ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ತಿಂಗಳಲ್ಲಿ ಐವರು ಉದ್ಯೋಗ ಖಾತ್ರಿ ಕಾರ್ಮಿಕರ ಸಾವು

ಹೆಚ್ಚಿನ ಕೂಲಿಯಾಸೆಗೆ ವಯಸ್ಸಾದವರಿಂದ ಕೆಲಸ; ಆರೋಗ್ಯ ತಪಾಸಣೆಗಿಲ್ಲ ವ್ಯವಸ್ಥೆ
Last Updated 29 ಜೂನ್ 2022, 21:30 IST
ಅಕ್ಷರ ಗಾತ್ರ

ಹೊಸಪೇಟೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವಾಗ ಐದು ಜನ ಕಾರ್ಮಿಕರು ಕಳೆದೆರಡು ತಿಂಗಳಲ್ಲಿ ಸಾವನ್ನಪ್ಪಿರುವುದು ಕೂಲಿಕಾರರನ್ನು ಚಿಂತೆಗೀಡು ಮಾಡಿದೆ.

ಜಿಲ್ಲಾ ಪಂಚಾಯಿತಿ ಪ್ರಕಾರ, ಹಗರಿಬೊಮ್ಮನಹಳ್ಳಿ ತಾಲ್ಲೂಕುವೊಂದರಲ್ಲೇ 4 ಜನ ಸಾವನ್ನಪ್ಪಿದರೆ, ಕೂಡ್ಲಿಗಿಯಲ್ಲಿ ಒಬ್ಬ ಕೂಲಿ ಕಾರ್ಮಿಕ ಮೃತಪಟ್ಟಿದ್ದಾನೆ. ಕೆಲಸಕ್ಕೆ ಬಂದು ಮನೆಗೆ ಹಿಂತಿರುಗುವ ಸಂದರ್ಭದಲ್ಲಿ ಕಾರ್ಮಿಕ ಮೃತಪಟ್ಟರೆ ಪರಿಹಾರ ಸಿಗುತ್ತದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಇಬ್ಬರು ಕಾರ್ಮಿಕರಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. ಒಬ್ಬ ಕಾರ್ಮಿಕನ ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಇನ್ನೊಬ್ಬ ಕಾರ್ಮಿಕ, ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದ. ಅನಂತರ ದನ ಮೇಯಿಸಿಕೊಂಡು ಹೊಲಕ್ಕೆ ಹೋದಾಗ ಎದೆನೋವಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದರಿಂದ ಪರಿಹಾರದ ವ್ಯಾಪ್ತಿಗೆ ಬಂದಿಲ್ಲ.

ಕೂಡ್ಲಿಗಿ ತಾಲ್ಲೂಕಿನ ಎ. ದಿಬ್ಬದಹಳ್ಳಿ ಗ್ರಾಮದ ಎಚ್. ಸಿದ್ದಪ್ಪ ಅವರು ದಿಬ್ಬದಹಳ್ಳಿ-ಹರವದಿ ಬಳಿಯ ಆರಣ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಕೊಂಡೊಯ್ಯುವಾಗ ಮೃತರಾಗಿದ್ದಾರೆ. ಹೀಗೆ ಬಹಳ ಕಡಿಮೆ ಅವಧಿಯಲ್ಲಿ ಐದು ಜನ ಪ್ರಾಣ ಬಿಟ್ಟಿದ್ದಾರೆ. ಐದು ಜನ ಆಯಾಸಗೊಂಡು, ಎದೆನೋವಿನಿಂದಲೇ ಸಾವನ್ನಪ್ಪಿದ್ದಾರೆ.
ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯಲ್ಲಿ ನರೇಗಾ ಅಡಿ ಹೆಚ್ಚಿನ ಕಾರ್ಮಿಕರು ಕೆಲಸ ನಿರ್ವಹಿಸಲು ಮುಂದೆ ಬರುತ್ತಿದ್ದಾರೆ. ಆದರೆ, ಇದೆ ವೇಳೆ ಒಬ್ಬರಾದ ನಂತರ ಒಬ್ಬರು ಸಾವನ್ನಪ್ಪುತ್ತಿರುವುದು ಕಾರ್ಮಿಕರನ್ನು ಚಿಂತೆಗೆ ದೂಡಿದೆ.

ಸಾವಿಗೆ ಕಾರಣವೇನು?:

60 ವರ್ಷ ಮೇಲಿನವರು ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಲು ಅವಕಾಶ ಇದೆ. ಆರೋಗ್ಯವಂತ ವ್ಯಕ್ತಿಗೆ ವಹಿಸುವ ಒಟ್ಟು ಕೆಲಸದಲ್ಲಿ ಶೇ 50ರಷ್ಟು ಕೆಲಸವನ್ನು 60 ವರ್ಷ ಮೇಲಿನವರಿಗೆ ನೀಡಲಾಗುತ್ತದೆ. ಆದರೆ, ಇಬ್ಬರಿಗೂ ದಿನಕ್ಕೆ ₹309 ಸಮಾನ ಕೂಲಿ ಪಾವತಿಸಲಾಗುತ್ತದೆ.

ಆದರೆ, ಖಾಸಗಿ ಸ್ಥಳಗಳಲ್ಲಿ 60 ವರ್ಷ ಮೇಲಿನವರಿಗೆ ₹150ರಿಂದ ₹200ರ ಒಳಗೆ ಕೂಲಿ ನೀಡಲಾಗುತ್ತದೆ. ನರೇಗಾದಲ್ಲಿ ₹100ರಿಂದ ₹150 ಹೆಚ್ಚು ಕೂಲಿ ಸಿಗುತ್ತದೆ. ಅದಕ್ಕಾಗಿ 60, 70 ವರ್ಷ ಮೇಲಿನವರೆಲ್ಲ ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಸೇರುತ್ತಿದ್ದಾರೆ. ಆರೋಗ್ಯ ಸಮಸ್ಯೆಗಳಿದ್ದರೂ ಹೇಳಿಕೊಳ್ಳುತ್ತಿಲ್ಲ.ಕೆಲಸದ ಸ್ಥಳದಲ್ಲಿ ಕಾರ್ಮಿಕರ ಆರೋಗ್ಯ ಪರೀಕ್ಷೆಗೆ ಯಾವುದೇ ವ್ಯವಸ್ಥೆ ಇಲ್ಲ. ಒಂದೇ ಕಡೆ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಇರುವುದರಿಂದ ಇದು ಕಷ್ಟದಾಯಕವಾದ ಕೆಲಸ ಕೂಡ ಆಗಿದೆ.

‘ತೀರ ವಯಸ್ಸಾಗಿ, ಆರೋಗ್ಯ ಸಮಸ್ಯೆಗಳಿದ್ದರೆ ಅಂತಹವರಿಗೆ ಕೆಲಸಕ್ಕೆ ಸೇರಿಸಿಕೊಳ್ಳಬಾರದು. ನಿತ್ಯ ಆರೋಗ್ಯ ತಪಾಸಣೆ ಕಷ್ಟದ ಕೆಲಸ. ಕನಿಷ್ಠ ಎರಡು ವಾರಗಳಿಗೊಮ್ಮೆಯಾದರೂ ತಪಾಸಣೆ ನಡೆಸಬೇಕು. ಅನಾರೋಗ್ಯದಿಂದ ಬಳಲುತ್ತಿದ್ದವರು, ಅಶಕ್ತರಿಗೆ ವಾಪಸ್‌ ಕಳಿಸಿಕೊಡುವ ಕೆಲಸ ಅಧಿಕಾರಿಗಳು ಮಾಡಬೇಕು’ ಎನ್ನುವುದು ಕೂಲಿ ಕಾರ್ಮಿಕರ ಆಗ್ರಹ.

ಕಾರ್ಮಿಕರ ಸಂಖ್ಯೆ ಹೆಚ್ಚಳ:

ಈ ಹಿಂದೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಒಂದು ಲಕ್ಷ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಈಗ ಆ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. ಅದರಲ್ಲೂ ವಿಜಯನಗರ ಜಿಲ್ಲೆಯೊಂದರಲ್ಲೇ 80 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ವಿಪರೀತ ಬಿಸಿಲಿನ ಕಾರಣದಿಂದ ಏಪ್ರಿಲ್‌, ಮೇ ತಿಂಗಳಲ್ಲಿ ಗಣನೀಯವಾಗಿ ಸಂಖ್ಯೆ ತಗ್ಗಿತ್ತು. ಜೂನ್‌ನಲ್ಲಿ ಬಿಸಿಲು ತಗ್ಗಿರುವುದರಿಂದ ಮತ್ತೆ ಸಂಖ್ಯೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT