ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವೇ ದೇಗುಲ ಎಂದ ಬಸವಣ್ಣ

Last Updated 7 ಮೇ 2019, 2:37 IST
ಅಕ್ಷರ ಗಾತ್ರ

ಹೊಸಪೇಟೆ:ಬಸವಣ್ಣನವರು ಮಧ್ಯಕಾಲೀನ ಲಿಂಗಾಯತ ಧಾರ್ಮಿಕ ಚಳವಳಿಯ ಹರಿಕಾರರಾಗಿ ಸಮಾಜದಲ್ಲಿ ಹೊಸ ಕ್ರಾಂತಿ ಮಾಡಿದ ಶರಣರಲ್ಲಿ ಅಗ್ರಗಣ್ಯರು.

ವಚನ ಕ್ರಾಂತಿಯಿಂದ ಜಾತಿ ಭೇದವೆಂಬ ಪರಿಧಿಯನ್ನು ತೊಡೆದು ಅರಿವಿನ ಕಿರಣದ ಬೆಳಕನ್ನು ಬೀರುತ್ತಾ ಅಂಧಕಾರದ ಛಾಯೆಯನ್ನು ಹೊಡೆದೋಡಿಸಿದ ಕ್ರಾಂತಿಕಾರಿ ಬಸವಣ್ಣನವರು. ಅಂದಿನ ಮಡಿವಂತಿಕೆಯ ಸಂಕುಚಿತ ಲೋಕದಿಂದ ಸರ್ವರೂ ಒಂದೇ ಎನ್ನುವ ಸತ್ಯದ ವಾಸ್ತವತೆಗೆ ಜಗತ್ತನ್ನು ಅಯಸ್ಕಾಂತದಂತೆ ಆಕರ್ಷಿಸಿದ ಅಚಲ ಶಕ್ತಿ ಬಸವಣ್ಣನವರದು. ಅವರ ಹಲವಾರು ವಚನಗಳು ನೀಡಿರುವ ಕಟು ಸತ್ಯದ ಜ್ಞಾನ ಇಂದಿಗೂ ಪ್ರಸ್ತುತ. ಅವರ ಧಾರ್ಮಿಕ ಕಾರ್ಯದ ಅಸಾಮಾನ್ಯ ಭಾಗವನ್ನು ಪ್ರತಿನಿಧಿಸುವ ಈ ಕೆಳಗಿನ ವಚನ ಬಹಳ ಪ್ರಸ್ತುತ.

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲಸಂಗಮದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

ದೇವಾಲಯವನ್ನು ಮಾನವ ಶರೀರದ ಪ್ರತೀಕವಾಗಿ ಈ ವಚನದಲ್ಲಿ ಬಸವಣ್ಣನವರು ಹೇಳಿದ್ದಾರೆ. ಧಾರ್ಮಿಕ ನಿರ್ಮಾಣದ ಪ್ರಕ್ರಿಯೆಯು ಭೂಗರ್ಭವನ್ನು ಅಗೆದು ಬೀಜ ಬಿತ್ತುವುದರೊಂದಿಗೆ ಆರಂಭಗೊಳ್ಳುತ್ತದೆ. ನಂತರ ಬೀಜವು ಮೊಳಕೆಯೊಡೆದು ವಿವಿಧ ಅಂಗಗಳು ರೂಪುಗೊಳ್ಳುತ್ತ ಹೋಗುತ್ತದೆ. ದೇವಾಲಯದ ವಿವಿಧ ಭಾಗಗಳನ್ನು ಮಾನವ ಶರೀರದ ವಿವಿಧ ಅಂಗಗಳಿಂದ ಹೆಸರಿಸಲಾಗಿದೆ.

ದೇವಾಲಯದ ಎರಡು ಬದಿಗಳನ್ನು ಕೈಗಳಿಗೆ ಅಥವಾ ರೆಕ್ಕೆಗಳಿಗೆ ಹೋಲಿಸಿ, ಎರಡು ಕಾಲುಗಳನ್ನು ಸ್ತಂಭಕ್ಕೆ ಹೋಲಿಸಲಾಗಿದೆ. ದೇವಾಲಯದ ಶಿಖರವನ್ನು ಅಥವಾ ಕಲಶವನ್ನು ಶಿರಕ್ಕೆ ಹೋಲಿಸಲಾಗಿದೆ. ದೇವಾಲಯದ ಅತ್ಯಂತ ಒಳಗಿನ ಕತ್ತಲೆಮಯವಾದ ಪವಿತ್ರ ಸ್ಥಳವನ್ನು ಗರ್ಭಗೃಹವೆಂದು ಕರೆಯಲಾಗಿದೆ. ಶಿಲೆ ಹಾಗೂ ಇಟ್ಟಿಗೆಯಿಂದ ನಿರ್ಮಿತವಾದ ದೇವಾಲಯವನ್ನು ಮಾನವ ಶರೀರದ ಆದಿ ಸ್ವರೂಪದ ನೀಲನಕ್ಷೆಯೆಂದು ಪರಿಗಣಿಸಲಾಗಿದೆ.

ಈ ವಚನವು, ನಿರ್ಮಾಣ ಹಾಗೂ ನಡೆಯ ವ್ಯತ್ಯಾಸವನ್ನು ತಿಳಿಸುತ್ತದೆ. ಉಳ್ಳವರು ತೋರ್ಪಡಿಕೆಗಾಗಿ ದೇವಾಲಯಗಳನ್ನು ನಿರ್ಮಿಸಬಹುದು. ನಿರ್ಮಿಸುವುದರಿಂದ ದೇವಾಲಯ ಆಗಲು ಸಾಧ್ಯವಿಲ್ಲ. ನಿರ್ಮಿತವಾದದ್ದು ಕೇವಲ ಮರ್ತ್ಯವಾದ ಕಲಾಕೃತಿ. ಆದರೆ, ಅವನಾಗಿ ನಿರ್ಮಿತಗೊಂಡದ್ದು ಅಮರ. ಸ್ವತ್ತಿನ ಮಾದರಿ ನಿರ್ಜೀವವಾದ ವಸ್ತು ಚಲಿಸುವ ಅಥವಾ ಚಲನಾತ್ಮಕವಾದ ತತ್ವವೇ ಜಂಗಮ. ಸ್ಥಾವರ ಎನ್ನುವುದು ಸ್ಥಾಯಿಯ ಸಂಕೇತ ಅಥವಾ ದೇವರ ಮೂರ್ತಿ. ಒಂದು ದೇವಾಲಯ ಅಥವಾ ದೇವಾಲಯದಲ್ಲಿ ಆರಾಧನೆಗೆ ಒಳಗಾಗುವ ಶಿವನಮೂರ್ತಿ ಎಂದರ್ಥ. ವಿಶೇಷವಾಗಿ ಲಿಂಗಾಯತ ಧರ್ಮದಲ್ಲಿ ಜಂಗಮ ಎಂದರೆ ಭೌತಿಕ ಜಗತ್ತಿನ ಸಕಲ ಆಮಿಷಗಳನ್ನು ತ್ಯಜಿಸಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಶಿವನ ತತ್ವವನ್ನು ಭಕ್ತರಿಗೆ ಸಾರುತ್ತಾ ಜಗತ್ತಿನ ಚಲನಾತ್ಮಕ ಶಕ್ತಿಯ ರೂಪಕ ಹಾಗೂ ಧಾರ್ಮಿಕ ಪ್ರತಿಪಾದಕರಾಗಿ ಹಾಗೂ ದೇವರ ಮೂರ್ತ ರೂಪವಾಗಿ ಭಕ್ತರಿಗೆ ತತ್ವಗಳನ್ನು, ಧಾರೆಯೆರೆದು ಮನುಕುಲದ ಉದ್ಧಾರಕ್ಕೆ ಶ್ರಮಿಸುತ್ತಾನೆ ಎಂದರ್ಥ.

ಮೂಲ ಮಾತೃಕೆಯನ್ನು ಸಂಕೇತವಾಗಿ ಅಂದರೆ ದೇವಾಲಯದಲ್ಲಿ ಸ್ಥಾವರವಾಗಿ ನೆಲೆಸಿರುವ ಶಿವನಲ್ಲಿಗೆ ಬಡ ಜಂಗಮನು ಚಲಿಸುತ್ತಾನೆ. ಸ್ಥಾಯಿಯಾಗಿರುವ ಈ ದೇಹವೆಂಬ ದೇಗುಲಕ್ಕೆ ಜಂಗಮನು ಅರಿವಿನ ಚಲನಶೀಲತೆಯನ್ನು ನೀಡುತ್ತಾನೆ. ಮಧ್ಯಕಾಲೀನ ದಕ್ಷಿಣ ಭಾರತದ ದೇವಾಲಯಗಳು ಅದ್ಭುತ ರಚನೆಗಳಾಗಿದ್ದವು. ಅತ್ಯಂತ ಪ್ರಭಾವಶಾಲಿಗಳು ಹಾಗೂ ಶ್ರೀಮಂತರು ಈ ದೇವಸ್ಥಾನಗಳಿಗೆ ದಾನಗಳನ್ನು ನೀಡುವುದರೊಂದಿಗೆ ಪೋಷಿಸುತ್ತಿದ್ದರು. ಇವರು ಇರದಿದ್ದಲ್ಲಿ ಇಂತಹ ಬೃಹತ್ ರಚನೆಗಳಲ್ಲಿ ಆಭರಣ ಅಲಂಕೃತ ದೇವರುಗಳ ನೆಲೆ ಹಾಗೂ ಕೆತ್ತನೆಗಳ ಸ್ತಂಭಗಳ ರಚನೆ ಸಾಧ್ಯವಾಗುತ್ತಿರಲಿಲ್ಲ.

ಬಡವರ ಮೂಲಕ ಮತ್ತು ಅವರಿಗಾಗಿ ಶ್ರೀಮಂತ ಹಾಗೂ ವಿಶೇಷ ಸ್ಥಾನ ಹೊಂದಿರುವವರ ವಿರೋಧವಾಗಿ ಕೆಳಸ್ತರ ಹಾಗೂ ಜಾತಿ ಬಹಿಷ್ಕಾರಕ್ಕೆ ಒಳಗಾದವರಿಗೆ ವಚನ ಚಳವಳಿಯು ಸಾಮಾಜಿಕ ಕ್ರಾಂತಿಯಾಗಿ ಹೊರಹೊಮ್ಮಿತು. ಅಕ್ಷರಸ್ಥ ಪುರೋಹಿತರಿಗೆ ವಿರೋಧವಾಗಿ, ಅನಕ್ಷರಸ್ಥರಿಗಾಗಿ ಶಿವನಿಗಾಗಿ ತಾವು ಬೇಟೆಯಾಡಿದ ಮಾಂಸ ಹಾಗೂ ತಮ್ಮ ರಕ್ತವನ್ನೇ ಸಮರ್ಪಿಸುವವರಿಗಾಗಿ ಕ್ರಾಂತಿಯ ಅಭ್ಯುದಯವಾಯಿತು.

ಬಡವನಾದವನಿಗೆ ದೇವಾಲಯ ನಿರ್ಮಿಸಲಾಗದ ಅಸಹಾಯಕ ಪರಿಸ್ಥಿತಿ ಗೋಚರಿಸುತ್ತದೆ. ನಂತರ ಅವನು ಸಾಮಾನ್ಯ ಸ್ಥಿತಿಗೆ ಮರಳಿ ಒಡಲು ಹಾಗೂ ದೇವಾಲಯದ ನಡುವಿನ ಗುರುತುಗಳನ್ನು ಪ್ರತಿಪಾದಿಸುತ್ತಾನೆ. ಕಾಲುಗಳನ್ನು ಸ್ತಂಭವೆಂದು, ದೇಹವೇ ದೇಗುಲವೆಂದು, ಶಿರವು ಕಳಸವೆಂದು, ಹೊನ್ನಿನ ಪ್ರತಿಭಟಿಸುವ ಕಳಸ ಎಂದು ತಿಳಿಸುತ್ತಾರೆ. ಈ ವಚನವು ದೇವರ ಸುಂದರ ಮೂರ್ತಿಯನ್ನು ಕೆತ್ತುವ ಕಾರ್ಯವನ್ನು ಮಾಡುತ್ತಾ, ಅವನೇ ದೇವರ ಮೂರ್ತಿಯಾಗುತ್ತಾನೆ ಎಂದು ತಿಳಿಸುತ್ತದೆ.

ಸ್ಥಾವರ ಮತ್ತು ವ್ಯಕ್ತಿಯೆಂದರೆ ಲಿಂಗ ಹಾಗೂ ಜಂಗಮನ ನಡುವಿನ ವ್ಯತ್ಯಾಸ ಕೇವಲ ವಸ್ತು ಮತ್ತು ವ್ಯಕ್ತಿಯ ನಡುವಿನ ವ್ಯತ್ಯಾಸವಲ್ಲ. ಗುರು, ಲಿಂಗ ಮತ್ತು ಜಂಗಮ ಏಕಸ್ವರೂಪದಲ್ಲಿ ಸ್ವೀಕರಿಸಲಾಗುತ್ತದೆ. ಆಧ್ಯಾತ್ಮಿಕ ಗುರು ಶಿಲೆಯ ಸಂಕೇತವಾದ ಶಿವನ ಮೂರ್ತಿ ಹಾಗೂ ಶಿವನನ್ನು ಪ್ರತಿನಿಧಿಸುತ್ತಾ ಪರ್ಯಟನೆ ನಡೆಸುವ ಜಂಗಮ. ಈ ಸ್ವರೂಪಗಳು ಬೇರೆ ರೂಪಗಳಲ್ಲಿ ಕಂಡು ಬಂದರೂ ಅಂತಿಮವಾಗಿ ಇವರೆಲ್ಲ ಒಂದೇ. ಅಂದರೆ ಒಂದೇ ತತ್ವವನ್ನು ಪ್ರತಿಪಾದಿಸುವವರು.

ಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲೂ ಸ್ಥಾವರ ಮತ್ತು ಜಂಗಮರಿಬ್ಬರೂ ಒಂದೇ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಒಬ್ಬ ಭಕ್ತನು ನಡೆದಾಡುವ ಮಾನವ ಜಂಗಮ ಸೇವೆಯನ್ನು ಅಲಕ್ಷಿಸಿ ಲಿಂಗ ಶಿಲೆಯ ಬಾಹ್ಯ ಆರಾಧನೆಗೆ ಪ್ರಾತಿನಿಧ್ಯ ನೀಡಿದ್ದೇ ಅದಲ್ಲಿ ಅವನು ತಿರಸ್ಕಾರಕ್ಕೆ ಮಾತ್ರ ಯೋಗ್ಯನಾಗುತ್ತಾನೆ.

ವಚನದ ಕೊನೆಯ ವಾಕ್ಯದಲ್ಲಿ ಜಂಗಮನನ್ನು ತಟಸ್ಥಕ್ಕೆ ಕೊಂಡೊಯ್ಯಲಾಗಿದೆ. ಈ ಅಮೂರ್ತತೆಯ ಸತ್ಯದಿಂದ ಜೀವಂತವಿರುವ ಹಾಗೂ ನಶಿಸಿರುವ ಜಂಗಮನ ಮೂಲಕ ಸಾರ್ವತ್ರಿಕ ಅಮರ ತತ್ವದ ಅರಿವನ್ನು ಜಗತ್ತಿಗೆ ಪರಿಚಯಿಸುತ್ತದೆ. ಆದಕಾರಣ ಜಂಗಮನು ಪವಿತ್ರ ಶಿವನ ಅವತಾರವೆಂದೂ ಪರಿಭಾವಿಸಲಾಗಿದ್ದು, ಎಂದೆಂದಿಗೂ ಅಮರವಾಗಿಯೇ ಉಳಿಯತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT