತಮ ಮಳೆಯಾಗಿರುವುದು ಬಹಳ ಕಡಿಮೆ. ಈಗ ಬಿತ್ತನೆ ಮಾಡಿದರೆ, ಸ್ವಲ್ಪ ಮಳೆಯಿಂದ ಸಸಿಗಳು ಏಳಬಹುದು. ಆದರೆ, ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ಫಸಲು ಬರುವುದಿಲ್ಲ. ಬಂಡವಾಳ ಹಾಕಿದರೆ ಅದು ಕೈಸೇರುವ ಭರವಸೆ ಇಲ್ಲ. ಹಾಗಾಗಿ ಈ ವರ್ಷ ಬಿತ್ತನೆ ಮಾಡದಿರಲು ತೀರ್ಮಾನಿಸಿದ್ದೇನೆ’ ಎಂದು ಹೊಸೂರು ಮಾಗಾಣಿಯ ರೈತ ಬಸವರಾಜ ಹೇಳಿದರು.

‘ಈ ವರ್ಷ ಅದೇನಾಗಿದೆಯೋ ಗೊತ್ತಿಲ್ಲ. ನಿತ್ಯ ದಟ್ಟ ಕಾರ್ಮೋಡ ಆಗುತ್ತಿದೆ. ಆದರೆ, ಭಾರಿ ಗಾಳಿಗೆ ಮೋಡಗಳು ಚದುರಿ ಹೋಗುತ್ತಿವೆ. ಇದುವರೆಗೆ ಒಮ್ಮೆಯೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆಗುವ ಯಾವ ಭರವಸೆಯೂ ಕಾಣಿಸಿಕೊಳ್ಳುತ್ತಿಲ್ಲ’ ಎಂದರು.

‘ಆಗ ಮಳೆ ಬರುತ್ತದೆ. ಈಗ ಮಳೆ ಬರುತ್ತದೆ ಎಂದು ಕಾದು ಕಾದು ಸುಸ್ತಾಗಿದ್ದೇನೆ. ಇಲ್ಲಿಯವರೆಗೆ ಹೇಳಿಕೊಳ್ಳುವ ರೀತಿಯಲ್ಲಿ ಮಳೆಯಾಗಿಲ್ಲ. ಆದರೆ, ನಾಲ್ಕೈದು ದಿನಗಳಿಂದ ಸತತವಾಗಿ ಜಿಟಿಜಿಟಿ ಮಳೆಯಾಗುತ್ತಿದೆ. ಈಗ ಬಿತ್ತನೆ ಕೆಲಸ ಆರಂಭಿಸಿದ್ದೇನೆ. ಧೈರ್ಯ ಮಾಡಿ ಈ ನಿರ್ಧಾರ ಕೈಗೊಂಡಿದ್ದೇನೆ. ಏನಾಗುತ್ತದೆ ನೋಡಬೇಕು. ಸುಮ್ಮನಂತೂ ಕೂರಲು ಆಗುವುದಿಲ್ಲ’ ಎಂದು ಮಲಪನಗುಡಿಯ ರೈತ ನಂದೀಶ್ವರ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.