ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಹ್ಯಾಂಡಿಕ್ರಾಫ್ಟ್‌ ವಿ.ವಿಗೆ ಮನವಿ

Published 22 ಫೆಬ್ರುವರಿ 2024, 16:12 IST
Last Updated 22 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಜನಸಂಖ್ಯೆಯಲ್ಲಿ ಕೇವಲ ಶೇ 2ರಷ್ಟು ಇರುವ ವಿಶ್ವಕರ್ಮರು ಮಹಾ ಪ್ರತಿಭಾವಂತರು. ಸಮುದಾಯದವರಲ್ಲಿ ಕಲೆ ರಕ್ತಗತವಾಗಿ ಬಂದಿರುತ್ತದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಣ್ಣಿಸಿದರು.

ವಿಶ್ವಕರ್ಮ ಸೇವಾ ಸಮಿತಿಯು ಗುರುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಬ್ರಹ್ಮ ರಥೋತ್ಸವ ಮತ್ತು ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ವಿಶ್ವಕರ್ಮ ದೇವಸ್ಥಾನಕ್ಕೆ ರಾಜಗೋಪುರ ನಿರ್ಮಿಸಲು ಅನುದಾನಕ್ಕೆ ಸ್ವಲ್ಪ ಮೊದಲೇ ಬೇಡಿಕೆ ಇಟ್ಟಿದ್ದರೆ ಈ ಬಜೆಟ್‌ನಲ್ಲಿಯೇ ಒದಗಿಸಬಹುದಿತ್ತು. ಬೇಡಿಕೆ ಈಗ ಬಂದಿರುವುದರಿಂದ ಮುಂದಿನ ಬಜೆಟ್‌ನಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.

ವಸತಿ, ನಿವೇಶನ ಒದಗಿಸಬೇಕು ಎಂಬ ನಿಮ್ಮ ಬೇಡಿಕೆಗೆ ಬೆಂಗಳೂರಿನಲ್ಲಿ ಸ್ಪಂದಿಸುವುದು ಕಷ್ಟ. ಇಲ್ಲಿ ಜಾಗದ ಕೊರತೆ ಇದೆ. ಮುಖ್ಯಮಂತ್ರಿಯವರ ಲಕ್ಷ ಮನೆ ಯೋಜನೆಗೆ ವಸತಿ ರಹಿತರು ಅರ್ಜಿ ಸಲ್ಲಿಸಿ ಎಂದು ಸಲಹೆ ನೀಡಿದರು.

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಎಸ್‌.ಪ್ರಭಾಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಬೇರೆ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ವಿಶ್ವಕರ್ಮ ಹ್ಯಾಂಡಿಕ್ರಾಫ್ಟ್‌ ವಿಶ್ವವಿದ್ಯಾಲಯ ಮಾಡಬೇಕು. ಕರಕುಶಲಗಳ ಅಧ್ಯಯನ, ಕಲಿಕೆಗೆ ಅವಕಾಶ ನೀಡಬೇಕು. ಸಮುದಾಯ ಭವನ, ತರಬೇತಿ ಕೇಂದ್ರ ನಿರ್ಮಿಸಲು ಜಮೀನು ಒದಗಿಸಬೇಕು’ ಎಂದು ಬೇಡಿಕೆ ಸಲ್ಲಿಸಿದರು.

ಶಿಲ್ಪಿಗಳಾದ ಅರುಣ್‌ ಯೋಗಿರಾಜ್‌, ಎಂ. ರಾಮಮೂರ್ತಿ ಸಹಿತ ಸಾಧಕರಿಗೆ ವಿಶ್ವಕರ್ಮ ರಾಷ್ಟ್ರಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವವರಿಗೆ ವಿಶ್ವಕರ್ಮ ಸಮುದಾಯ ಸೇವಾರತ್ನ, ಕುಶಲಕರ್ಮಿಗಳಿಗೆ ವಿಶ್ವಕರ್ಮ ಕುಶಲಕರ್ಮಿ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಿತಿ ಅಧ್ಯಕ್ಷ ಆರ್‌. ಮಧುಸೂದನ್‌ ಅಧ್ಯಕ್ಷತೆ ವಹಿಸಿದ್ದರು. ಅರೆಮಾದನಹಳ್ಳಿ ಮಠದ ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ಆನೆಗೊಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ಮಧುಗಿರಿಯ ನೀಲಕಂಠಾಚಾರ್ಯ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್‌. ಶ್ರೀನಿವಾಸಾಚಾರಿ, ನಿವೃತ್ತ ಕೆಎಎಸ್‌ ಅಧಿಕಾರಿ ಬಿ.ಎಲ್‌. ವೇದಮೂರ್ತಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಮಾಲಿಗಾಚಾರ್‌, ವಕೀಲ ರುದ್ರಾಚಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT