ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 1,147 ಗ್ರಾಂ ಚಿನ್ನ ಜಪ್ತಿ

ಬೆಂಗಳೂರು: ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ 1,147 ಗ್ರಾಂ ಚಿನ್ನವನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
‘ಡಬ್ಲ್ಯುವೈ 281 ವಿಮಾನದಲ್ಲಿ ಮಸ್ಕತ್ನಿಂದ ನಗರದ ನಿಲ್ದಾಣಕ್ಕೆ ಡಿ. 5ರಂದು ಬಂದಿಳಿದಿದ್ದ ಪ್ರಯಾಣಿಕ, ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದ. ಈತನನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.
‘ಲೋಹ ಶೋಧಕದಲ್ಲಿ ಪರಿಶೀಲನೆ ನಡೆಸಿದಾಗ, ಪ್ರಯಾಣಿಕನ ಬಳಿ ಚಿನ್ನವಿರುವ ಸುಳಿವು ಸಿಕ್ಕಿತ್ತು. ಪ್ರಯಾಣಿಕ ಧರಿಸಿದ್ದ ಬಟ್ಟೆ ಹಾಗೂ ಬ್ಯಾಗ್ ಪರಿಶೀಲಿಸಿದರೂ ಚಿನ್ನ ಪತ್ತೆಯಾಗಿರಲಿಲ್ಲ. ಕೊನೆಯದಾಗಿ, ವಿಶೇಷ ಕೊಠಡಿಗೆ ಕರೆದೊಯ್ದು ಒಳ ಉಡುಪು ಬಿಚ್ಚಿಸಲಾಗಿತ್ತು.’
‘ಟೇಪ್ನಿಂದ ಸುತ್ತಿದ್ದ ಪೊಟ್ಟಣವೊಂದು ಒಳ ಉಡುಪಿನಲ್ಲಿ ಪತ್ತೆಯಾಗಿತ್ತು. ಅದನ್ನು ಬಿಚ್ಚಿ ನೋಡಿದಾಗಲೇ, ಪೇಸ್ಟ್ ರೂಪದಲ್ಲಿದ್ದ ಚಿನ್ನವಿತ್ತು’ ಎಂದು ತಿಳಿಸಿವೆ.
‘ಬಂಧಿತ ಪ್ರಯಾಣಿಕ ಎಲ್ಲಿಂದ ಚಿನ್ನ ತಂದಿದ್ದ? ಎಲ್ಲಿಗೆ ಸಾಗಿಸುತ್ತಿದ್ದ ? ಈತನ ಕೃತ್ಯದಲ್ಲಿ ಬೇರೆ ಯಾರೆಲ್ಲ ಭಾಗಿಯಾಗಿದ್ದರೆಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.