ಮಂಗಳವಾರ, ಮಾರ್ಚ್ 28, 2023
23 °C

ಬ್ಯಾಂಕ್‌ನಲ್ಲಿ ಹತ್ಯೆ; ಇನ್‌ಸ್ಪೆಕ್ಟರ್‌ಗೆ ಕಮಿಷನರ್ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬ್ಯಾಂಕೊಂದರಲ್ಲಿ ಹಾಡಹಗಲೇ ರೌಡಿ ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಮಿಷನರ್ ಕಮಲ್ ಪಂತ್, ಕೋರಮಂಗಲ ಠಾಣೆಗೆ ಮಂಗಳವಾರ ರಾತ್ರಿ ದಿಢೀರ್ ಭೇಟಿ ನೀಡಿ ಕೃತ್ಯದ ಬಗ್ಗೆ ಮಾಹಿತಿ ಪಡೆದರು.

ಪತ್ನಿ ಜೊತೆ ಸೋಮವಾರ ಮಧ್ಯಾಹ್ನ ಬ್ಯಾಂಕ್‌ಗೆ ಬಂದಿದ್ದ ವೇಳೆ ರೌಡಿ ಬಬ್ಲಿ ಹತ್ಯೆಯಾಗಿತ್ತು. ಜನನಿಬಿಡ ಪ್ರದೇಶದಲ್ಲಿ ಕೊಲೆ ನಡೆದಿದ್ದರಿಂದ ಸುತ್ತಮುತ್ತ ಪ್ರದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಈ ಬಗ್ಗೆ ಇನ್‌ಸ್ಪೆಕ್ಟರ್‌ ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಕಮಿಷನರ್, ‘ಮುಂದಿನ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ, ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಮಾರಕಾಸ್ತ್ರ ಹಿಡಿದು ಮಧ್ಯಾಹ್ನವೇ ಬ್ಯಾಂಕ್‌ಗೆ ನುಗ್ಗಿ ಹತ್ಯೆ ಮಾಡುತ್ತಾರೆ ಎಂದರೆ ಏನು ಅರ್ಥ. ಠಾಣೆ ವ್ಯಾಪ್ತಿಯ ರೌಡಿಗಳ ಮೇಲೆ ನಿಗಾ ಇರಿಸಬೇಕು. ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಬೇಕಾದ ನೀವು ಹಾಗೂ ನಿಮ್ಮ ಸಿಬ್ಬಂದಿ ಏನು ಮಾಡುತ್ತಿದ್ದೀರಾ?’ ಎಂದೂ ಏರುಧ್ವನಿಯಲ್ಲಿ ಪ್ರಶ್ನಿಸಿದರು.

‘ಇಂಥ ಘಟನೆಗಳು ಮರು ಕಳಿಸಿದರೆ ಠಾಣಾಧಿಕಾರಿಯನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳುತ್ತೇನೆ’ ಎಂದೂ ಎಚ್ಚರಿಕೆ ನೀಡಿದರು.

ಕೊಲೆಗೆ ಪ್ರತೀಕಾರ: ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ರೌಡಿ ಅಪ್ಪು ಕೊಲೆ ಆಗಿತ್ತು. ಅದರಲ್ಲಿ ಬಬ್ಲಿ ಹೆಸರು ಕೇಳಿಬಂದಿತ್ತು. ಅದೇ ಕೊಲೆ ಪ್ರತೀಕಾರವಾಗಿ ಬಬ್ಲಿ ಹತ್ಯೆಯಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು