ಸೋಮವಾರ, ಜೂನ್ 21, 2021
30 °C

ತುಂಗಭದ್ರಾ ನದಿಗೆ ನೀರು: ಹಂಪಿ ಸ್ಮಾರಕದೊಳಕ್ಕೆ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 30 ಗೇಟ್‌ಗಳನ್ನು ತೆರೆದು ಬುಧವಾರ ನದಿಗೆ ನೀರು ಹರಿಸಲಾಗುತ್ತಿದೆ.

30 ಕ್ರಸ್ಟ್‌ಗೇಟ್‌ಗಳನ್ನು ತಲಾ ಎರಡುವರೆ ಅಡಿ ಮೇಲಕ್ಕೆತ್ತಿ ಒಟ್ಟು 1,12,086 ಕ್ಯುಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಮಂಗಳವಾರ ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಹಂಪಿ ಪುರಂದರ ಮಂಟಪ, ವಿಜಯನಗರದ ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿತ್ತು. ಬುಧವಾರ ಚಕ್ರತೀರ್ಥ ಬಳಿಯ ರಾಮ ಲಕ್ಷ್ಮಣ ದೇವಸ್ಥಾನದ ಆವರಣದೊಳಕ್ಕೆ ನೀರು ನುಗ್ಗಿದ್ದು ಯಾವುದೇ ಸಂದರ್ಭದಲ್ಲಿ ಜಲಾವೃತವಾಗಬಹುದು.

ಕಂಪ್ಲಿ–ಗಂಗಾವತಿ ಸೇತುವೆ ಮೇಲಿನಿಂದ ನೀರು ಹರಿಯುತ್ತಿದ್ದು, ಅದು ಸಹ ಯಾವುದೇ ಕ್ಷಣದಲ್ಲಿ ಮುಳುಗಡೆಯಾಗಬಹುದು. ಈಗಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸ್‌ ಬಂದೋಬಸ್ತ್‌ ಮಾಡಿ ಸೇತುವೆ ಮೇಲೆ ವಾಹನ ಓಡಾಟ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕಂಪ್ಲಿ–ಗಂಗಾವತಿ ನಡುವಿನ ಸಂಪರ್ಕ ಕಡಿದುಹೋಗಿದೆ. ಕೋಟೆ ಪ್ರದೇಶಕ್ಕೂ ನೀರು ನುಗ್ಗುವ ಆತಂಕ ಎದುರಾಗಿದೆ.
ಸೇತುವೆ ಮೇಲೆ ಸಂಪರ್ಕ ನಿರ್ಬಂಧಿಸಿರುವುದರಿಂದ ಕಲಬುರ್ಗಿ, ರಾಯಚೂರು, ಮಂತ್ರಾಲಯ, ಹೈದರಾಬಾದ್‌ ಸೇರಿದಂತೆ ಕಲ್ಯಾಣ ಕರ್ನಾಟಕದ ಹಲವು ಪಟ್ಟಣಗಳ ಜತೆಗಿನ ಸಂಪರ್ಕ ಕಡಿತಗೊಂಡಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಸಂಪೂರ್ಣ ತುಂಬಿದೆ. 77,927 ಕ್ಯುಸೆಕ್‌ ಒಳಹರಿವು ಇದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದು, ತುಂಗಾ ಜಲಾಶಯದ ಹೊರಹರಿವು ಹೆಚ್ಚಾಗಿರುವುದರಿಂದ ಒಳಹರಿವು ಹೆಚ್ಚಾಗಿದೆ. ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುವುದು. ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರಬೇಕು ಎಂದು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು