ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟದ ಹಸಿರು ಕೂಗು: ‘ಪರಿಸರ ಸೂಕ್ಷ್ಮತೆ’ ಮರೆಯಿತೇ ಸರ್ಕಾರ?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಇಎಸ್‌ಜೆಡ್‌ ಕಡಿತಕ್ಕೆ ವಿರೋಧ * ಹಸಿರು ಉಳಿಸುವವರ ಕೂಗು ಕೇಳುವವರಿಲ್ಲ
Last Updated 30 ಡಿಸೆಂಬರ್ 2019, 1:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಿಂದ ಕೇವಲ 22 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಉದ್ಯಾನವಿದು. ಪರಿಸರ ಕಾಯ್ದೆಯ ರಕ್ಷಣೆಯ ಹೊರತಾಗಿಯೂ ಈ ಉದ್ಯಾನದ ಆಸುಪಾಸಿನಲ್ಲಿ ಗಣಿಗಾರಿಕೆ, ವಾಣಿಜ್ಯೀಕರಣ ಅವ್ಯಾಹತವಾಗಿದೆ. ಇದರ ಆಸುಪಾಸಿನ ಪರಿಸರ ಸೂಕ್ಷ ಪ್ರದೇಶಗಳು ಈಗ ಕಾನೂನಿನ ರಕ್ಷಣೆಯನ್ನೂ ಕಳೆದುಕೊಳ್ಳುವಂತಹ ಭೀತಿಯನ್ನು ಎದುರಿಸುತ್ತಿವೆ.

ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲ ಯವು 2016ರಲ್ಲಿ ಹೊರಡಿಸಲಾಗಿದ್ದ ಕರಡು ಅಧಿಸೂಚನೆಯಲ್ಲಿ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು 268.96 ಚದರ ಕಿ.ಮೀ. ಎಂದು ಗುರುತಿಸಲಾಗಿತ್ತು. ಆದರೆ, ಈ ಕುರಿತ ಅಂತಿಮ ಅಧಿಸೂಚನೆ ಪ್ರಕಟವಾಗದ ಕಾರಣ ಇಎಸ್‌ಜೆಡ್‌ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಈ ನಡುವೆ, ರಾಜ್ಯ ಸಂಪುಟ ಉಪಸಮಿತಿ ಇಎಸ್‌ಜೆಡ್‌ ವ್ಯಾಪ್ತಿಯನ್ನು 168.84 ಚ. ಕಿ.ಮೀ. ಗೆ ಕಡಿತಗೊಳಿಸುವ ನಿರ್ಣಯವನ್ನು2017ರ ಫೆ. 10ರಂದು ಕೈಗೊಂಡಿತು.

ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಇಎಸ್‌ಜೆಡ್‌ನ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಸೀಮಿತಗೊಳಿಸಿ ಕೇಂದ್ರ ಸಚಿವಾಲಯವು 2018ರ ಅ.30ರಂದು ಗೆಜೆಟ್‌ನಲ್ಲಿ ಕರಡು ಅಧಿಸೂಚನೆ ಹೊರಡಿಸಿ ಜನರಿಂದ ಪ್ರತಿಕ್ರಿಯೆ ಆಹ್ವಾನಿಸಿತು. ಈ ಪ್ರಸ್ತಾವಕ್ಕೆ ಪರಿಸರ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಇಎಸ್‌ಜೆಡ್‌ ಕಡಿತ ವಿರೋಧಿಸಿ ‘ಯುನೈಟೆಡ್‌ ಬೆಂಗಳೂರು’ ಸಂಘಟನೆ ಆರಂಭಿಸಿದ್ದ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನಕ್ಕೆ 1 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ್ದರು. ಯಾವುದೇ ಕಾರಣಕ್ಕೂ ಇಎಸ್‌ಜೆಡ್ ವ್ಯಾಪ್ತಿ ಕಡಿತಗೊಳಿಸಬಾರದು ಎಂದು ಅನೇಕರು ಲಿಖಿತ ಮನವಿ ಸಲ್ಲಿಸಿದ್ದರು.

ಕೇಂದ್ರ ಇಎಸ್‌ಜೆಡ್‌ ತಜ್ಞರ ಸಮಿತಿಯು2019ರ ಫೆ. 28ರಂದು ನಡೆಸಿದ 33ನೇ ಸಭೆಯಲ್ಲಿ ಪರಿಸರ ಕಾರ್ಯಕರ್ತರ ವಿರೋಧ ಲೆಕ್ಕಿಸದೇ ಕರಡು ಅಧಿಸೂಚನೆಗೆ ಅನುಮೋದನೆ ನೀಡಿತ್ತು. ಈ ನಡುವೆ, ಪರಿಸರ ಕಾರ್ಯಕರ್ತರು ಸಂಸದ ಪಿ.ಸಿ.ಮೋಹನ್‌ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ನೇತೃತ್ವದಲ್ಲಿ ಆಗಿನ ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ ಅವರನ್ನು ಭೇಟಿ ಮಾಡಿ, ‘ಯಾವುದೇ ಕಾರಣಕ್ಕೂ ಇಎಸ್‌ಜೆಡ್‌ ವ್ಯಾಪ್ತಿಯನ್ನು ಕಡಿತಗೊಳಿಸಬಾರದು’ ಎಂದು ಒತ್ತಾಯಿಸಿದ್ದರು. ಬಳಿಕ ಸಮಿತಿಯ ನಿರ್ಣಯವನ್ನು ಕೇಂದ್ರ ಪರಿಸರ ಸಚಿವಾಲಯ ತಡೆಹಿಡಿದಿತ್ತು.

ಕೇಂದ್ರ ಸಚಿವಾಲಯದ ನಿರ್ದೇಶಕ ಡಾ. ಸುಬ್ರತಾ ಬೋಸ್‌ 2019ರ ಆ.20ರಂದು ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ವನ್ಯಜೀವಿ) ಪತ್ರ ಬರೆದು, ಇಎಸ್‌ಜೆಡ್‌ ವ್ಯಾಪ್ತಿಯನ್ನು 2016ರ ಮೂಲ ಪ್ರಸ್ತಾವದಲ್ಲಿರುವಷ್ಟೇ ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ಹಾಗೂ ಇಎಸ್‌ಜೆಡ್‌ ಕಡಿತ ದಿಂದ ಆನೆ ಕಾರಿಡಾರ್‌ ಮೇಲಾಗುವ ಪರಿಣಾಮಗಳ ಬಗ್ಗೆ ವರದಿ ಕೇಳಿದ್ದರು.

ಇಷ್ಟಾಗಿಯೂ ಪರಿಸರ ಕಾರ್ಯ ಕರ್ತರ ಹಾಗೂ ಸಂಸದರ ಒತ್ತಾಯಕ್ಕೆ ಯಾವುದೇ ಬೆಲೆ ಸಿಕ್ಕಿಲ್ಲ. ಸಂಸದ ತೇಜಸ್ವಿ ಸೂರ್ಯ ಕೇಳಿದ ಚುಕ್ಕಿರಹಿತ ಪ್ರಶ್ನೆಗೆ ಸಚಿವಾಲಯವು ನೀಡಿದ ಉತ್ತರ ವನ್ಯಜೀವಿ ಕಾರ್ಯಕರ್ತರ ಪಾಲಿಗೆ ನಿರಾಶಾದಾಯಕವಾಗಿದೆ. ‘ಕರ್ನಾಟಕದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ 2019ರ ನ.27ರಂದು ಕೇಂದ್ರ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ, ಉದ್ಯಾನದ ಇಎಸ್‌ಜೆಡ್‌ ಅನ್ನು 168.84 ಚದರ ಕಿ.ಮೀ.ಗೆ ಕಡಿತಗೊಳಿಸುವಂತೆ ರಾಜ್ಯ ಸಂಪುಟ ಉಪಸಮಿತಿ ಶಿಫಾರಸು ಮಾಡಿರುವುದಾಗಿ ತಿಳಿಸಿದ್ದಾರೆ’ ಎಂದು ಕೇಂದ್ರ ಸಚಿವಾಲಯ ಸಂಸದರಿಗೆ ಉತ್ತರಿಸಿದೆ. 2016ರ ಅಧಿಸೂಚನೆಯಂತೆ 268.96 ಚ.ಕಿ.ಮೀ. ಇಎಸ್‌ಜೆಡ್‌ ಉಳಿಸಿಕೊಳ್ಳುವ ಕಾಳಜಿ ರಾಜ್ಯ ಸರ್ಕಾರಕ್ಕೆ ಇಲ್ಲ ಎಂಬುದು ಇದರಿಂದ ಸ್ಪಷ್ಟ.

ಕೇಂದ್ರ ಸರ್ಕಾರವು ಇನ್ನೂ ಇಎಸ್‌ಜೆಡ್‌ ಕುರಿತು ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಸಂಪುಟ ಉಪಸಮಿತಿ ತೀರ್ಮಾನ ಕೈಗೊಂಡಿ ರುವುದು 2017ರಲ್ಲಿ. ಬಿಜೆಪಿ ನೇತೃತ್ವದ ಸರ್ಕಾರವು ಹಿಂದಿನ ಸರ್ಕಾರದ ಅನೇಕ ನಿರ್ಧಾರಗಳನ್ನು ರದ್ದುಪಡಿಸಿದೆ. ಸರ್ಕಾರವು ಪರಿಸರ ಸೂಕ್ಷ್ಮತೆ ಹೊಂದಿರುವುದೇ ಆದರೆ ಹಿಂದಿನ ಸಂಪುಟ ಉಪಸಮಿತಿಯ ತೀರ್ಮಾನ ರದ್ದುಪಡಿಸಿ ಮೊದಲಿನಷ್ಟೇ ಇಎಸ್‌ಜೆಡ್‌ ಉಳಿಸಿಕೊಳ್ಳಬೇಕು ಎಂಬುದು ಪರಿಸರ ಕಾರ್ಯಕರ್ತರ ಒತ್ತಾಯ.

ನಿಯಮ ಮೀರಿ ಟೌನ್‌ಶಿಪ್‌ ನಿರ್ಮಾಣ
ಯಾವುದೇ ರಾಷ್ಟ್ರಿಯ ಉದ್ಯಾನದ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು ಅಂತಿಮಗೊಳಿಸುವವರೆಗೆ, ಉದ್ಯಾನದ 10 ಕಿ.ಮೀ ವ್ಯಾಪ್ತಿಯನ್ನೇ ಇಎಸ್‌ಜೆಡ್‌ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಆದರೂ ಇಎಸ್‌ಜೆಡ್‌ ಪ್ರದೇಶಗಳಲ್ಲಿ ನಿರ್ಬಂಧಿಸಿದ ಚಟುವಟಿಕೆಯನ್ನು ತಡೆಯುವ ಯಾವುದೇ ಪ್ರಯತ್ನವನ್ನು ಜಿಲ್ಲಾಡಳಿತವಾಗಲೀ, ಅರಣ್ಯ ಇಲಾಖೆಯಾಗಲೀ ಮಾಡುತ್ತಿಲ್ಲ ಎಂಬುದು ವನ್ಯಜೀವಿ ಕಾರ್ಯಕರ್ತರ ದೂರು.

ಕರ್ನಾಟಕ ಗೃಹಮಂಡಳಿ ನಿರ್ಮಿಸುತ್ತಿರುವ ಸೂರ್ಯನಗರ ನಾಲ್ಕನೇ ಹಂತದ ಬಡಾವಣೆಯು ಪರಿಸರ ಸೂಕ್ಷ್ಮವಲಯದ ವ್ಯಾಪ್ತಿಯಲ್ಲೇ ಇದೆ. ಹಾಗಾಗಿ, ಈ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಅಗತ್ಯ. ಬಡಾವಣೆಯ ವಿಸ್ತೀರ್ಣ 10 ಎಕರೆಗಿಂತ ಹೆಚ್ಚು ಇರುವ ಕಾರಣ ಪರಿಸರ ಇಲಾಖೆಯಿಂದಲೂ ನಿರಾಕ್ಷೇಪಣೆ ಪತ್ರವನ್ನು ಪಡೆಯಬೇಕು.

ಈ ಅನುಮತಿಗಳನ್ನು ಪಡೆಯದೆಯೇ ಕೆಎಚ್‌ಬಿ ಸೂರ್ಯನಗರ ನಾಲ್ಕನೇ ಹಂತದ ಯೋಜನೆಗೆ ರಾಷ್ಟ್ರೀಯ ಉದ್ಯಾನದ ಆಸುಪಾಸಿನ ಕೋನಸಂದ್ರ, ಬೊಮ್ಮಂಡಹಳ್ಳಿ, ಕಾಡುಜಕ್ಕನಹಳ್ಳಿ, ಇಂಡಲವಾಡಿ ಮತ್ತು ಬಗ್ಗನದೊಡ್ಡಿ ಗ್ರಾಮಗಳಲ್ಲಿ ಒಟ್ಟು 1,938 ಎಕರೆ ಭೂಸ್ವಾಧೀನ ನಡೆಸಿದೆ. ಇದನ್ನು ಪ್ರಶ್ನಿಸಿ ಕೆಲವು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಎಸ್‌ಜೆಡ್‌ಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯ ಅಂತಿಮ ನಿರ್ಧಾರ ಕೈಗೊಂಡ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.

‘ಈ ಬಡಾವಣೆ ರಾಷ್ಟ್ರೀಯ ಉದ್ಯಾನದಿಂದ 2 ಕಿ.ಮೀ ದೂರದಲ್ಲಿದೆ. ಪರಿಸರ ಸೂಕ್ಷ್ಮ ವಲಯವನ್ನು 1.ಕಿ.ಮೀ ವ್ಯಾಪ್ತಿಗೆ ಸೀಮಿತಗೊಳಿಸಲು ಕೇಂದ್ರ ಪರಿಸರ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಹಾಗಾಗಿ, ಭೂಸ್ವಾಧೀನ ನಡೆಸುವುಕ್ಕೆ ಅಡ್ಡಿ ಇಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ ಕೆಎಚ್‌ಬಿ ಅಧಿಕಾರಿಗಳು. ಅನೇಕ ಖಾಸಗಿ ಟೌನ್‌ಶಿಪ್‌ಗಳೂ ಇಎಸ್‌ಜೆಡ್‌ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿದ್ದರೂ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ದೂರುತ್ತಾರೆ ವನ್ಯಜೀವಿ ಕಾರ್ಯಕರ್ತರು.

ಅಂತರ್ಜಲ ಅಕ್ರಮ ಮಾರಾಟ
ಇಎಸ್‌ಜೆಡ್‌ ವ್ಯಾಪ್ತಿಯಲ್ಲಿ ಅಂತರ್ಜಲವನ್ನು ಹೊರತೆಗೆದು ಮಾರಾಟ ಮಾಡುವಂತಿಲ್ಲ. ಆದರೆ, ಶಿವನಹಳ್ಳಿಯಲ್ಲಿ ಖಾಸಗಿ ಕಂಪನಿಯೊಂದು ಕುಡಿಯುವ ನೀರನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುವ ಘಟಕವನ್ನು ಆರಂಭಿಸಿದೆ. ಕೊಳವೆಬಾವಿಗಳ ನೀರನ್ನು ಇದಕ್ಕೆ ಬಳಸುತ್ತಿದೆ.

‘ಶಿವನಹಳ್ಳಿಯಲ್ಲಿ ಸ್ಥಳೀಯರಿಗೇ ಕುಡಿಯುವ ನೀರು ಇಲ್ಲ. ಅಂತಹದ್ದರಲ್ಲಿ ಇಎಸ್‌ಜೆಡ್‌ ಪ್ರದೇಶದಲ್ಲಿ ನಿಯಮ ಮೀರಿ ಬಾಟಲಿ ಘಟಕವನ್ನು ರಾಜಾರೋಷವಾಗಿ ನಡೆಸಲಾಗುತ್ತಿದೆ. ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ ನಗರ ಜಿಲ್ಲಾಡಳಿತ ಈ ಘಟಕವನ್ನು ಮುಚ್ಚಿಸಲು ಕ್ರಮ ಕೈಗೊಂಡಿಲ್ಲ’ ಎಂದು ಬನ್ನೇರುಘಟ್ಟ ನೇಚರ್‌ ಕನ್ಸರ್ವೇಷನ್‌ ಟ್ರಸ್ಟ್‌ನ ಸಂಚಾಲಕ ಆರ್‌.ಭಾನುಪ್ರಕಾಶ್‌ ಬೇಸರ ವ್ಯಕ್ತಪಡಿಸಿದರು.

ಇಎಸ್‌ಜೆಡ್ ವ್ಯಾಪ್ತಿಯಲ್ಲಿ ರೆಸಾರ್ಟ್‌ಗಳೂ, ಕಲ್ಯಾಣ ಮಂಟಪಗಳು ತಲೆ ಎತ್ತಿವೆ. ಅವುಗಳ ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲ.

ವ್ಯಾಪ್ತಿ ಕಡಿತ– ಅಪಾಯಗಳೇನು?
*2016ರ ಅಧಿಸೂಚನೆ ಪ್ರಕಾರ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಹೆಚ್ಚೂ ಕಡಿಮೆ 4.5 ಕಿ.ಮೀ ವ್ಯಾಪ್ತಿಯ ಪ್ರದೇಶ ಇಎಸ್‌ಜೆಡ್‌ ವ್ಯಾಪ್ತಿಯಲ್ಲಿ ಬರುತ್ತಿತ್ತು. ಆದರೆ, 2018ರ ಅಧಿಸೂಚನೆ ಪ್ರಕಾರ ಕನಿಷ್ಠ 100 ಮೀಟರ್‌ಗಳಿಂದ ಗರಿಷ್ಠ 1 ಕಿ.ಮೀ ವ್ಯಾಪ್ತಿಯಷ್ಟು ಪ್ರದೇಶ ಮಾತ್ರ ಇಎಸ್‌ಜೆಡ್‌ ವ್ಯಾಪ್ತಿಯಲ್ಲಿ ಉಳಿದುಕೊಳ್ಳುತ್ತದೆ.

*ಸದ್ಯ 10 ಕಿ.ಮೀ. ವ್ಯಾಪ್ತಿವರೆಗೆ ಇಎಸ್‌ಜೆಡ್‌ ಅನ್ವಯವಾಗುತ್ತದೆ ಎಂಬ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಈ ಪ್ರದೇಶಗಳಲ್ಲಿ ಅವ್ಯಾಹತವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. 2018ರ ಅಧಿಸೂಚನೆ ಅಂತಿಮವಾದರೆ 4.5 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ತಡೆಯುವ ಅವಕಾಶ ಕೈತಪ್ಪಲಿದೆ. ಕೆಲವೆಡೆ ಉದ್ಯಾನದ ಕೇವಲ 100 ಕಿ.ಮೀ ಆಚೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಬೇಕಾಗುತ್ತದೆ. ಇಂತಹ 70ಕ್ಕೂ ಅಧಿಕ ಕಡೆ ಗಣಿಗಾರಿಕೆ ನಡೆಸಲು ಕಂಪನಿಗಳು ಅವಕಾಶಕ್ಕಾಗಿ ಕಾಯುತ್ತಿವೆ.

*ಬೆಳೆಯುತ್ತಿರುವ ನಗರವು ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಹೇರಳ ಪ್ರಮಾಣದ ಕಲ್ಲು ಹಾಗೂ ಜಲ್ಲಿಗಳನ್ನು ಬಯಸುತ್ತದೆ. ದಕ್ಷಿಣ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಗಣಿಗಾರಿಕೆಗೆ ಅವಕಾಶ ಸಿಕ್ಕರೆ ಇಲ್ಲಿ ನಿತ್ಯ 300–400 ಲಾರಿಗಳು ಓಡಾಡಲಿವೆ. ಇದರಿಂದ ವನ್ಯಜೀವಿಗಳಿಗೆ ಆಪತ್ತು ಕಟ್ಟಿಟ್ಟಬುತ್ತಿ.

*ಜನವಸತಿ ಹೆಚ್ಚಿದರೆ, ಮಾಲಿನ್ಯವೂ ಹೆಚ್ಚುತ್ತದೆ. ಕಸ ವಿಲೇವಾರಿಗೆ ಹಾಗೂ ಕೊಳಚೆ ನೀರು ವಿಲೇವಾರಿಗೆ ಇಲ್ಲಿ ಸಮರ್ಪಕ ವ್ಯವಸ್ಥೆಗಳಿಲ್ಲ. ಇದರಿಂದಾಗಿ ಉದ್ಯಾನದ ಆಸುಪಾಸಿನ ಹಳ್ಳಿಗಳಲ್ಲಿರುವ ಕೆರೆ ಮತ್ತಿತರ ಜಲಕಾಯಗಳು ಕಲುಷಿತಗೊಳ್ಳಬಹುದು. ಇವುಗಳ ನೀರನ್ನು ಆಶ್ರಯಿಸಿರುವ ವನ್ಯಜೀವಿಗಳಿಗೆ ಇದರ ನೇರ ಪರಿಣಾಮ ತಟ್ಟಲಿದೆ.

*ಗಣಿಗಾರಿಕೆಯಲ್ಲಿ ಸ್ಫೋಟಕ ಬಳಕೆ ವೇಳೆ ನೆಲ ಅದುರುವುದು ವನ್ಯಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಲಿದೆ.

*ಜನವಸತಿ ಬೆಳೆದಂತೆ ಬೆಳಕಿನ ಮಾಲಿನ್ಯ ಹೆಚ್ಚಲಿದೆ ಇದು ಕೂಡಾ ವನ್ಯಜೀವಿಗಳ ಸಹಜ ಆವಾಸವನ್ನು ಹದಗೆಡಿಸಲಿದೆ.

*ಮಾನವ ಚಟುವಟಿಕೆ ಹೆಚ್ಚಳದಿಂದ ಆನೆ ಕಾರಿಡಾರ್‌ ಛಿದ್ರವಾಗಲಿದೆ. ಇದು ಮಾನವ –ವನ್ಯಜೀವಿ ಸಂಘರ್ಷ ಹೆಚ್ಚಳಕ್ಕೆ ದಾರಿ ಮಾಡಿಕೊಡಲಿದೆ.

**

‘ರಿಯಲ್‌ಎಸ್ಟೇಟ್‌ ಲಾಬಿಗೆ ಮಣಿದ ಸರ್ಕಾರ’
ರಿಯಲ್ ಎಸ್ಟೇಟ್‌ ಲಾಬಿಗೆ ಮಣಿದು ಸರ್ಕಾರ ಇಎಸ್‌ಜೆಡ್‌ ವ್ಯಾಪ್ತಿಯನ್ನು ಕಡಿತಗೊಳಿಸಲು ಮುಂದಾಗಿದೆ. ಇಲ್ಲಿನ ಪರಿಸರವನ್ನು ಈಗಿನಂತೆಯೇ ಉಳಿಸಿಕೊಡಿ ಎಂಬ ರೈತರ ಮಾತನ್ನು ಕೇಳುತ್ತಿಲ್ಲ. ಪರಿಸರ ಉಳಿಸುವ ಕಾಳಜಿ ಸರ್ಕಾರಕ್ಕೆ ಇಲ್ಲವೇ ಇಲ್ಲ. ಇತ್ತೀಚೆಗೆ ಕನಕಪುರ ಬಳಿ ಆನೆ ದಾಳಿಗೆ ಒಬ್ಬ ಯುವಕ ಬಲಿಯಾದ. ಅಂತಹ ಸ್ಥಿತಿ ಇಲ್ಲಿಯೂ ಬರಬಹುದು
-ಶ್ರೀನಿವಾಸ ಬಿ.,ಇಂಡಲವಾಡಿ ಗ್ರಾಮಸ್ಥ

*
‘ಬೆಂಗಳೂರು ನಗರಕ್ಕೂ ಬಿಸಿ ತಟ್ಟಲಿದೆ’
ಇನ್ನೂ ಇಎಸ್‌ಜೆಡ್ ಕಡಿತ ಜಾರಿಯಾಗಿಲ್ಲ. ಈಗಾಗಲೇ ಪರಿಸರ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸುವುದನ್ನು ಕಾಣುತ್ತಿದ್ದೇವೆ. ಕಾಟಿ, ಕಡವೆ, ಕಾಡುಹಂದಿಯಂತಹ ವನ್ಯಜೀವಿಗಳು ಸಮೃದ್ಧವಾಗಿರುವುದರಿಂದ ಇಲ್ಲಿ ಹುಲಿಯೂ ಕಾಣಿಸಿಕೊಂಡಿದೆ. ಇಲ್ಲಿನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸಿದರೆ ಈ ಪ್ರದೇಶವನ್ನು ಕ್ರಮೇಣ ರಾಷ್ಟ್ರೀಯ ಉದ್ಯಾನವನ್ನಾಗಿಯೂ ಅಭಿವೃದ್ಧಿಪಡಿಸಬಹುದು. ಇಲ್ಲಿನ ಹಸಿರು ವಾತಾವರಣವನ್ನು ಕಳೆದುಕೊಂಡರೆ ಬೆಂಗಳೂರು ನಗರಕ್ಕೂ ಅದರ ಬಿಸಿ ತಟ್ಟಲಿದೆ.
-ಆರ್‌.ಭಾನುಪ್ರಕಾಶ್‌,ಬನ್ನೇರುಘಟ್ಟ ನೇಚರ್‌ ಕನ್ಸರ್ವೇಷನ್‌ ಟ್ರಸ್ಟ್ ಸಂಚಾಲಕ

*
‘ಬಿಜೆಪಿ ನಾಯಕರು ಮಾತು ಉಳಿಸಿಕೊಳ್ಳಲಿ’
‘ಇಎಸ್‌ಜೆಡ್‌ ಕಡಿತ ಮಾಡುವುದು ಬನ್ನೇರುಘಟ್ಟ ಆಸುಪಾಸಿನ ಹಳ್ಳಿಗಳ ರೈತರಿಗೂ ಇಷ್ಟವಿಲ್ಲ. ಬಿಜೆಪಿಯ ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿಸೂರ್ಯ, ರಾಜೀವ್‌ ಚಂದ್ರಶೇಖರ್‌ ಅವರು ಇಎಸ್‌ಜೆಡ್‌ ಕಡಿತವನ್ನು ವಿರೋಧಿಸಿದ್ದರು. ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲಿ. ಈಗ ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದೆ. ಸರ್ಕಾರ ರಿಯಲ್‌ ಎಸ್ಟೇಟ್‌ ಹಾಗೂ ಗಣಿಗಾರಿಕೆ ಲಾಬಿಗೆ ಮಣಿಯಬಾರದು. ಹಿಂದಿನ ಸರ್ಕಾರದ ಸಂಪುಟ ಉಪಸಮಿತಿ ಕೈಗೊಂಡ ನಿರ್ಧಾರವನ್ನು ರದ್ದುಪಡಿಸಬೇಕು
-ವಿಜಯ್‌ ನಿಶಾಂತ್‌,ಪರಿಸರ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT