ಸೋಮವಾರ, ಮೇ 16, 2022
22 °C
ಕಂತು ಪಾವತಿಸಲಾಗದ ಮಾಲೀಕರಿಗೆ ವಂಚನೆ l ಏಳು ಆರೋಪಿಗಳ ಬಂಧನ

₹4 ಕೋಟಿ ಮೌಲ್ಯದ 48 ಕಾರು ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಖರೀದಿ ಸೋಗಿನಲ್ಲಿ ಮಾಲೀಕರನ್ನು ವಂಚಿಸಿ ಕಾರುಗಳನ್ನು ಕದ್ದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಪೂರ್ವ ವಿಭಾಗದ ಪೊಲೀಸರು ಭೇದಿಸಿದ್ದಾರೆ.

‘ಸಾಲದ ಕಂತು (ಇಎಂಐ) ಪಾವತಿಸದ ಮಾಲೀಕರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಫ್ರೇಜರ್‌ಟೌನ್ ನಿವಾಸಿ ಜೆ. ರಿಯಾಜ್ (33), ಆಂಧ್ರಪ್ರದೇಶ ಅನಂತಪುರ ಜಿಲ್ಲೆಯ ಶೇಖ್ ಮುಕ್ತಿಯಾರ್ (30), ವೈ. ವಿನೋದ್ ಕುಮಾರ್ ಅಲಿಯಾಸ್ ಆರ್‌ಟಿಓ ವಿನೋದ್ (32), ರಮೇಶ್ ನಾಯ್ಡು (40), ನರಸಿಂಹ ರೆಡ್ಡಿ (35), ಟಿ.ಪ್ರಭಾಕರ್ (34) ಹಾಗೂ ಬಾಕ್ಲಿ ನರೇಶ್ (32) ಬಂಧಿತರು’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಸ್.ಮುರುಗನ್ ತಿಳಿಸಿದರು.

‘ಹಲವು ತಿಂಗಳಿನಿಂದ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಕಾರು ಮಾಲೀಕರೊಬ್ಬರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ ₹ 4 ಕೋಟಿ ಮೌಲ್ಯದ 48 ಕಾರುಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

‘ಆರೋಪಿಗಳಾದ ರಿಯಾಜ್, ಶೇಖ್ ಮುಕ್ತಿಯಾರ್ ಹಾಗೂ ಇನಾಯತ್, ಕಾರು ಮಾರಾಟದ ಡೀಲರ್‌ಗಳು. ಇನ್ನೊಬ್ಬ ಆರೋಪಿ ವಿನೋದ್, ಆಂಧ್ರಪ್ರದೇಶ ಅನಂತಪುರ ಆರ್‌ಟಿಓ ಕಚೇರಿಯಲ್ಲಿ ಮಧ್ಯವರ್ತಿಯಾಗಿದ್ದಾನೆ. ಸಾಲದ ಕಂತು ಬಾಕಿ ಉಳಿಸಿಕೊಂಡ ಕಾರುಗಳ ಮಾಲೀಕರ ಮಾಹಿತಿ ಕಲೆ ಹಾಕುತ್ತಿದ್ದ ಆರೋಪಿಗಳು, ಖರೀದಿ ಮಾಡುವುದಾಗಿ ನಂಬಿಸಿ ಕಾರುಗಳನ್ನು ಕದಿಯುತ್ತಿದ್ದರು. ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು’ ಎಂದೂ ತಿಳಿಸಿದರು.

ಜಪ್ತಿ ಬಗ್ಗೆಯೂ ಮಾಹಿತಿ ಸಂಗ್ರಹ: ‘ಹಲವು ಚಾಲಕರು, ಬ್ಯಾಂಕ್ ಹಾಗೂ ಫೈನಾನ್ಸ್‌ ಏಜೆನ್ಸಿಗಳಲ್ಲಿ ಸಾಲ ಪಡೆದು ಕಾರು ಖರೀದಿ ಮಾಡುತ್ತಾರೆ. ಅದರಲ್ಲಿ ಕೆಲವರು, ಕಂತು ಪಾವತಿಸಲು ಸಾಧ್ಯವಾಗುವುದಿಲ್ಲ. ಅಂಥ ವಾಹನಗಳನ್ನು ಜಪ್ತಿ ಮಾಡುವುದಾಗಿ ಬ್ಯಾಂಕ್ ಹಾಗೂ ಏಜೆನ್ಸಿಗಳು ನೋಟಿಸ್‌ ನೀಡುತ್ತವೆ. ಅಂಥ ಜಪ್ತಿ ನೋಟಿಸ್‌ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಆರೋಪಿಗಳು, ಕಾರುಗಳ ಮಾಲೀಕರನ್ನು ಸಂಪರ್ಕಿಸುತ್ತಿದ್ದರು’ ಎಂದೂ ಪೊಲೀಸರು ಹೇಳಿದರು.

‘ಕಾರಿನ ಮೌಲ್ಯಕ್ಕೆ ತಕ್ಕಂತೆ ಸ್ವಲ್ಪ ಹಣವನ್ನು ನೀಡುತ್ತಿದ್ದ ಆರೋಪಿಗಳು, ಸಾಲದ ಉಳಿದ ಕಂತು ಪಾವತಿ ಮಾಡು
ವುದಾಗಿ ಹೇಳುತ್ತಿದ್ದರು. ಕಾರು ಹಾಗೂ ಅದರ ಜತೆಗೆ ಅಸಲಿ ದಾಖಲೆಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ನಂತರ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಮಾಡುತ್ತಿದ್ದರು’ ಎಂದೂ ತಿಳಿಸಿದರು.

ನಕಲಿ ನೋಂದಣಿ ಫಲಕ: ‘ಕದ್ದ ಕಾರುಗಳನ್ನು ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಆರೋಪಿಗಳು, ಅಲ್ಲಿಯ ಆರ್‌ಟಿಓ ಏಜೆಂಟರು ಹಾಗೂ ಕೆಲ ಅಧಿಕಾರಿಗಳ ಮೂಲಕ ನಕಲಿ ನೋಂದಣಿ ಫಲಕ ಮಾಡಿಸುತ್ತಿದ್ದರು. ಅದೇ ಕಾರುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ ಕೃತ್ಯ ಎಸಗುತ್ತಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ಆರ್‌ಟಿಓ ಅಧಿಕಾರಿಗಳ ಅಮಾನತು: ‘ಆರೋಪಿಗಳ ಕೃತ್ಯಕ್ಕೆ ಸಹಕಾರ ನೀಡಿದ್ದ ಅನಂತಪುರ ಆರ್‌ಟಿಓ ಕಚೇರಿಯ ಕೆಲ ಅಧಿಕಾರಿಗಳ ಬಗ್ಗೆ, ಅಲ್ಲಿಯ ಸಾರಿಗೆ ಇಲಾಖೆ ಆಯುಕ್ತರಿಗೆ ವರದಿ ನೀಡಲಾಗಿತ್ತು. ಆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು