ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಎಂ ದೋಚಲು ಹೊಸ ‘ತಂತ್ರ’ !

ಬ್ಯಾಂಕ್‌ಗಳಿಗೆ ಪಂಗನಾಮ; ಇಬ್ಬರು ಆರೋಪಿಗಳ ಬಂಧನ
Last Updated 3 ಡಿಸೆಂಬರ್ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ತಂತ್ರದ ಮೂಲಕ ಎಟಿಎಂಗಳಲ್ಲಿದ್ದ ಹಣ ದೋಚಿ, ‘ವರ್ಗಾವಣೆ ವಿಫಲ’ ಎಂದು ಸುಳ್ಳು ದೂರು ದಾಖಲಿಸಿ ಬ್ಯಾಂಕ್‌ಗಳಿಂದಲೂ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

‘ಹರಿಯಾಣದ ಶಹಜಾದ್ (28) ಹಾಗೂ ಶಾಹೀದ್ (23) ಬಂಧಿತರು. ಅವರಿಂದ ಹಲವು ಬ್ಯಾಂಕ್‍ಗಳ 25 ಎಟಿಎಂ ಕಾರ್ಡ್‍ಗಳು ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಗರದ ಕೆಲ ಎಟಿಎಂಗಳಿಗೆ ಬಂದು ಹೋಗಿದ್ದ ಅಪರಿಚಿತರು, ಘಟಕದ ವಿದ್ಯುತ್ ಸ್ವಿಚ್ ಆಫ್ ಮಾಡಿ ಹಣ ಪಡೆದು ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಬಗ್ಗೆ ಟ್ರಾನ್ಸಾಕ್ಷನ್‌ ಸೆಲ್ಯೂಷನ್‌ ಇಂಟರ್ ನ್ಯಾಷನಲ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ಕುದ್ಹಾ ಬಕಾಷ್ ಖಾನ್ ಎಂಬುವರು ನ. 30ರಂದು ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಶಹಜಾದ್ ಹಾಗೂ ಶಾಹೀದ್ ಸಿಕ್ಕಿಬಿದ್ದರು’ ಎಂದು ತಿಳಿಸಿದರು.

ನೋಟು ಬಿಗಿ ಹಿಡಿಯುತ್ತಿದ್ದರು: ‘ದೆಹಲಿಯಿಂದ ಕಳೆದ ತಿಂಗಳು ನಗರಕ್ಕೆ ಬಂದಿದ್ದ ಆರೋಪಿಗಳು, ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಘಟಕಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು. ಅದಕ್ಕಾಗಿಯೇ ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದರು. ಅವುಗಳ ಎಟಿಎಂ ಕಾರ್ಡ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಎಟಿಎಂಗಳಿಗೆ ಹೋಗುತ್ತಿದ್ದ ಆರೋಪಿಗಳು, ಸಿಸಿಟಿವಿ ಕ್ಯಾಮೆರಾಗಳನ್ನು ತಿರುಗಿಸುತ್ತಿದ್ದರು. ವಿದ್ಯುತ್ ಸ್ವಿಚ್‌ ಬಟನ್‌ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ವಾಪಸು ತೆರಳಿ ಮರುದಿನ ಅದೇ ಎಟಿಎಂ ಘಟಕಕ್ಕೆ ಹೋಗುತ್ತಿದ್ದರು’ ಎಂದರು.

‘ಒಬ್ಬಾತ ಗ್ರಾಹಕರ ಸೋಗಿನಲ್ಲಿ ಯಂತ್ರದೊಳಗೆ ಕಾರ್ಡ್ ಹಾಕಿ, ಡ್ರಾ ಮಾಡಿಕೊಳ್ಳಬೇಕಾದ ಮೊತ್ತ ನಮೂದಿಸುತ್ತಿದ್ದ. ಯಂತ್ರದ ಕ್ಯಾಶ್ ಡಿಸ್ಪೆನ್ಸರ್‌ನಲ್ಲಿ (ಹಣ ಬರುವ ಸ್ಥಳ) ಹಣ ಬಂದರೂ ಆರೋಪಿ ತೆಗೆದುಕೊಳ್ಳುತ್ತಿರಲಿಲ್ಲ. ಗರಿಷ್ಠ ಸಮಯ ಮುಗಿದು ಬೀಪ್ ಶಬ್ದ ಬಂದು ಹಣ ವಾಪಸು ಹೋಗುತ್ತಿದ್ದ ಸಂದರ್ಭದಲ್ಲೇ ನೋಟುಗಳನ್ನು ಬಿಗಿಯಾಗಿ ಹಿಡಿಯುತ್ತಿದ್ದ.’

‘ಮತ್ತೊಬ್ಬ ಘಟಕದ ವಿದ್ಯುತ್ ಸ್ವಿಚ್ ಆಫ್ ಮಾಡುತ್ತಿದ್ದ. ವಿದ್ಯುತ್ ಸಂಪರ್ಕ ಕಡಿತವಾಗುತ್ತಿದ್ದಂತೆ ಯಂತ್ರದ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿತ್ತು. ಅವಾಗಲೇ ನೋಟುಗಳನ್ನು ಆರೋಪಿಗಳು ಸಲೀಸಾಗಿ ಪಡೆದುಕೊಳ್ಳುತ್ತಿದ್ದರು. ಅತ್ತ, ‘ಹಣದ ವರ್ಗಾವಣೆ ವಿಫಲ’ ಎಂಬ ಸಂದೇಶ ಯಂತ್ರದಲ್ಲಿ ಬರುತ್ತಿತ್ತು. ಆರೋಪಿ ಡ್ರಾ ಮಾಡಿಕೊಳ್ಳಲು ನಮೂದಿಸಿದ್ದ ಹಣ ವಾಪಸು ಖಾತೆಗೆ ಜಮೆ ಆಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

ಆರೋಪಿಗಳಿಂದ ಸಹಾಯವಾಣಿಗೆ ದೂರು: ‘ಕೆಲ ಎಟಿಎಂ ಘಟಕಗಳಲ್ಲಿ ‘ಹಣದ ವರ್ಗಾವಣೆ ವಿಫಲ’ ಎಂಬ ಸಂದೇಶ ಬಂದರೂ ಖಾತೆಗೆ ಹಣ ಜಮೆ ಆಗಿರಲಿಲ್ಲ. ಆ ಸಂಬಂಧ ಬ್ಯಾಂಕ್‌ಗಳ ಸಹಾಯವಾಣಿಗೆ ಕರೆ ಮಾಡುತ್ತಿದ್ದ ಆರೋಪಿಗಳು, ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ಮಾತು ನಂಬುತ್ತಿದ್ದ ಪ್ರತಿನಿಧಿಗಳು, ವಾರದೊಳಗಾಗಿ ಹಣ ಜಮೆ ಮಾಡುತ್ತಿದ್ದರು. ಇದೇ ರೀತಿಯಾಗಿ ಬ್ಯಾಂಕ್‌ನಿಂದ ಹಣ ಪಡೆದು ವಂಚಿಸುವುದನ್ನೇ ಆರೋಪಿಗಳು ವೃತ್ತಿ ಮಾಡಿಕೊಂಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT