ವಿದೇಶಿ ಪ್ರಜೆಗಳಿಗೆ ಮನೆ: 70 ಪ್ರಕರಣ ದಾಖಲು
ಬೆಂಗಳೂರು: ನಿಯಮ ಪಾಲಿಸದೇ ವಿದೇಶಿ ಪ್ರಜೆಗಳಿಗೆ ಮನೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು. ‘2020ರಿಂದ ಇದುವರೆಗೆ 70 ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವುಗಳ ಪೈಕಿ 42 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. 26 ಪ್ರಕರಣಗಳು ತನಿಖಾ ಹಂತದಲ್ಲಿವೆ. ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣದ ಸಂಬಂಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಮನೆ ಮಾಲೀಕರಿಗೆ ₹5 ಸಾವಿರ ದಂಡ ವಿಧಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು. ‘ವಿದೇಶಿಯರ ಕಾಯ್ದೆ–1946ರ ಕಲಂ 7ರ ಅಡಿ ಯಾವುದೇ ಮನೆಯ ಮಾಲೀಕ ಅಥವಾ ನಿರ್ವಹಣೆ ಮಾಡುವ ವ್ಯಕ್ತಿ ವಿದೇಶಿ ಪ್ರಜೆಗಳಿಗೆ ತನ್ನ ಮನೆಯನ್ನು ಬಾಡಿಗೆ ನೀಡಿದ 24 ಗಂಟೆಯ ಒಳಗಾಗಿ ವಿದೇಶಿಯರ ನೋಂದಣಿ ಇಲಾಖೆಯ ಆನ್‌ಲೈನ್ ಪೋರ್ಟಲ್ (http://indianfrro.gov.in/frro/FormC/dummy1.jsp) ಮೂಲಕ ಫಾರಂ–ಸಿ ನಮೂನೆಯನ್ನು ನೋಂದಣಿ ಅಧಿಕಾರಿಗೆ ಸಲ್ಲಿಸಬೇಕು. ಆ ಅಧಿಕಾರಿ ನಮೂನೆ–ಸಿ ಅನ್ನು ಅನುಮೋದಿಸಿದ ನಂತರ ಮನೆಯ ಮಾಲೀಕರು ವಿದೇಶಿ ಪ್ರಜೆಗಳಿಗೆ ತಮ್ಮ ಮನೆಯನ್ನು ಬಾಡಿಗೆಗೆ ನೀಡಬಹುದು’ ಎಂದು ಮಾಹಿತಿ ನೀಡಿದರು. ಇನ್ನು ಮುಂದೆ ಯಾವುದೇ ವಿದೇಶಿ ಪ್ರಜೆಗೆ ತಮ್ಮ ಮನೆಯನ್ನು ಬಾಡಿಗೆ ನೀಡುವ ಮುನ್ನ ಅವರ ಪೂರ್ವಾಪರ ವಿಚಾರಣೆ ನಡೆಸಬೇಕು. ಅದರ ವಿವರನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ನಿಯಮ ಪಾಲಿಸದ ಮನೆಯ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು. ‘ವಿದೇಶಿ ಪ್ರಜೆಗಳು ಮಾದಕ ವಸ್ತುಗಳ ಮಾರಾಟ ಸಾಗಣೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಬಂದಿದ್ದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.