ಮಂಗಳವಾರ, ಜನವರಿ 19, 2021
27 °C
‌ಸಮುದಾಯ ಕರ್ನಾಟಕ ಜಿಲ್ಲಾ ಸಮಾವೇಶ

ನಮ್ಮೆಲ್ಲರ ಅಂತಃಸಾಕ್ಷಿ ರೈತರೊಟ್ಟಿಗೆ ಇರಲಿ: ಮಹಿಳಾ ಹೋರಾಟಗಾರ್ತಿ ಕೆ. ನೀಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ರೈತರು ಈ ನಾಡಿನ ಧ್ವನಿ. ಅವರು ಈಗ ಸಂಕಷ್ಟದಲ್ಲಿದ್ದಾರೆ. ಅವರ ಹಕ್ಕಿಗಾಗಿ ಪ್ರಭುತ್ವದ ವಿರುದ್ಧ ಸೆಟೆದು ನಿಂತಿದ್ದಾರೆ. ನಮ್ಮೆಲ್ಲರ ಅಂತಃಸಾಕ್ಷಿ ರೈತರೊಟ್ಟಿಗೆ ಇರಬೇಕು’ ಎಂದು ಲೇಖಕಿ, ಮಹಿಳಾ ಹೋರಾಟಗಾರ್ತಿ ಕೆ. ನೀಲಾ ತಿಳಿಸಿದರು.

ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಸಮುದಾಯ ಕರ್ನಾಟಕ’ ಸಂಘಟನೆಯ ಬಳ್ಳಾರಿ ಜಿಲ್ಲಾಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಕಲಾವಿದರ ಕಲೆ, ಲೇಖಕರ ಸಾಹಿತ್ಯ, ಪತ್ರಕರ್ತರ ವರದಿಗಳು ಸೇರಿದಂತೆ ಎಲ್ಲವೂ ಅನ್ನದಾತರ ಜತೆಗೆ ನಿಲ್ಲಬೇಕು. ಕಾಯಕ ತತ್ವ ಕೊಟ್ಟ ನಾಡಿದು. ರೈತರ ಧ್ವನಿಗೆ ಪ್ರತಿಯೊಬ್ಬರೂ ಧ್ವನಿಯಾಗುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

‘ಕಲೆ ಶ್ರಮದ ಬೆನ್ನಿಗೆ ಅಂಟಿಕೊಂಡಿರುವ ಸಾಧನ. ನಾಟಕ, ಹಾಡು, ಕಲೆ ಹುಟ್ಟುವುದೇ ಚಳವಳಿ ಹಿನ್ನೆಲೆಯಿಂದ. ಈಗ ರೈತರ ಚಳವಳಿಯ ಸಂದರ್ಭದಲ್ಲೂ ಆ ಕೆಲಸ ಆಗಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೈತರ ವಿಷಯ ಪ್ರತಿಧ್ವನಿಸುತ್ತಿದೆ. ಆದರೆ, ಬಹುತೇಕ ಮಾಧ್ಯಮಗಳಲ್ಲಿ ಅದು ಕಾಣಿಸುತ್ತಿಲ್ಲ’ ಎಂದು ವಿಷಾದಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್‌ ಸಿ.ಆರ್‌. ಗೋವಿಂದರಾಜು ಮಾತನಾಡಿ, ‘ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳು ಉಳಿಯಬೇಕೆಂಬ ಉದ್ದೇಶದಿಂದ ಸ್ಥಾಪನೆಗೊಂಡಿರುವುದು ಸಮುದಾಯ ಕರ್ನಾಟಕ ಸಂಘಟನೆ. ಅದರಲ್ಲಿ ಯಶ ಕೂಡ ಕಂಡಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರಭುತ್ವವು ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದೆ. ಮತದಾರರು ಆಮಿಷಕ್ಕೆ ಒಳಗಾಗಿ ಪ್ರಜಾಪ್ರಭುತ್ವ ವಿರೋಧಿಗಳನ್ನು ಅಧಿಕಾರದ ಸ್ಥಾನಕ್ಕೆ ತಂದು ಕೂರಿಸಿದ್ದೇವೆ’ ಎಂದು ವಿಷಾದಿಸಿದರು.

‘ಇಂದು ಅಸಹನೆ, ಅಶಾಂತಿ, ಕೋಮುದಳ್ಳುರಿ ಅಟ್ಟಹಾಸ ಮೆರೆಯುತ್ತಿದೆ. ಏಕಸಂಸ್ಕೃತಿ ಹೇರುವ ಹುನ್ನಾರ ನಡೆಯುತ್ತಿದೆ. ಗೋಹತ್ಯೆಯಂಥ ವಿಚಾರಗಳು ಪ್ರಧಾನ ಧಾರೆಗೆ ಬರುತ್ತಿವೆ. ಇವುಗಳನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸುವ ಸಂದಿಗ್ಧ ಸನ್ನಿವೇಶದಲ್ಲಿದ್ದೇವೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿ, ‘ಮನುಷ್ಯನ ಜೀವನದಲ್ಲಿ ಕಲೆ ಬೇಕೇ ಬೇಕು. ಮಗು ಅಳುವುದು ಕಲೆ, ಹೆಣ್ಣು ಮಗಳು ಲಕ್ಷಣವಾಗಿ ಅಲಂಕಾರವಾಗುವುದೂ ಕೂಡ ಒಂದು ಕಲೆ. ಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತೆ. ಆದರೆ, ಕೆಲವರನ್ನು ಮಾತ್ರ ಒಡಲಲ್ಲಿ ಇಟ್ಟುಕೊಳ್ಳುತ್ತೆ’ ಎಂದರು.

‘ನಾನು ಜೀವನದುದ್ದಕ್ಕೂ ಕಲೆಗಾಗಿ ಬದುಕಿದವಳು ಅಲ್ಲ, ಬದುಕಿಗಾಗಿ ಕಲೆ ಅವಲಂಬಿಸಿದವಳು. ನಾನು ಬದುಕಬೇಕಾಗಿತ್ತು. ನಾನೊಬ್ಬ ತೃತೀಯ ಲಿಂಗಿ ಆಗಿರುವುದರಿಂದ ಸುಲಭವಾಗಿ ಇತರರಂತೆ ಹಣ ಮಾಡಬಹುದಿತ್ತು. ಆದರೆ, ಹಾಗೇ ಮಾಡಲಿಲ್ಲ. ನನ್ನ ಕಲೆ ನನಗೆ ಸೂಕ್ತ ಸ್ಥಾನಮಾನ ತಂದುಕೊಟ್ಟಿದೆ. ಇಂದು ಅನೇಕ ಜನ ತೃತೀಯ ಲಿಂಗಿಗಳು ಮುಖ್ಯವಾಹಿನಿಗೆ ಬಂದಿದ್ದಾರೆ’ ಎಂದು ಹೇಳಿದರು.

ಸಮುದಾಯ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಅಚ್ಯುತ, ಪ್ರಧಾನ ಕಾರ್ಯದರ್ಶಿ ಎಸ್‌. ದೇವೇಂದ್ರಗೌಡ, ಜಿಲ್ಲಾ ಸಂಚಾಲಕ ಎ. ಕರುಣಾನಿಧಿ, ತಾಲ್ಲೂಕು ಅಧ್ಯಕ್ಷ ದಯಾನಂದ ಕಿನ್ನಾಳ್‌, ಕಾರ್ಯದರ್ಶಿ ಅಂಜಲಿ ಬೆಳಗಲ್‌, ನಿವೃತ್ತ ವೈದ್ಯಾಧಿಕಾರಿ ಡಾ.ಎಸ್‌.ಡಿ. ಸುಲೋಚನಾ, ನಾಗರಾಜ ಪತ್ತಾರ್‌, ಪಿ.ಆರ್‌. ವೆಂಕಟೇಶ್‌, ಬಂಡಾಯ ಸಾಹಿತ್ಯ ಸಂಘಟನೆಯ ಅಬ್ದುಲ್ ಹೈ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು