ಶನಿವಾರ, ಏಪ್ರಿಲ್ 1, 2023
31 °C
ಸರ್ಕಾರ ಸ್ಲಂ ಘೋಷಿಸಿದರೂ ಇನ್ನೂ ಸಿಗದ ಕ್ರಯ ಪತ್ರ

ಹೊಸಪೇಟೆ ಕೊಳೆಗೇರಿ ನಿವಾಸಿಗಳ ಬದುಕು ಅಯೋಮಯ: ಕನಿಷ್ಠ ಮೂಲಸೌಕರ್ಯಗಳ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೊಳೆಗೇರಿಗಳಲ್ಲಿ ಈಗಲೂ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಈಗಲೂ ಅಲ್ಲಿನವರ ಬದುಕು ಅಯೋಮಯ.

ನಗರವೊಂದರಲ್ಲೇ 56 ಘೋಷಿತ ಸ್ಲಂಗಳಿವೆ. ಈಗಲೂ ಬಹುತೇಕರಿಗೆ ಕ್ರಯ ಪತ್ರ ಸಿಕ್ಕಿಲ್ಲ. ಹೆಚ್ಚಿನ ಸ್ಲಂಗಳಲ್ಲಿ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ.

2004ರಲ್ಲಿ ರಾಜ್ಯ ಸರ್ಕಾರ ‘ನಿರ್ಮಲ ಜ್ಯೋತಿ’ ಯೋಜನೆಯಡಿ ಸ್ಲಂಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ರಮ ಹಾಕಿಕೊಂಡಿತ್ತು. ಆಗ ಸಿ.ಸಿ. ರಸ್ತೆ, ಚರಂಡಿ ನಿರ್ಮಿಸಲಾಗಿತ್ತು. ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಅದಾದ ನಂತರ ಸರ್ಕಾರ ಕೊಳೆಗೇರಿಗಳತ್ತ ತಿರುಗಿಯೂ ನೋಡಿಲ್ಲ ಎನ್ನುವುದು ಸ್ಥಳೀಯರ ಆರೋಪ.

‘ನಿರ್ಮಲ ಜ್ಯೋತಿ’ ಯೋಜನೆಯ ಸದುದ್ದೇಶ ಉತ್ತಮವಾಗಿತ್ತು. ಆದರೆ, ಸರ್ಕಾರ ಬದಲಾದಂತೆ ಯೋಜನೆ ಮೂಲೆ ಸೇರಿತು. ಆಯಾ ಪಕ್ಷದ ಸರ್ಕಾರಗಳು ಅದಕ್ಕೆ ಒತ್ತು ಕೊಡುತ್ತ ಬಂದಿದ್ದರೆ ಇದುವರೆಗೆ ಕೊಳೆಗೇರಿಗಳ ಚಹರೆಯೇ ಬದಲಾಗುತ್ತಿತ್ತು. ಆದರೆ, ಇಚ್ಛಾಶಕ್ತಿಯ ಕೊರತೆಯಿಂದ ಹೆಸರಿಗೆ ತಕ್ಕಂತೆ ಸ್ಲಂಗಳು ಸ್ಲಂಗಳಾಗಿಯೇ ಉಳಿದಿವೆ.

ನಗರದ ಜಿ.ಟಿ. ಕಾಂಪೌಂಡ್‌, ಮೂರಗೆರೆ, ಪ್ರೇಮ್‌ ನಗರ, ಜಿಗಳರಾಯನಕಟ್ಟೆ, ಮಡಪತ್ರ ಓಣಿ, ಎಸ್‌.ಎಲ್‌.ಚೌಕಿ, ಮಲ್ಲಮ್ಮನ ಗದ್ದೆ, ಆಜಾದ್‌ ನಗರ, ಪಟೇಲ್‌ ಶಾಲೆ ಹಿಂಭಾಗ, ಜೆ.ಪಿ. ಭವನ ಹಿಂಭಾಗದ ಆಶ್ರಯ ಕಾಲೊನಿ, ಲೆಪ್ರಸಿ ಕಾಲೊನಿ, ಹಂಪಿ ರಸ್ತೆ, ಜಬ್ಬಲ್‌ ಏರಿಯಾ, ಇಂದಿರಾ ನಗರ ಸೇರಿದಂತೆ ಹಲವು ಸ್ಲಂಗಳಲ್ಲಿ ಈಗಲೂ ಶುದ್ಧ ಕುಡಿಯುವ ನೀರಿಗೆ ಹೆಣಗಾಟ ನಡೆಸುವ ಪರಿಸ್ಥಿತಿ ಇದೆ.

ನೀರಿಗಾಗಿಯೇ ಜಗಳ ಕೂಡ ಆಗುತ್ತವೆ. ಎಡಿಬಿಯಿಂದ ಕುಡಿಯುವ ನೀರಿನ ಪೈಪ್‌ಲೈನ್‌, ಮೀಟರ್‌ ಅಳವಡಿಸಲಾಗಿದೆ. ಆದರೆ, ನಲ್ಲಿಗಳಿಗೆ ನೀರು ಮಾತ್ರ ಹರಿದಿಲ್ಲ. ಪೈಪ್‌ಲೈನ್‌ಗಾಗಿ ಅಗೆದಿರುವ ರಸ್ತೆಗಳು ದುರಸ್ತಿ ಕಂಡಿಲ್ಲ. ಸ್ವಲ್ಪ ಮಳೆ ಬಂದರೂ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸುತ್ತದೆ.

ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಒಂದು ಅಂದಾಜಿನ ಪ್ರಕಾರ, ನಗರದಲ್ಲಿ ಲಕ್ಷಕ್ಕೂ ಹೆಚ್ಚು ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಾರೆ. 25 ಸಾವಿರ ಜೋಪಡಿ, ಕಚ್ಚಾ ಮನೆಗಳಲ್ಲಿ ವಾಸಿಸುತ್ತಾರೆ. ಬೆರಳೆಣಿಕೆ ಜನರಿಗಷ್ಟೇ ಕ್ರಯ ಪತ್ರ ಸಿಕ್ಕಿದೆ. ಇನ್ನು, ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿರುವ ಸ್ಲಂ ನಿವಾಸಿಗಳಿಗೆ ತೆರವಿನ ಭೀತಿ ಸದಾ ಕಾಡುತ್ತ ಇರುತ್ತದೆ. ಖಾಸಗಿಯವರ ಜಾಗವನ್ನು ಸರ್ಕಾರ ಖರೀದಿಸಿ, ಸ್ಲಂ ವಾಸಿಗಳಿಗೆ ಕ್ರಯ ಪತ್ರ ವಿತರಿಸಬೇಕು. ಆದರೆ, ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳೇ ನಡೆದಿಲ್ಲ. ಇದು ನಗರದ ಚಿತ್ರಣವಷ್ಟೇ. ಇಡೀ ಜಿಲ್ಲೆಯಲ್ಲಿ ಇದೇ ಪರಿಸ್ಥಿತಿ ಇದೆ.

‘ಬಹುತೇಕ ಸ್ಲಂಗಳಲ್ಲಿ ಈಗಲೂ ಒಳಚರಂಡಿ ಇಲ್ಲ. ಚರಂಡಿಯ ನೀರು ಮನೆಗಳ ನಡುವೆ ಹರಿಯುತ್ತದೆ. ದುರ್ಗಂಧದಿಂದ ರೋಗ ರುಜಿನಕ್ಕೆ ಕಾರಣವಾಗಿದೆ. ಮನೆಯಲ್ಲಿ ಇರದಂತಹ ಪರಿಸ್ಥಿತಿ ಇದೆ. ಆದರೆ, ಸೂರಿಲ್ಲದವರು ಅನಿವಾರ್ಯವಾಗಿ ಅಲ್ಲಿರಬೇಕಾಗಿದೆ’ ಎಂದು ಸ್ಲಂ ಜನಜಾಗೃತಿ ಆಂದೋಲನ ಸಮಿತಿಯ ಸಂಚಾಲಕ ರಾಮಚಂದ್ರ ಅವರು ಸ್ಲಂಗಳ ಚಿತ್ರಣ ಬಿಚ್ಚಿಟ್ಟರು.

‘ಹೆಚ್ಚಿನ ಸ್ಲಂಗಳಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್‌ಗಳು ಹಾಳಾಗಿರುವುದರಿಂದ ಕಲುಷಿತ ನೀರು ಪೂರೈಕೆಯಾಗುತ್ತದೆ. ಈ ವಿಷಯ ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸ್ಲಂ ನಿವಾಸಿಗಳ ಬಗೆಗಿನ ನಿರ್ಲಕ್ಷ್ಯ ಧೋರಣೆಗೆ ಇದು ಸಾಕ್ಷಿ’ ಎಂದು ಹೇಳಿದರು.

ಈ ಸಂಬಂಧ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ಕೃಷ್ಣಾರೆಡ್ಡಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಮಳೆಗಾಲಕ್ಕೆ ಬೆಚ್ಚಿ ಬೀಳುವ ಸ್ಲಂ ಜನ
ಹೂವಿನಹಡಗಲಿ: ಪಟ್ಟಣದಲ್ಲಿ ತಗ್ಗು ಪ್ರದೇಶದಲ್ಲಿರುವ ಕೊಳಗೇರಿಗಳಿಗೆ ಮಳೆಗಾಲದಲ್ಲಿ ಭಾರಿ ಪ್ರಮಾಣದ ನೀರು ನುಗ್ಗಿ ಬರುತ್ತದೆ. ದಶಕದ ಈ ಸಮಸ್ಯೆಗೆ ಯಾರೂ ಸ್ಪಂದಿಸದ ಕಾರಣ ಸ್ಲಂ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಪಟ್ಟಣದ ಜನತಾ ಕಾಲೊನಿ, ಹಳೇ ಹರಿಜನ ಕಾಲೊನಿ, ಹೊಸ ಹರಿಜನ ಕಾಲೊನಿ, ತೋಟದ ರಸ್ತೆ, ಮಹಮದನ್ ಕೇರಿ, ಕುರುಬರ ಓಣಿಯನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯು ಕೊಳಚೆ ಪ್ರದೇಶಗಳೆಂದು ಘೋಷಿಸಿದೆ. ಆದರೆ, ಈ ಪ್ರದೇಶಗಳ ಅಭಿವೃದ್ಧಿಗೆ ಮಂಡಳಿ ಯಾವುದೇ ರೂಪುರೇಷೆ ತಯಾರಿಸಿಲ್ಲ. ತಗ್ಗಿನಲ್ಲಿರುವ ಜನತಾ ಕಾಲೊನಿ, ಹರಿಜನ ಕಾಲೊನಿಯ ಮನೆಗಳಿಗೆ ಮಳೆಗಾಲದಲ್ಲಿ ಮಳೆಯ ನೀರು ಚರಂಡಿ ತ್ಯಾಜ್ಯದೊಂದಿಗೆ ಸೇರಿ ನುಗ್ಗುತ್ತದೆ. ಮಳೆಯ ನೀರಿನಲ್ಲಿ ಹರಿದು ಬರುವ ಹಾವು, ಚೇಳುಗಳು ಮನೆಯೊಳಗೆ ಬರುತ್ತವೆ. ಸ್ಲಂ ಪ್ರದೇಶಗಳನ್ನು ಸ್ಥಳೀಯ ಪುರಸಭೆಯೂ ನಿರ್ಲಕ್ಷಿಸಿದೆ ಎಂದು ನಿವಾಸಿಗಳು ದೂರುತ್ತಾರೆ. ಕಾಲಕಾಲಕ್ಕೆ ಚರಂಡಿ ಸ್ವಚ್ಛಗೊಳಿಸದ ಕಾರಣ ಇಡೀ ಪ್ರದೇಶ ದುರ್ನಾತ ಬೀರುತ್ತದೆ. ಹಂದಿಗಳ ಕಾಟ, ಸೊಳ್ಳೆ, ಕ್ರಿಮಿಕೀಟಗಳ ಹಾವಳಿಯೂ ಹೆಚ್ಚಾಗಿ ಈ ಪ್ರದೇಶಗಳು ರೋಗ ಹರಡುವ ತಾಣಗಳಾಗಿವೆ. ಬಹುವರ್ಷಗಳಿಂದಲೂ ಸ್ಲಂ ಪ್ರದೇಶಗಳ ಸುಧಾರಣೆಗೆ ಯಾರೂ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸಿ.ಸಿ. ರಸ್ತೆ ಬಿಟ್ಟರೆ ಬೇರೇನೂ ಇಲ್ಲ
ಕೂಡ್ಲಿಗಿ: ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಗರ, ಕುಂಬಾರ ಒಣಿ ಹಾಗೂ ಕೊರಚರ ಒಣಿಗಳನ್ನು ಕೋಳಗೇರಿಗಳೆಂದು ಘೋಷಣೆ ಮಾಡಲಾಗಿದೆ. ಆದರೆ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸಿ.ಸಿ ರಸ್ತೆಯೊಂದನ್ನು ಬಿಟ್ಟರೆ ಇದುವರೆಗೂ ಯಾವುದೇ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ.
ಇವುಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಗರ ಅತಿ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ 200ಕ್ಕಿಂತ ಹೆಚ್ಚು ಮನೆಗಳಿದ್ದು, ಕೆಲವೊಂದು ಮನೆಗಳಲ್ಲಿ ಮೂರ್ನಾಲ್ಕು ಕುಟುಂಬಗಳು ವಾಸ ಮಾಡುತ್ತಿವೆ.
ಇಕ್ಕಟ್ಟಾದ ಓಣಿಗಳಲ್ಲಿಯೇ ಪಟ್ಟಣ ಪಂಚಾಯ್ತಿಯಿಂದ ಸಿ.ಸಿ ರಸ್ತೆ ಮಾಡಲಾಗಿದೆ. ಒಂದಕ್ಕೊಂದು ಮನೆಗಳು ಹತ್ತಿಕೊಂಡಿರುವುದರಿಂದ ಕೆಲವು ಮನೆಗಳಲ್ಲಿ ಇದುವರೆಗೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ತಂಡ: ಶಶಿಕಾಂತ ಎಸ್‌. ಶೆಂಬೆಳ್ಳಿ, ಕೆ. ಸೋಮಶೇಖರ್‌, ಎ.ಎಂ. ಸೋಮಶೇಖರಯ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು