ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಕೊರೊನಾ ವಾರ್ಡ್‌ ಬೇರೆಡೆ ಸ್ಥಳಾಂತರಿಸಲು ಆಗ್ರಹ

Last Updated 9 ಜುಲೈ 2020, 10:03 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತೆಗೆದಿರುವ ಕೊರೊನಾ ವಿಶೇಷ ವಾರ್ಡ್‌ ಅನ್ನು ತಕ್ಷಣವೇ ಬೇರೆಡೆ ಸ್ಥಳಾಂತರಿಸಬೇಕೆಂದು ವಿಜಯನಗರ ನಾಗರಿಕ ವೇದಿಕೆ ಹಾಗೂ ‘ಆದಿತ್ಯ ವಿಜಯಂ’ ಸಂಘಟನೆಗಳು ಆಗ್ರಹಿಸಿವೆ.

ಈ ಸಂಬಂಧ ಎರಡೂ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಉಪವಿಭಾಗಾಧಿಕಾರಿ ಶೇಕ್ ತನ್ವೀರ್‌ ಆಸಿಫ್‌ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್‌ ಪಕ್ಕದಲ್ಲೇ ಕೊರೊನಾ ವಾರ್ಡ್‌ ತೆರೆದು ಅಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ನವಜಾತ ಶಿಶುಗಳಿಗೆ ತೊಂದರೆಯಾಗಬಹುದು. ಈಗಾಗಲೇ ಆಸ್ಪತ್ರೆಯ ಅನೇಕ ವೈದ್ಯರು, ನರ್ಸ್‌ಗಳಿಗೆ ಸೋಂಕು ತಗುಲಿದೆ. ನಿತ್ಯ ನಗರವೊಂದರಲ್ಲೇ 30ರಿಂದ 40 ಪ್ರಕರಣಗಳು ವರದಿಯಾಗುತ್ತಿವೆ. ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಬಹಳ ಅಗತ್ಯ. ಹಾಗಾಗಿ ಕೂಡಲೇ ಕೊರೊನಾ ವಾರ್ಡ್‌ ಅನ್ನು ಆಸ್ಪತ್ರೆಯಿಂದ ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಹತ್ತು ಸಾವಿರ ರ್‍ಯಾಪಿಡ್‌ ಟೆಸ್ಟ್‌ ಕಿಟ್‌ ತರಿಸಲಾಗಿದೆ. ಅರ್ಧಗಂಟೆಯೊಳಗೆ ಸೋಂಕಿನ ಪರೀಕ್ಷೆಯ ವರದಿ ಕೈಸೇರುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರ್‍ಯಾಪಿಡ್‌ ಟೆಸ್ಟ್‌ ನಡೆಸಬೇಕು. ವೇಗವಾಗಿ ಸೋಂಕು ಹರಡುತ್ತಿರುವುದನ್ನು ತಡೆಯಬೇಕು ಎಂದು ಹಕ್ಕೊತ್ತಾಯ ಮಾಡಿದ್ದಾರೆ.

ಅನೇಕರು ಮಾಸ್ಕ್‌ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ಅಂತರ ಕಾಯ್ದುಕೊಳ್ಳುತ್ತಿಲ್ಲ. ಅಂತಹವರ ವಿರುದ್ಧ ಮುಲಾಜಿಲ್ಲದೆ ದಂಡ ಹೇರಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯನಗರ ನಾಗರಿಕ ವೇದಿಕೆ ಸಂಚಾಲಕ ವೈ. ಯಮುನೇಶ್‌, ‘ಆದಿತ್ಯ ವಿಜಯಂ’ ಸಂಘಟನೆ ಅಧ್ಯಕ್ಷ ಉಮಾ ಮಹೇಶ್ವರ, ಮುಖಂಡರಾದ ಜೋಗಳೇಕರ್‌, ಬೋಡಾ ರಾಮಪ್ಪ, ಯು.ಅಶ್ವತ್ಥಪ್ಪ, ಹನುಮಂತಪ್ಪ ಪೂಜಾರ್, ಆಂಜನೇಯಲು, ಕೆ.ಮಲ್ಲಿಕಾರ್ಜುನ, ಕೌತಾಳ್ ವಿಶ್ವನಾಥ್, ಮನೋಹರ್ ಭಂಡಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT