ಗುರುವಾರ , ಡಿಸೆಂಬರ್ 2, 2021
20 °C

ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ತನಿಖೆಗೆ ಎಎಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40ರಷ್ಟು ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಗುತ್ತಿಗೆದಾರರ ಸಂಘವೇ ಪ್ರಧಾನಿಗೆ ಪತ್ರ ಬರೆದಿದೆ. ಹೀಗಿದ್ದರೂ ತನಿಖೆ ನಡೆಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಒತ್ತಾಯಿಸಿದರು.

ಪಕ್ಷದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ನರೇಂದ್ರ ಮೋದಿ ಅವರು ಆಗಿನ ಕಾಂಗ್ರೆಸ್‌ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರವೆಂದು ಟೀಕಿಸಿದ್ದರು. ಈಗ ಅವರೇ ಮೌನ ವಹಿಸಿದ್ದಾರೆ. ಗುತ್ತಿಗೆ ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿವೆ. ಹೀಗಾಗಿ ಆ ಪಕ್ಷಗಳ ನಾಯಕರು ತುಟಿ ಬಿಚ್ಚುತ್ತಿಲ್ಲ. ಪ್ರಕರಣ ಮುಚ್ಚಿ ಹಾಕಲು ಮೂರು ಪಕ್ಷಗಳೂ ಯತ್ನಿಸುತ್ತಿವೆ’ ಎಂದೂ ದೂರಿದರು.

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ.ಸದಂ, ‘ಗುತ್ತಿಗೆ ಕಾಮಗಾರಿ ಮೊತ್ತದಲ್ಲಿ ಸಚಿವರು, ಸಂಸದರು, ಶಾಸಕರಿಗೂ ಪಾಲು ಸಿಕ್ಕಿದೆ. ಹೀಗಾಗಿ ಅವರೆಲ್ಲಾ ಜಾಣ ಮೌನವಹಿಸಿದ್ದಾರೆ.  ಹಿಂದಿನ ಹತ್ತು ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳಿಂದ ಯಾವ್ಯಾವ ರಾಜಕಾರಣಿಯ ಖಾತೆಗೆ ಎಷ್ಟೆಷ್ಟು ಮೊತ್ತ ಸೇರಿದೆ ಎಂಬುದು ಬಹಿರಂಗವಾಗಬೇಕು’ ಎಂದು ಆಗ್ರಹಿಸಿದರು.  

ಮುಖಂಡರಾದ ಬಿ.ಟಿ.ನಾಗಣ್ಣ, ಸುರೇಶ್‌ ರಾಥೋಡ್‌, ಪ್ರಕಾಶ್‌ ನೆಡುಂಗಡಿ, ವಿಜಯ್‌ ಶಾಸ್ತ್ರಿಮಠ್‌, ಮಹೇಶ್‌ ಬಾಬು, ಜಗದೀಶ್‌ ಚಂದ್ರ, ಉಷಾ ಮೋಹನ್‌, ಸುಹಾಸಿನಿ, ಡಾ.ರಮೇಶ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು