ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಲು, ರಾಗಿ ಮಾಲ್ಟ್‌ ಕುಡಿದ ಶಾಲಾ ವಿದ್ಯಾರ್ಥಿಗಳಿಗೆ ಅಲರ್ಜಿ

Published 3 ಜುಲೈ 2024, 16:04 IST
Last Updated 3 ಜುಲೈ 2024, 16:04 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಅಂಗೊಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಾಲು ಹಾಗೂ ರಾಗಿ ಮಾಲ್ಟ್ ಕುಡಿದ 19 ವಿದ್ಯಾರ್ಥಿಗಳ ಮೈ ಹಾಗೂ ಕೈ ಮೇಲೆ ಗುಳ್ಳೆ ಕಾಣಿಸಿಕೊಂಡಿವೆ.

ಕ್ಷೀರಭಾಗ್ಯ ಯೋಜನೆ ಅಡಿ ಉಚಿತವಾಗಿ ನೀಡುವ ಹಾಲು ಮತ್ತು ಅದರ ಜೊತೆ ರಾಗಿ ಮಾಲ್ಟ್‌ ಕುಡಿದ 19 ವಿದ್ಯಾರ್ಥಿಗಳಿಗೆ ಅರ್ಧ ತಾಸಿನಲ್ಲಿ ಮೈ, ಕೈ ಮೇಲೆ ಬೊಬ್ಬೆ, ಗುಳ್ಳೆಗಳು ಕಾಣಿಸಿಕೊಂಡವು.

ತೀವ್ರ ನಿತ್ರಾಣಗೊಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ಕೆ.ಟಿ. ಕೀರ್ತನಾಳನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಆಕೆಗೆ ಮೂರು ತಿಂಗಳಿನಿಂದಲೂ ಉಸಿರಾಟದ ಸಮಸ್ಯೆ ಇತ್ತು. ಇದರಿಂದ ಆಯಾಸಗೊಂಡಿದ್ದಾಳೆ’ ಎಂದು ವೈದ್ಯರು ತಿಳಿಸಿದರು.

ಶಾಲೆಯ 90 ವಿದ್ಯಾರ್ಥಿಗಳು ಹಾಲು ಕುಡಿದಿದ್ದಾರೆ. ಎಲ್ಲ 19 ವಿದ್ಯಾರ್ಥಿಗಳಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಆ ಪೈಕಿ ಕೀರ್ತನಾ ಹೊರತುಪಡಿಸಿ 18 ವಿದ್ಯಾರ್ಥಿಗಳು ಚೇತರಿಸಿಕೊಂಡು ಪುನಃ ಶಾಲೆಗೆ ಹಾಜರಾಗಿದ್ದಾರೆ. 

ಮಧ್ಯಾಹ್ನ ಬಿಸಿಯೂಟದ ತಾಲ್ಲೂಕು ನಿರ್ದೇಶಕ ಆನಂದ್, ವೈದ್ಯಾಧಿಕಾರಿ ಡಾ.ಇಂದು, ಆರೋಗ್ಯ ನಿರೀಕ್ಷಕಿ ಅಖಿಲಾ ಶಾಲೆ ಭೇಟಿ ನೀಡಿ ಪರಿಶೀಲಿಸಿದರು.

ವಿದ್ಯಾರ್ಥಿಗಳು ಶಾಲೆಗೆ ಬಂದ ತಕ್ಷಣ ಹಾಲು ಹಾಗೂ ಮಾಲ್ಟ್‌ ನೀಡಲಾಗುತ್ತದೆ. ಬುಧವಾರ ಕೆಲವರು ಶಾಲೆಯ ಸಮೀಪದಲ್ಲಿದ್ದ ನೆಲ್ಲಿಕಾಯಿ ಹಾಗೂ ನೇರಳೆ ಹಣ್ಣು ತಿಂದು ನಂತರ ಹಾಲು ಹಾಗೂ ಮಾಲ್ಟ್‌ ಕುಡಿದಿದ್ದಾರೆ. ಇದರಿಂದ ಅಲರ್ಜಿಯಾಗಿದೆ. ಉಳಿದಂತೆ ಯಾವುದೇ ಸಮಸ್ಯೆ ಆಗಿಲ್ಲ
ಕೆ.ಆರ್.ಗಂಗರಾಮಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ 

ಪ್ರಯೋಗಾಲಯಕ್ಕೆ ಹಾಲು ಮಾಲ್ಟ್‌ ಮಾದರಿ 

ಆಹಾರ ಇಲಾಖೆಯ ನಿರೀಕ್ಷಕರು ಹಾಲು ಹಾಗೂ ರಾಗಿ ಮಾಲ್ಟ್‌ ಪರೀಕ್ಷೆ ನಡೆಸಲಯ ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದಾರೆ. ಏಳು ದಿನಗಳಲ್ಲಿ ಫಲಿತಾಂಶ ಗೊತ್ತಾಗಲಿದೆ. ರಾಗಿ ಮಾಲ್ಟ್ ಹಾಗೂ ಹಾಲು ಸೆಪ್ಟೆಂಬರ್‌ 9ರವರೆಗೆ ಬಳಸಲು ಯೋಗ್ಯ ಎಂದು ಪಾಕೇಟ್‌ ಮೇಲೆ ನಮೂದಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಲರ್ಜಿ ಉಂಟಾಗಲು ಕಾರಣ ತಿಳಿದುಬಂದಿಲ್ಲ ಎಂದು  ಡಾ.ಸುಗುಣಾ ತಾಲ್ಲೂಕು ವೈದ್ಯಾಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT