ಗುರುವಾರ , ಸೆಪ್ಟೆಂಬರ್ 29, 2022
26 °C
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕೆಲಸ ಅನಗತ್ಯ ವಿಳಂಬ–ಸಾರ್ವಜನಿಕರ ಆರೋಪ

ಸಿಬ್ಬಂದಿ ಕೊರತೆ; ‘ಸಕಾಲ’ಕ್ಕೆ ಸಿಗುತ್ತಿಲ್ಲ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯ ಬಹುತೇಕ ಸ್ಥಳೀಯ ಸಂಸ್ಥೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಸಾರ್ವಜನಿಕರಿಗೆ ‘ಸಕಾಲ’ದಲ್ಲಿ ಸರ್ಕಾರಿ ಸೇವೆಯೂ ಸಿಗುತ್ತಿಲ್ಲ ಎಂಬ ಆರೋಪಗಳು ಜನರಿಂದಲೇ ಕೇಳಿ ಬಂದಿದೆ.

ಸಿಬ್ಬಂದಿ ಕೊರತೆ ನಿನ್ನೆ, ಮೊನ್ನೆಯ ವಿಷಯವಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳನ್ನು ಕಾಡುತ್ತಿದೆ. ಯಾವುದೇ ಹೊಸ ನೇಮಕಾತಿ ಆದರೂ ಹೊರಗುತ್ತಿಗೆ ಮೇಲೆ ಆಗುತ್ತಿದೆ. ಆದರೆ, ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಸಿಬ್ಬಂದಿ ನೇಮಕವಾಗದ ಕಾರಣ ಸಹಜವಾಗಿಯೇ ಅವರ ದೈನಂದಿನ ಕೆಲಸದ ಮೇಲೂ ಆಗುತ್ತಿದೆ. ಆದರೆ, ಇದೊಂದೆ ಮುಖ್ಯ ಕಾರಣವಲ್ಲ ಎಂದು ಗೊತ್ತಾಗಿದೆ.

ಸ್ಥಳೀಯ ಸಂಸ್ಥೆಗಳಲ್ಲಿ ಫಾರಂ 3, ಮ್ಯುಟೇಶನ್‌, ಕಟ್ಟಡ ನಿರ್ಮಾಣ ಪರವಾನಗಿ, ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ, ಜನನ ಮತ್ತು ಮರಣ ನೋಂದಣಿ ಪ್ರಮಾಣ ಪತ್ರ, ಕೇಬಲ್‌ ಅಳವಡಿಕೆಗೆ ಪರವಾನಗಿ, ಬ್ಯಾನರ್‌ –ಬಂಟಿಂಗ್ಸ್‌ ಹಾಕಲು ಅನುಮತಿ ಪಡೆಯಬೇಕು. ಆದರೆ, ಹೆಚ್ಚಿನ ಕಡೆಗಳಲ್ಲಿ ಕಂದಾಯ ಅಧಿಕಾರಿಗಳು, ಬಿಲ್‌ ಕಲೆಕ್ಟರ್‌ಗಳ ಸಮಸ್ಯೆ ಇದೆ. ರಾಜ್ಯ ಸರ್ಕಾರ ಈಗಾಗಲೇ ಎಲ್ಲ ಸರ್ಕಾರಿ ಸೇವೆಗಳನ್ನು ‘ಸಕಾಲ’ ವ್ಯಾಪ್ತಿಗೆ ತಂದಿದೆ. ನಿಗದಿತ ಕಾಲಮಿತಿಯೊಳಗೆ ಆಯಾ ಸೇವೆಗಳನ್ನು ನೀಡಬೇಕು. ಆದರೆ, ಆ ಕೆಲಸವೇ ಆಗುತ್ತಿಲ್ಲ.

ಖಾತೆ ಬದಲಾವಣೆ, ಮ್ಯುಟೇಶನ್‌, ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಸಾರ್ವಜನಿಕರು ತಿಂಗಳುಗಟ್ಟಲೇ ಹೆಣಗಾಡಬೇಕಾದ ಪರಿಸ್ಥಿತಿ ಇದೆ. ‘ಮಧ್ಯವರ್ತಿಗಳ ಮೂಲಕ ಕಡತ ಕಳಿಸಿದರೆ ಬೇಗ ಕೆಲಸಗಳಾಗುತ್ತವೆ. ನಾವೇ ಸ್ವತಃ ಹೋಗಿ ಅರ್ಜಿ ಸಲ್ಲಿಸಿದರೆ ಯಾರೂ ಕೂಡ ಆ ಕಡತ ನೋಡುವುದೇ ಇಲ್ಲ. ಅದನ್ನು ಪ್ರಶ್ನಿಸಲು ಹೋದರೆ ನೂರೆಂಟು ನೆಪ ಹೇಳಿ ಓಡಾಡಿಸುತ್ತಾರೆ’ ಎನ್ನುವುದು ಸಾರ್ವಜನಿಕರ ದೂರು.

ತಿಂಗಳುಗಟ್ಟಲೆ ಅಲೆಯಬೇಕು

ಕುರುಗೋಡು: ಜನರು ತಮ್ಮ ಆಸ್ತಿ ದಾಖಲಾತಿಗಳಿಗೆ ಸಂಬಂಧಿಸಿದ ಕೆಲಸಕ್ಕೆ ಇಲ್ಲಿನ ಪುರಸಭೆಗೆ ತಿಂಗಳುಗಟ್ಟಲೆ ಅಲೆಯಬೇಕು. ಪರಿಚಿತರಲ್ಲದ ಮತ್ತು ಸಾಮಾನ್ಯ ಜ್ಞಾನವಿಲ್ಲದ ಅಮಾಯಕ ಜನರ ಗೋಳು ಹೇಳತೀರದು. ಅವರಿಗೆ ಮಧ್ಯವರ್ತಿಗಳು ಅನಿವಾರ್ಯ.

ಆಸ್ತಿ ತೆರಿಗೆ ಪಾವತಿಸಲು ಸಮರ್ಪಕ ಮಾಹಿತಿ ದೊರೆಯದೆ ಜನರು ಪರಿತಪಿಸುವ ಪರಿಸ್ಥಿತಿ ಇದೆ. ಹಕ್ಕು ಬದಲಾವಣೆಗೆ ಅರ್ಜಿಸಲ್ಲಿಸಿ ಹಲವು ತಿಂಗಳು ಕಳೆದರೂ ಅದು ವಿಲೇವಾರಿಯಾಗುವುದಿಲ್ಲ. ಸಂಬಂಧಿಸಿದ ಅಧಿಕಾರಿಯನ್ನು ನೇರವಾಗಿ ಭೇಟಿ ಮಾಡಿದರೆ ಮಾತ್ರ ದೂಳು ಹಿಡಿದ ದಾಖಲೆ ಹೊರತೆಗೆಯುವ ಪ್ರಕ್ರಿಯೆ ನಡೆಯುತ್ತದೆ. ಇಲ್ಲವಾದರೆ ನಿಮ್ಮ ಕಡತ ಮಿಸ್‍ ಆಗಿದೆ. ಪುನಃ ಅರ್ಜಿ ಸಲ್ಲಿಸಿ ಎಂಬ ಸಿದ್ಧ ಉತ್ತರ ಬರುತ್ತದೆ.

‘ಕಚೇರಿಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಇರುವ ಸಿಬ್ಬಂದಿ ಬಳಸಿಕೊಂಡು ಜನರ ಕೆಲಸ ಮಾಡಿಕೊಡಲಾಗುತ್ತಿದೆ. ಮುಂದೆ ತೊಂದರೆಯಾಗದಂತೆ ಸೇವೆ ನೀಡಲು ನಿಗಾ ವಹಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ತಿಳಿಸಿದರು. 

677 ಅರ್ಜಿಗಳ ವಿಲೇವಾರಿ

ಕಂಪ್ಲಿ: ಇಲ್ಲಿಯ ಪುರಸಭೆ ಸಿಬ್ಬಂದಿ ಕೊರತೆ ನಡುವೆಯೂ ಸಾರ್ವಜನಿಕರಿಗೆ ಫಾರಂ-3, ಮ್ಯುಟೇಷನ್, ಕಟ್ಟಡ ಪರವಾನಗಿ, ಖಾತಾ ನಕಲು, ವರ್ಗಾವಣೆ ನಕಲು, ನವೀಕರಣ ಸೇರಿದಂತೆ 677ಅರ್ಜಿಗಳನ್ನು ಈ ವರ್ಷ ವಿಲೇವಾರಿ ಮಾಡಿದೆ.

ಇರುವ ಸಿಬ್ಬಂದಿ ಕೊರೊನಾ ಕೆಲಸಕ್ಕೆ ನಿಯೋಜನೆ ಮಾಡಿದ್ದರಿಂದ ಆ ಸಂದರ್ಭದಲ್ಲಿ ಸಾರ್ವಜನಿಕರು ಸಲ್ಲಿಸಿದ್ದ ನೂರಾರು ಅರ್ಜಿಗಳು ಬಾಕಿ ಉಳಿದಿದ್ದವು. ಕಳೆದ ಒಂದು ವರ್ಷದಲ್ಲಿ ಪರಿಶೀಲಿಸಿ ಇತ್ಯರ್ಥಪಡಿಸಲಾಗಿದೆ. ಕೆಲವೊಂದು ಅರ್ಜಿಗಳಿಗೆ ಪೂರಕ ದಾಖಲೆ ಇಲ್ಲದ ಕಾರಣ ಹಿಂಬರಹ ನೀಡಲಾಗಿದೆ.

‘ಪುರಸಭೆಯಲ್ಲಿ ಮಧ್ಯವರ್ತಿಗಳಿಲ್ಲದೆ ಕೆಲಸವಾಗುವುದಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಸಹಜವಾಗಿತ್ತು. ನಾನು ಬಂದು ಒಂದು ವರ್ಷ ಅವಧಿಯಲ್ಲಿ ಇದಕ್ಕೆಲ್ಲ ಮಟ್ಟ ಹಾಕಿದ್ದೇನೆ. ಕೆಲಸ ವಿಳಂಬವಾದಲ್ಲಿ ನೇರವಾಗಿ ಸಂಪರ್ಕಿಸುವಂತೆ ನಾಗರಿಕರಿಗೆ ತಿಳಿಸಿದ್ದೇನೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪ ತಿಳಿಸಿದರು.

ಅನಗತ್ಯ ವಿಳಂಬ:

ಹಗರಿಬೊಮ್ಮನಹಳ್ಳಿ: ಇಲ್ಲಿನ ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳು ವಿಳಂಬವಾಗಿ ಸಿಗುತ್ತಿವೆ. ಜನನ ಮತ್ತು ಮರಣ ಪ್ರಮಾಣ ಪತ್ರ, ನಿವೇಶನ ಮತ್ತು ವಸತಿಗೆ ಸಂಬಂಧಿಸಿದ ಪತ್ರಗಳ ವಿಲೇವಾರಿಯಲ್ಲೂ ವಿಳಂಬವಾಗುತ್ತಿದೆ. ಇಲ್ಲಿರುವ ಆರು ಜನ ಸಿಬ್ಬಂದಿಯನ್ನು ಕಮಲಾಪುರ, ಮರಿಯಮ್ಮನಹಳ್ಳಿ ಮತ್ತು ಹೊಸಪೇಟೆಗೆ ನಿಯೋಜನೆ ಮಾಡಿರುವುದರಿಂದ ಇಲ್ಲಿನ ಸೇವೆಗಳಿಗೆ ತೊಡಕುಂಟಾಗಿದೆ. ಎಂಜಿನಿಯರ್, ಆರೋಗ್ಯ ಅಧಿಕಾರಿ ವರ್ಗಾವಣೆಯಾಗಿದ್ದಾರೆ. ಈಗ ಅವೆರಡೂ ಹುದ್ದೆಗಳೂ ಖಾಲಿ ಇವೆ.

‘ಈಗಿರುವ ಸಿಬ್ಬಂದಿಯಿಂದಲೇ ಪುರಸಭೆಯ ಎಲ್ಲ ಸೇವೆಗಳನ್ನು ಕೊಡುತ್ತಿದ್ದೇವೆ. ಖಾಲಿ ಇರುವ ಸ್ಥಾನಗಳು ಭರ್ತಿಯಾದಲ್ಲಿ ಆಡಳಿತ ಇನ್ನೂ ವೇಗವಾಗುತ್ತದೆ’ ಎಂದು ಮುಖ್ಯಾಧಿಕಾರಿ ಎಂ.ಕೆ.ಮುಗುಳಿ ಹೇಳುತ್ತಾರೆ.

ಸಕಾಲಕ್ಕೆ ಕೆಲಸಗಳಾಗದ ಪಟ್ಟಣ ಪಂಚಾಯ್ತಿ:

ಕೊಟ್ಟೂರು: ಪಟ್ಟಣ ಪಂಚಾಯ್ತಿಯಲ್ಲಿ ನಿಗದಿತ ಸಮಯದೊಳಗೆ ಕೆಲಸಗಳು ಆಗುವುದಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

‘ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಡುತ್ತೇವೆ ಎಂದು ಮಧ್ಯವರ್ತಿಗಳು ಹೇಳುತ್ತಾರೆ. ಅವರಿಂದಲೂ ಸಕಾಲಕ್ಕೆ ಕೆಲಸಗಳಾಗುವುದಿಲ್ಲ. ಕಚೇರಿಯ ಸಿಬ್ಬಂದಿಯೂ ಮಾಡಿಕೊಡುವುದಿಲ್ಲ’ ಎಂದು ರಮೇಶ್ ಬೇಸರ ತೋಡಿಕೊಂಡರು.

‘ಸಿಬ್ಬಂದಿ ಕೊರತೆ ಇದೆ. ಆದರೂ ಸಾರ್ವಜನಿಕರ ಕೆಲಸಗಳಿಗೆ ವ್ಯತ್ಯಯವಾಗದಂತೆ ಇರುವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಮುಖ್ಯಾಧಿಕಾರಿ ಎ.ನಸರುಲ್ಲಾ ತಿಳಿಸಿದರು.

677 ಅರ್ಜಿಗಳ ವಿಲೇವಾರಿ:

ಕಂಪ್ಲಿ: ಇಲ್ಲಿಯ ಪುರಸಭೆ ಸಿಬ್ಬಂದಿ ಕೊರತೆ ನಡುವೆಯೂ ಸಾರ್ವಜನಿಕರಿಗೆ ಫಾರಂ-3, ಮ್ಯುಟೇಷನ್, ಕಟ್ಟಡ ಪರವಾನಗಿ, ಖಾತಾ ನಕಲು, ವರ್ಗಾವಣೆ ನಕಲು, ನವೀಕರಣ ಸೇರಿದಂತೆ 677ಅರ್ಜಿಗಳನ್ನು ಈ ವರ್ಷ ವಿಲೇವಾರಿ ಮಾಡಿದೆ.

ಇರುವ ಸಿಬ್ಬಂದಿ ಕೊರೊನಾ ಕೆಲಸಕ್ಕೆ ನಿಯೋಜನೆ ಮಾಡಿದ್ದರಿಂದ ಆ ಸಂದರ್ಭದಲ್ಲಿ ಸಾರ್ವಜನಿಕರು ಸಲ್ಲಿಸಿದ್ದ ನೂರಾರು ಅರ್ಜಿಗಳು ಬಾಕಿ ಉಳಿದಿದ್ದವು. ಕಳೆದ ಒಂದು ವರ್ಷದಲ್ಲಿ ಪರಿಶೀಲಿಸಿ ಇತ್ಯರ್ಥಪಡಿಸಲಾಗಿದೆ. ಕೆಲವೊಂದು ಅರ್ಜಿಗಳಿಗೆ ಪೂರಕ ದಾಖಲೆ ಇಲ್ಲದ ಕಾರಣ ಹಿಂಬರಹ ನೀಡಲಾಗಿದೆ.

‘ಪುರಸಭೆಯಲ್ಲಿ ಮಧ್ಯವರ್ತಿಗಳಿಲ್ಲದೆ ಕೆಲಸವಾಗುವುದಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಸಹಜವಾಗಿತ್ತು. ನಾನು ಬಂದು ಒಂದು ವರ್ಷ ಅವಧಿಯಲ್ಲಿ ಇದಕ್ಕೆಲ್ಲ ಮಟ್ಟ ಹಾಕಿದ್ದೇನೆ. ಕೆಲಸ ವಿಳಂಬವಾದಲ್ಲಿ ನೇರವಾಗಿ ಸಂಪರ್ಕಿಸುವಂತೆ ನಾಗರಿಕರಿಗೆ ತಿಳಿಸಿದ್ದೇನೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪ ತಿಳಿಸಿದರು.

ಬೆರಳೆಣಿಕೆ ಸಿಬ್ಬಂದಿಗೆ ಹೆಚ್ಚಿನ ಕೆಲಸ:

ಹರಪನಹಳ್ಳಿ : ಪುರಸಭೆಯಲ್ಲಿ ಕಂದಾಯ ಶಾಖೆಯಲ್ಲಿ ಬೆರಳೆಣಿಕೆ ಸಿಬ್ಬಂದಿಗೆ ಹೆಚ್ಚಿನ ಕೆಲಸದ ಒತ್ತಡವಿದೆ.

27 ವಾರ್ಡ್ ಗಳಿಂದ  ಇ ಆಸ್ತಿ - ನಿರ್ಮಾಣ, ಜನಹಿತ, ವ್ಯಾಪಾರ, ಜಲನಿಧಿ, ಜನನ ಮತ್ತು ಮರಣ ನೋಂದಣಿ ಸೇರಿ ವಿವಿಧ ಸೌಲಭ್ಯಗಳನ್ನು ಕೋರಿ ಬರುವ ಅರ್ಜಿಗಳಿಗೆ ಟಪಾಲು ವಿಭಾಗದಲ್ಲಿಯೇ ದಾಖಲೆ ಪರಿಶೀಲಿಸಿ ಹಿಂಬರಹ ಕೊಡುವ ವ್ಯವಸ್ಥೆ ಜಾರಿಯಲ್ಲಿದೆ. ದಾಖಲೆಗಳಿದ್ದರೂ ಕೆಲವರನ್ನು ಅಲೆದಾಡಿಸುತ್ತಾರೆ ಎನ್ನುವ ಆರೋಪವು ಇದೆ.

‘ದಾಖಲೆಗಳ ಕೊರತೆ, ಅಳತೆ ವ್ಯತ್ಯಾಸಗಳಿಂದಾಗಿ ಇ –ಸ್ವತ್ತು ಪ್ರಮಾಣ ಪತ್ರ ಸಕಾಲಕ್ಕೆ ವಿತರಿಸಲು ವಿಳಂಬವಾಗುತ್ತಿದೆ. ಪ್ರತಿ ನಿತ್ಯವೂ ಬಾಕಿ ಉಳಿಯುವ ಕಡತಗಳಿಗೆ,  ಸಕಾರಣ ಕೊಟ್ಟು ಹಿಂಬರಹ ಕೊಡುತ್ತೇವೆ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ತಿಳಿಸಿದರು. 

ತಿಂಗಳುಗಟ್ಟಲೆ ಅಲೆಯಬೇಕು:

ಕುರುಗೋಡು: ಜನರು ತಮ್ಮ ಆಸ್ತಿ ದಾಖಲಾತಿಗಳಿಗೆ ಸಂಬಂಧಿಸಿದ ಕೆಲಸಕ್ಕೆ ಇಲ್ಲಿನ ಪುರಸಭೆಗೆ ತಿಂಗಳುಗಟ್ಟಲೆ ಅಲೆಯಬೇಕು. ಪರಿಚಿತರಲ್ಲದ ಮತ್ತು ಸಾಮಾನ್ಯ ಜ್ಞಾನವಿಲ್ಲದ ಅಮಾಯಕ ಜನರ ಗೋಳು ಹೇಳತೀರದು. ಅವರಿಗೆ ಮಧ್ಯವರ್ತಿಗಳು ಅನಿವಾರ್ಯ.

ಆಸ್ತಿ ತೆರಿಗೆ ಪಾವತಿಸಲು ಸಮರ್ಪಕ ಮಾಹಿತಿ ದೊರೆಯದೆ ಜನರು ಪರಿತಪಿಸುವ ಪರಿಸ್ಥಿತಿ ಇದೆ. ಹಕ್ಕು ಬದಲಾವಣೆಗೆ ಅರ್ಜಿಸಲ್ಲಿಸಿ ಹಲವು ತಿಂಗಳು ಕಳೆದರೂ ಅದು ವಿಲೇವಾರಿಯಾಗುವುದಿಲ್ಲ. ಸಂಬಂಧಿಸಿದ ಅಧಿಕಾರಿಯನ್ನು ನೇರವಾಗಿ ಭೇಟಿ ಮಾಡಿದರೆ ಮಾತ್ರ ದೂಳು ಹಿಡಿದ ದಾಖಲೆ ಹೊರತೆಗೆಯುವ ಪ್ರಕ್ರಿಯೆ ನಡೆಯುತ್ತದೆ. ಇಲ್ಲವಾದರೆ ನಿಮ್ಮ ಫೈಲ್ ಮಿಸ್‍ ಆಗಿದೆ. ಪುನಃ ಅರ್ಜಿ ಸಲ್ಲಿಸಿ ಎಂಬ ಸಿದ್ದ ಉತ್ತರ ಬರುತ್ತದೆ.

ಫಾರಂ 3 ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ತಾತನ ಕಾಲದ ದಾಖಲೆಗಳಿಲ್ಲದ ಹಳೇ ಆಸ್ತಿ ಹೊಂದಿದವರು ನಿತ್ಯ ಕಚೇರಿಗೆ ಅಲೆಯುವ ನಾಯಿಪಾಡು ಅವರದು. ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಹಾಲಿ ಮತ್ತು ಮಾಜಿ ಶಾಸಕರು ಇತ್ತೀಚೆಗೆ ಅಧಿಕಾರಿಗಳಿಗೆ ತಾಕೀತು ಮಾಡಿದರೂ ಆಡಳಿತ ಚುರುಕುಗೊಂಡಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

‘ಕಚೇರಿಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಇರುವ ಸಿಬ್ಬಂದಿ ಬಳಸಿಕೊಂಡು ಜನರ ಕೆಲಸ ಮಾಡಿಕೊಡಲಾಗುತ್ತಿದೆ. ಮುಂದೆ ತೊಂದರೆಯಾಗದಂತೆ ಸೇವೆ ನೀಡಲು ನಿಗಾ ವಹಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ತಿಳಿಸಿದರು.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಸಿ. ಶಿವಾನಂದ, ಎಸ್‌.ಎಂ. ಗುರುಪ್ರಸಾದ್‌, ಎ.ಎಂ. ಸೋಮಶೇಖರಯ್ಯ, ವಿ. ನಾಗಭೂಷಣ್‌, ವಿಶ್ವನಾಥ ಡಿ., ವಾಗೀಶ್ ಎ. ಕುರುಗೋಡು, ಪಂಡಿತಾರಾಧ್ಯ ಎಚ್.ಎಂ. ಮೆಟ್ರಿ, ಕೆ. ಸೋಮಶೇಖರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು