ಬೆಂಗಳೂರು: ಹೆಣ್ಣಿನ ವೇಷಭೂಷಣ ತೊಟ್ಟು ಮಂಗಳಮುಖಿಯರ ಜತೆ ಸೇರಿ ಭಿಕ್ಷಾಟನೆ ಮಾಡುವುದನ್ನೇ ರೂಢಿಸಿಕೊಂಡಿದ್ದ ಆರೋಪಿ ಚೇತನ್‌ನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ಚೇತನ್, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದ. ಇದಕ್ಕೆ ಹಣ ಹೊಂದಿಸಲು ಹೆಣ್ಣಿನ ವೇಷ ಧರಿಸಿ, ಮಂಗಳಮುಖಿಯರ ಜೊತೆ ಸೇರಿ ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ. ಚೇತನ್‌ನ ನಿಜ ಬಣ್ಣ ತಿಳಿದ ಸ್ಥಳೀಯರು, ಆತನನ್ನು ಹಿಡಿದು ಹೊಯ್ಸಳ ಗಸ್ತು ವಾಹನ ಸಿಬ್ಬಂದಿ ಸುಪರ್ದಿಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸ್ಥಳೀಯ ಮಹಿಳೆಯರು ನೀಡಿರುವ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಚೇತನ್‌ನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿವೆ.
ಮನೆಯಲ್ಲಿ ಗಂಡು, ಹೊರಗೆ ಹೆಣ್ಣು: ‘ಬಾಗಲಗುಂಟೆ ಕೆರೆ ಸಮೀಪದ ಮನೆಯಲ್ಲಿ ಚೇತನ್ ದಂಪತಿ ಹಾಗೂ ಇಬ್ಬರು ಮಕ್ಕಳು ವಾಸವಿದ್ದಾರೆ. ಮನೆಯಲ್ಲಿ ಗಂಡಿನ ವೇಷದಲ್ಲಿರುತ್ತಿದ್ದ ಚೇತನ್, ಹೊರಗೆ ಬಂದ ನಂತರ ಸೀರೆಯುಟ್ಟು ಹೆಣ್ಣಿನ ರೀತಿಯಲ್ಲಿ ವೇಷ ಧರಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ತನ್ನ ಕುಟುಂಬದ ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು, ಮಂಜುನಾಥ್‌ನಗರದ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದ. ಆಗಾಗ ಕೊಠಡಿಯಲ್ಲಿ ಉಳಿದುಕೊಳ್ಳುತ್ತಿದ್ದ ಆರೋಪಿ, ಸುತ್ತಮುತ್ತಲಿನ ಮಂಗಳಮುಖಿಯರ ಜೊತೆ ಸ್ನೇಹ ಬೆಳೆಸಿದ್ದ. ಅವರ ರೀತಿಯಲ್ಲೇ ಮಾತನಾಡುತ್ತಿದ್ದ. ಅವರಿಗೂ ಆರೋಪಿ ಗಂಡು ಎಂಬುದು ಗೊತ್ತಾಗಿರಲಿಲ್ಲ’ ಎಂದು ಹೇಳಿವೆ.
ಸ್ಥಳೀಯರಿಗೆ ಕಿರುಕುಳ: ‘ತುಮಕೂರು ರಸ್ತೆಯ ಮಂಜುನಾಥನಗರ ಬಸ್ ತಂಗುದಾಣ ಹಾಗೂ ಸುತ್ತಮುತ್ತ ಓಡಾಡುತ್ತಿದ್ದ ಆರೋಪಿ ಚೇತನ್, ಸ್ಥಳೀಯರನ್ನು ಅಡ್ಡಗಟ್ಟಿ ಹಣ ಕೇಳುತ್ತಿದ್ದ. ಹಣ ಕೊಡದಿದ್ದರೆ, ಸುಲಿಗೆ ರೀತಿಯಲ್ಲಿ ಕಸಿದುಕೊಳ್ಳುತ್ತಿದ್ದ. ಹಣ ನೀಡದ ವ್ಯಾಪಾರಿಗಳ ಜೊತೆ ಜಗಳ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೃತ್ಯವನ್ನು ಯಾರಾದರೂ ಪ್ರಶ್ನಿಸಿದರೆ, ಇತರೆ ಮಂಗಳಮುಖಿಯರನ್ನು ಕರೆತಂದು ಗಲಾಟೆ ಮಾಡಿಸುವುದಾಗಿ ಚೇತನ್ ಬೆದರಿಕೆ ಹಾಕುತ್ತಿದ್ದ. ಈತನ ವರ್ತನೆಯಿಂದ ಸ್ಥಳೀಯರು ಬೇಸತ್ತಿದ್ದರು’ ಎಂದು ತಿಳಿಸಿವೆ.
ಮೆಟ್ರೊ ಜಾಗದಲ್ಲಿ ಶೆಡ್: ‘ಮಂಜುನಾಥ್‌ನಗರದಲ್ಲಿ ಮೆಟ್ರೊ ಕಾಮಗಾರಿ ಪ್ರಗತಿಯಲ್ಲಿದೆ. ಬಿಎಂಆರ್‌ಸಿಎಲ್‌ಗೆ ಸೇರಿದ್ದ ಜಾಗದಲ್ಲಿ ಆರೋಪಿ ತಗಡಿನ ಶೆಡ್ ನಿರ್ಮಿಸುತ್ತಿದ್ದ. ಮುಂಬರುವ ದಿನಗಳಲ್ಲಿ ಅದೇ ಸ್ಥಳದಲ್ಲಿ ತಾತ್ಕಾಲಿಕವಾಗಿ ಮಳಿಗೆಯೊಂದನ್ನು ಆರಂಭಿಸಿ ಬಾಡಿಗೆ ನೀಡುವುದು ಈತನ ಉದ್ದೇಶವಾಗಿತ್ತೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಶೆಡ್ ನಿರ್ಮಾಣದ ಮಾಹಿತಿ ಪಡೆದ ಮೆಟ್ರೊ ಅಧಿಕಾರಿಗಳು ಹಾಗೂ ಸ್ಥಳೀಯರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಅವರ ಮೇಲೆಯೇ ಆರೋಪಿ ಹರಿಹಾಯ್ದಿದ್ದ. ಕೆಲ ಸ್ಥಳೀಯ ಮಹಿಳೆಯರ ಸೀರೆ ಹಿಡಿದು ಎಳೆದಾಡಿ, ಅನುಚಿತವಾಗಿ ವರ್ತಿಸಿದ್ದ. ತಕ್ಕಪಾಠ ಕಲಿಸಲು ಮುಂದಾದ ಜನ, ಚೇತನ್‌ನನ್ನು ಹಿಡಿದು ಥಳಿಸಿದ್ದರು. ಅವಾಗಲೇ ಆತ, ಗಂಡು ಎಂಬುದು ತಿಳಿದಿದೆ.’
‘ಚೇತನ್ ಆಧಾರ್ ಹಾಗೂ ಇತರೆ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗಿದೆ. ಎಲ್ಲ ಕಡೆಯೂ ‘ಗಂಡು’ ಎಂಬುದು ಉಲ್ಲೇಖವಾಗಿದೆ. ಜೊತೆಗೆ, ಪತ್ನಿಯೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.