ಬುಧವಾರ, ಆಗಸ್ಟ್ 17, 2022
23 °C
ಅಲ್ಲಲ್ಲೇ ನಿಂತ 110 ಹಳ್ಳಿ ಯೋಜನೆ ಕಾಮಗಾರಿ

ದಾಸರಹಳ್ಳಿ: ಅಭಿವೃದ್ಧಿಗೆ ‘ವನವಾಸ’, ಎಲ್ಲೆಲ್ಲೂ ಕೆಮ್ಮಣ್ಣು!

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: 110 ಹಳ್ಳಿಗಳ ಯೋಜನೆ ಕಾಮಗಾರಿಯ ಸಾಕ್ಷಿ ಗುಡ್ಡೆ ಎಂಬಂತೆ ರಸ್ತೆಗಳಲ್ಲಿ ಎದ್ದು ನಿಂತಿರುವ ಮ್ಯಾನ್‌ಹೋಲ್‌ಗಳು, ಅಲ್ಲಲ್ಲಿ ಸಿಗುವ ದೊಡ್ಡ ದೊಡ್ಡ ರಸ್ತೆ ಗುಂಡಿಗಳು, ರೋಸಿ ಹೋಗಿರುವ ವಾಹನ ಸವಾರರು...

ಇದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110 ಹಳ್ಳಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸೃಷ್ಟಿಯಾಗಿರುವ ಸಮಸ್ಯೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಐದು ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು 14 ವರ್ಷಗಳೇ ಕಳೆದಿದೆ. ಹದಿನಾಲ್ಕು ವರ್ಷಕ್ಕೆ ಶ್ರೀರಾಮನ ವನವಾಸದ ಅವಧಿಯೇ ಮುಗಿದಿತ್ತು. ಆದರೆ, ಈ ಐದು ಹಳ್ಳಿ ಸುತ್ತಮುತ್ತಲ ನಿವಾಸಿಗಳ ಅನುಭವಿಸುತ್ತಿರುವ ತೊಂದರೆಗೆ 14 ವರ್ಷಗಳಿಂದ ಮುಕ್ತಿಯೇ ಸಿಕ್ಕಿಲ್ಲ.

ಸಿಡೇದಹಳ್ಳಿಯ ಸೌಂದರ್ಯ ಬಡಾವಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ಹೆಸರಿಗೆ ತಕ್ಕಂತೆ ಸೌಂದರ್ಯವಾಗಿಯೇ ಇತ್ತು. ಹೀಗಾಗಿಯೇ ಮಲ್ಲೇಶ್ವರದ ಪ್ರತಿಷ್ಠಿತ ಬಡಾವಣೆಗಳಲ್ಲಿದ್ದ ಮನೆಗಳನ್ನು ಮಾರಾಟ ಮಾಡಿ ಇಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡ ಹಲವರಿದ್ದಾರೆ.

‘ಬಿಬಿಎಂಪಿಗೆ ಸೇರಿದ ಬಳಿಕ ಅದರ ಸೌಂದರ್ಯ ಇನ್ನಷ್ಟು ಹೆಚ್ಚಾಗಲಿದೆ ಎಂದು ಭಾವಿಸಿದ್ದೆವು. ಆದರೆ, ಈಗಿನ ಚಿತ್ರಣವೇ ಬದಲಾಗಿದೆ. ಮನೆಗೆ ನೆಂಟರಿಷ್ಟರನ್ನು ಕರೆಯಲೂ ನಾಚಿಕೆಪಡುವಂತಾಗಿದೆ’ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಲು ರಸ್ತೆಗಳನ್ನು ಅಗೆಯಲಾಗಿದೆ. ಈ ಕಾಮಗಾರಿ ಮುಗಿದಿರುವ ಬಡಾವಣೆಗಳಲ್ಲೂ ರಸ್ತೆಗಳನ್ನು ಮರು ನಿರ್ಮಾಣ ಮಾಡುವ ಕಾಮಗಾರಿ ಆರಂಭವಾಗಿಲ್ಲ. ಚಿಕ್ಕಸಂದ್ರದಲ್ಲಿ ಮುಖ್ಯ ರಸ್ತೆಯೊಂದನ್ನು ಸದ್ಯಕ್ಕೆ ವಾಹನ ಸಂಚಾರಕ್ಕೆ ಯೋಗ್ಯ ಮಾಡಲಾಗಿದೆ. ಉಳಿದ ಎಲ್ಲ ಅಡ್ಡರಸ್ತೆಗಳೂ ಕೆಮ್ಮಣ್ಣಿನ ಗೂಡಾಗಿವೆ. ಶೆಟ್ಟಿಹಳ್ಳಿ, ಅಬ್ಬಿಗೆರೆ, ಮೇದರಹಳ್ಳಿ ಸ್ಥಿತಿಗಳೂ ಇದಕ್ಕೆ ಭಿನ್ನವಾಗಿ‌ಲ್ಲ.

ರಸ್ತೆಗಳ ಮರು ನಿರ್ಮಾಣಕ್ಕೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ ಕೂಡ ಈ ಕ್ಷೇತ್ರದ ಅಭಿವೃದ್ಧಿಯನ್ನು ಬಲಿ ತೆಗೆದುಕೊಂಡಿದೆ. ದ್ವೇಷದ ರಾಜಕೀಯಕ್ಕೆ ಸಾಮಾನ್ಯ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಮಳೆ ಬಂದರೆ ರಸ್ತೆ ಯಾವುದು, ಗುಂಡಿ ಯಾವುದು, ಮ್ಯಾನ್‌ಹೋಲ್ ಯಾವುದು ಎಂಬುದೇ ತಿಳಿಯುವುದಿಲ್ಲ. ರಸ್ತೆ ಗುಂಡಿಯಲ್ಲಿ ಬಿದ್ದು ತೊಂದರೆ ಅನುಭವಿಸಿದ ಅಶ್ವತ್ಥನಾರಾಯಣ ಚೌಧರಿ ಎಂಬುವರು ಹೈಕೋರ್ಟ್ ಮೆಟ್ಟಿಲ್ಲನ್ನೂ ಏರಿದರು. ಕನಿಷ್ಠ ₹110.75 ಕೋಟಿ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಕೂಡ ನಿರ್ದೇಶನ ನೀಡಿದೆ. ಆದರೂ ಸರ್ಕಾರ ₹25 ಕೋಟಿಯನ್ನಷ್ಟೇ ಬಿಡುಗಡೆ ಮಾಡಿದೆ. ಈ ಎಲ್ಲ ಕಾರಣಗಳಿಂದ ಕ್ಷೇತ್ರದ ಜನರು ನರಕದಲ್ಲಿ ಸಿಲುಕಿದಂತೆ ನರಳುವಂತಾಗಿದೆ’ ಎಂದು ಸಿಡೇದಹಳ್ಳಿ ನಿವಾಸಿ ಶಂಕರ್ ಅಳಲು ತೋಡಿಕೊಂಡರು.


ಮಕ್ಕಳು ಆಟವಾಡಲು ಸಾಧ್ಯವಾಗದ ಸ್ಥಿತಿಯಲ್ಲಿರುವ ರಸ್ತೆಗಳು –ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್

ಕೇಳಿದ್ದು ₹405 ಕೋಟಿ, ಕೊಟ್ಟಿದ್ದು ₹25 ಕೋಟಿ!
‘ಕ್ಷೇತ್ರದ ಐದು ಹಳ್ಳಿಗಳು ಮತ್ತು ಸುತ್ತಮುತ್ತಲ ಬಡಾವಣೆಗಳಲ್ಲಿ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿದೆ. ರಸ್ತೆಗಳ ಮರು ನಿರ್ಮಾಣಕ್ಕೆ ₹405 ಕೋಟಿ ಅಗತ್ಯವಿದೆ ಎಂದು ಬಿಬಿಎಂಪಿಯೇ ಅಂದಾಜು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಸರ್ಕಾರ ಕೇವಲ ₹25 ಕೋಟಿಯನ್ನಷ್ಟೇ ಬಿಡುಗಡೆ ಮಾಡಿದೆ’ ಎಂದು ಶಾಸಕ ಆರ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

‘ಐದೇ ಹಳ್ಳಿಯಾದರೂ ವಿಸ್ತಾರದಲ್ಲಿ ಈ ಕ್ಷೇತ್ರದ ದೊಡ್ಡದು. ಕೈಗಾರಿಕಾ ಪ್ರದೇಶಗಳು ಹೊಂದಿಕೊಂಡಂತೆ ಇರುವ ಕಾರಣ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರು ಮತದಾರರ ಪಟ್ಟಿಗೆ ಸೇರದಿದ್ದರೂ, ಕ್ಷೇತ್ರದಲ್ಲೇ ಬಾಡಿಗೆ ಮನೆಗಳನ್ನು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಹೀಗಾಗಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಲಾಗದು’ ಎಂದು ಹೇಳಿದರು.

‘ಆಡಳಿತ ಪಕ್ಷದ ಶಾಸಕರ ಕ್ಷೇತ್ರಗಳಿಗೆ ₹210 ಕೋಟಿ ತನಕ ಸರ್ಕಾರ ಹಂಚಿಕೆ ಮಾಡಿದೆ. ಪ್ರತಿಪಕ್ಷದ ಶಾಸಕರು ಎಂಬ ಕಾರಣಕ್ಕೆ ಅಷ್ಟೊಂದು ಕಡಿಮೆ ಅನುದಾನ ನೀಡಿದರೆ ಏನು ಮಾಡಬೇಕು’ ಎಂದು ಅವರು ಪ್ರಶ್ನಿಸಿದರು. ’ದ್ವೇಷದ ರಾಜಕಾರಣವನ್ನು ಸರ್ಕಾರ ಇಷ್ಟರ ಮಟ್ಟಿಗೆ ಮಾಡಬಾರದು’ ಎಂದರು.

*
ಮಲ್ಲೇಶ್ವರದಲ್ಲಿ ವಾಸವಿದ್ದ ನಾನು ಬಡಾವಣೆ ಚೆನ್ನಾಗಿದೆ ಎಂಬ ಕಾರಣಕ್ಕೆ ಇಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡೆ. ಒಳಚರಂಡಿ ಮತ್ತು ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಹೆಸರಿನಲ್ಲಿ ಎಲ್ಲವನ್ನೂ ಅಗೆದು ಬಿಟ್ಟುಹೋಗಿದ್ದಾರೆ. ನಾವು ಏನು ಮಾಡಬೇಕು.
–ಕೃಷ್ಣ, ಸೌಂದರ್ಯ ಬಡಾವಣೆ ನಿವಾಸಿ

*
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದಾಗ ಈ ಬಡಾವಣೆ ಚೆನ್ನಾಗಿಯೇ ಇತ್ತು. ಈಗ ದಿನಕ್ಕೊಬ್ಬರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಸಮಸ್ಯೆ ಬಗ್ಗೆ ಯಾರಿಗೆ ಹೇಳಿದರೂ ಸರಿಯಾಗುತ್ತಿಲ್ಲ.
–ಮುಕುಂದನ್, ಮೀನಾಕ್ಷಿ ಬಡಾವಣೆ ನಿವಾಸಿ

**
ಸಮಸ್ಯೆಗೆ ಸಿಲುಕಿರುವ ಹಳ್ಳಿಗಳು

ಸಿಡೇದಹಳ್ಳಿ
ಚಿಕ್ಕಸಂದ್ರ
ಶೆಟ್ಟಿಹಳ್ಳಿ
ಅಬ್ಬಿಗೆರೆ
ಮೇದರಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು