ಶನಿವಾರ, ಜನವರಿ 28, 2023
20 °C
ಒಂದು ತಿಂಗಳಲ್ಲೇ ಕಳಪೆ ಕಾಮಗಾರಿ ಬಹಿರಂಗ: ಜನರ ಆಕ್ರೋಶ

ದೇಶದ ಪ್ರಥಮ ‍‌‘ರ‍್ಯಾಪಿಡ್‌ ರಸ್ತೆ’ಯಲ್ಲಿ ಬಿರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಪ್ರಥಮ ‍‌‘ರ‍್ಯಾಪಿಡ್‌ ರಸ್ತೆ’ ಎಂದು ಬಿಬಿಎಂಪಿ ಬಿಂಬಿಸಿರುವ ರಸ್ತೆ ಬಿರುಕುಬಿಟ್ಟಿದೆ. ಕಳಪೆ ಕಾಮಗಾರಿಗೆ ಇದು ಮತ್ತೊಂದು ನಿದರ್ಶನ ಎಂಬ ಆರೋಪ ವ್ಯಕ್ತವಾಗಿದೆ.

ಹಳೇ ಮದ್ರಾಸ್‌ ರಸ್ತೆಯಲ್ಲಿ 337.5 ಮೀಟರ್‌ ರಸ್ತೆಯನ್ನು ‘ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್‌’ ತಂತ್ರಜ್ಞಾನದ ‘ರ‍್ಯಾಪಿಡ್‌ ರಸ್ತೆ’ಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಈ ‘ರ‍್ಯಾಪಿಡ್‌ ರಸ್ತೆ’ ಮೂರ್ನಾಲ್ಕು ಕಡೆ ಬಿರುಕು ಬಿಟ್ಟಿದೆ. ಪ್ರೀಕಾಸ್ಟ್‌ ಪ್ಯಾನೆಲ್‌ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್‌ ಮಿಶ್ರಣ ಇಲ್ಲದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಕ್ಷಿಪ್ರವಾಗಿ ರಸ್ತೆ ನಿರ್ಮಾಣವಾಗುತ್ತದೆ ಎಂದು ಸಂತಸದಲ್ಲಿದ್ದ ನಾಗರಿಕರು ಇದೀಗ ಕಳಪೆ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಗುತ್ತಿಗೆದಾರರು ತಂತ್ರಜ್ಞಾನವನ್ನು ಸರಿಯಾಗಿ ಅನುಷ್ಠಾನಗೊಳಿಸಿಲ್ಲ. ಹೀಗಾಗಿ ಸಮಸ್ಯೆ ಆಗಿದೆ. 20ರಿಂದ 21 ಪ್ಯಾನೆಲ್‌ಗಳನ್ನು ಜೋಡಿಸುವಾಗ ಹೆಚ್ಚಾಗಿ ಎಳೆದಿರುವುದರಿಂದ ಈ ರೀತಿಯ ಬಿರುಕು ಬಂದಿರಬಹುದು. ಕೆಲವೆಡೆ ಬೇಸ್‌ ಸರಿಯಾಗಿ ಲೆವೆಲಿಂಗ್‌ ಆಗದ್ದರಿಂದ ಹೀಗಾಗಿರಬಹುದು’ ಎಂದು ಅಲ್ಟ್ರಾಟೆಕ್‌ನ ತಾಂತ್ರಿಕ ತಜ್ಞ ಪಿ.ಎಂ. ಹಿರೇಮಠ ತಿಳಿಸಿದರು.

‘ಭಾರತೀಯ ವಿಜ್ಞಾನ ಸಂಸ್ಥೆ ಈ ಪ್ರಾಯೋಗಿಕ ರಸ್ತೆಯನ್ನು ಪರೀಕ್ಷೆ ನಡೆಸಲಿದೆ. ಅವರು ವರದಿ ಕೊಟ್ಟ ಮೇಲೆ ಅದರಂತೆ ತಂತ್ರಜ್ಞಾನ  ಅಳವಡಿಸಿಕೊಳ್ಳಲಾಗುತ್ತದೆ’ ಎಂದರು.

‘ಮೂರು ದಿನದಲ್ಲಿ ರಸ್ತೆ ಸಿದ್ಧ’ ಎಂಬ ಘೋಷಣೆಯೊಂದಿಗೆ  ವೈಟ್‌ ಟಾಪಿಂಗ್‌ ಬದಲು ‘ರ‍್ಯಾಪಿಡ್‌ ರಸ್ತೆಯನ್ನು’ ನಿರ್ಮಿಸಲಾಗುತ್ತಿದೆ. ಇದರಿಂದ ತಿಂಗಳು ರಸ್ತೆ ನಿರ್ಮಾಣಕ್ಕೆ ಕಾಯಬೇಕಾಗಿಲ್ಲ. ಗುಂಡಿ ಬೀಳಲ್ಲ, ಹಾಳಾಗಲ್ಲ, ನೂರು ವರ್ಷ ಬಾಳಿಕೆ ಬರುತ್ತದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದ್ದರು.

ನ.22ರಂದು ಕಾಮಗಾರಿ ಆರಂಭವಾಗಿದ್ದ ‍‘ರ‍್ಯಾಪಿಡ್‌ ರಸ್ತೆ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.8ರಂದು ಉದ್ಘಾಟಿಸಿದ್ದರು. ‘ಎಂಜಿನಿಯರ್‌ಗಳು ಹೇಳಿದಂತೆ, ವೈಟ್‌ ಟಾಪಿಂಗ್‌ ರಸ್ತೆಗಿಂತ ಶೇ 40ರಷ್ಟು ಹೆಚ್ಚು ಹಣ ನೀಡಲು ಸಾಧ್ಯವಿಲ್ಲ. ಮೊದಲು ಇದರ ಸಾಮರ್ಥ್ಯ ಸಾಬೀತಾಗಲಿ. ನಂತರ ಮುಂದುವರಿಸುವ ಬಗ್ಗೆ ಚಿಂತಿಸೋಣ’ ಎಂದು ಬೊಮ್ಮಾಯಿ ಹೇಳಿದ್ದರು. ಅವರು ಹೀಗೆ ಹೇಳಿದ್ದ ಒಂದು ತಿಂಗಳೊಳಗೇ ‘ರ‍್ಯಾಪಿಡ್‌ ರಸ್ತೆ’ ಅಲ್ಲಲ್ಲಿ ಬಿರುಕುಬಿಟ್ಟಿದೆ.

‘ರ‍್ಯಾಪಿಡ್‌ ರಸ್ತೆ’ ಗುಣಮಟ್ಟ ಪರೀಕ್ಷೆ ನಡೆಸಲು ಐಐಎಸ್‌ಸಿಗೆ ವಹಿಸಬೇಕು ಎಂದು  ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದ್ದರು. ಪರೀಕ್ಷೆ ಇನ್ನೂ ಆರಂಭವಾಗಿಲ್ಲ. ಇದರೊಳಗೇ ರಸ್ತೆ ಬಿರುಕುಬಿಟ್ಟಿದೆ.

‘ಈ ಬಿರುಕು ‘ಹೇರ್‌ಲೈನ್‌ ಕ್ರ್ಯಾಕ್‌’ ಆಗಿದ್ದು, ಆಳವಾಗಿಲ್ಲ. 3ರಿಂದ 4 ಎಂಎಂ ಆಳವಾಗಿದ್ದು, ಇದನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ವಾಹನ ಸಂಚಾರಕ್ಕೆ ತೊಂದರೆ ಇಲ್ಲ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು