ಸೋಮವಾರ, ಜೂನ್ 21, 2021
26 °C
ಬಿಬಿಎಂಪಿ: ಯುವಜನರನ್ನು, ಮಧ್ಯ ವಯಸ್ಕರನ್ನು ಬದುಕಿಗೆ ಕೊಳ್ಳಿ ಇಡುತ್ತಿರುವ ಕೊರೊನಾ

ಬೆಂಗಳೂರು: ಕೋವಿಡ್‌ನಿಂದ ಸತ್ತವರಲ್ಲಿ ಶೇ 20 ಮಂದಿಯ ವಯಸ್ಸು 50 ವರ್ಷ ಮೀರಿಲ್ಲ

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಆ ಯುವತಿಯ ವಯಸ್ಸು ಕೇವಲ 26. ಹೆಸರು ನಾಗವೇಣಿ. ಮದುವೆಯಾಗಿ ಒಂದೂವರೆ ವರ್ಷಗಳಾಗಿವೆ ಅಷ್ಟೇ. ಬದುಕಿನ ಬಗ್ಗೆ ಬಣ್ಣ ಬಣ್ಣದ ಕನಸು ಕಂಡಿದ್ದ ಹುಡುಗಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಮುದ್ದಿನ ಮಡದಿಯನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾದ ಬಳಿಕ ಪತಿ ರವಿ ಕುಮಾರ್‌ ಹತಾಶರಾಗಿ ಕುಳಿತಿದ್ದಾರೆ... ಯಲಹಂಕದ ಕುಟುಂಬವೊಂದರ ಕರುಣಾಜನಕ ಪರಿಸ್ಥಿತಿ ಇದು.

’ರವಿ ಅವರಂತೂ ಪತ್ನಿಯನ್ನು ಉಳಿಸಿಕೊಳ್ಳಲು ನಾಲ್ಕೈದು ದಿನ ನಿದ್ದೆ  ಬಿಟ್ಟು ಒದ್ದಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದ ಬಳಿಕವೂ ಆ ಹುಡುಗಿಯ ಆರೋಗ್ಯ ಹದಗೆಡುತ್ತಲೇ ಹೋಯಿತು. ಅದರೆ, ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದರು. ಹೆಣಗಾಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆ ಸಿಕ್ಕಿತು. ಅಲ್ಲೂ ಚಿಕಿತ್ಸೆಗೆ ಆಕೆ ಸ್ಪಂದಿಸಲಿಲ್ಲ. ವೆಂಟಿಲೇಟರ್‌ ಇರುವ ಐಸಿಯು ಅಗತ್ಯವಿದೆ ಎಂದು ವೈದ್ಯರು ಹೇಳಿದರು. ಸಾಕಷ್ಟು ಹುಡುಕಾಡಿದ ಬಳಿಕ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಇರುವ ಹಾಸಿಗೆ ಸಿಕ್ಕಿತು. ಆದರೆ, ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಪ್ರಕ್ರಿಯೆಗೆ ಮೂರು ತಾಸು ಬೇಕಾಯಿತು. ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದೊಯ್ದಾಗ ಆಕೆಯ ಪ್ರಾಣ ಪಕ್ಷಿಯೇ ಹಾರಿ ಹೋಗಿತ್ತು’ ಎಂದು ದಂಪತಿಯ ಬಂಧುವೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದು ಕೇವಲ ನಾಗವೇಣಿಯೊಬ್ಬರ ಕತೆಯಲ್ಲ. ಆಕೆಯಂತಹ ಸಾವಿರಾರು ಜೀವಗಳು ಅಕಾಲಿಕ ಇಹಯಾತ್ರೆಯನ್ನು ಅರ್ಧದಲ್ಲೇ ಮುಗಿಸಿವೆ. ನಗರದಲ್ಲಿ ಶುಕ್ರವಾರದವರೆಗೆ  (ಮೇ 14) ಕೋವಿಡ್‌ನಿಂದ 9,247 ಮಂದಿ ಕೊನೆಯುಸಿರೆಳೆದಿದ್ದಾರೆ. ಇವರಲ್ಲಿ ಶೇ 33ರಷ್ಟು ಮಂದಿ ಮಾತ್ರ 70 ವರ್ಷ (ಭಾರತೀಯರ ಸರಾಸರಿ ವಯಸ್ಸು) ಮೀರಿದವರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಸತ್ತವರಲ್ಲಿ 1,819 ಮಂದಿಯ ವಯಸ್ಸು 50 ದಾಟಿಲ್ಲ. 700 ಮಂದಿಯ ವಯಸ್ಸು 40 ಮೀರಿಲ್ಲ. 214 ಮಂದಿ ವಯಸ್ಸು 30ರ ಗಡಿ ದಾಡುವ ಮುನ್ನವೇ ಬದುಕಿಗೆ ವಿದಾಯ ಹೇಳಿದ್ದಾರೆ. 38 ಮಂದಿ ಹದಿಹರೆಯ ದಾಡುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಆಡುವ ವಯಸ್ಸಿನಲ್ಲೇ ಬದುಕಿನ ಆಟ ಮುಗಿಸಿದ ಮಕ್ಕಳ ಸಂಖ್ಯೆ 19.

‘ಕೋವಿಡ್‌ ಎರಡನೇ ಅಲೆ ಸಾಯುವ ವಯಸ್ಸೇ ಅಲ್ಲದವರನ್ನೂ ಸಾಕಷ್ಟು ಸಂಖ್ಯೆಯಲ್ಲಿ ಬಲಿ ಪಡೆದಿದೆ. ಮೊದಲ ಅಲೆಯಲ್ಲಿ ಸತ್ತವರಲ್ಲಿ ಯುವಕ ಯುವತಿಯರ ಸಂಖ್ಯೆ ತೀರಾ ಕಡಿಮೆ ಇತ್ತು, ನಡು ವಯಸ್ಕರು ಹಾಗೂ 60 ಮೀರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಸತ್ತಿದ್ದರು. ಆದರೆ, ಎರಡನೇ ಅಲೆಯಲ್ಲಿ ಕೋವಿಡ್‌ನಿಂದ ಸತ್ತವರಲ್ಲಿ ಶೇ 20ರಷ್ಟು ಮಂದಿ 50 ವರ್ಷ ಮೀರದವರು. ಅವರನ್ನು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂಬುದು ತೀರಾ ಬೇಸರದ ಸಂಗತಿ’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯುವಜನರ ಸಾವಿಗೆ ‘ಹ್ಯಾಪಿ ಹೈಪೋಕ್ಸಿಯ’ ಕಾರಣ
‘ಕೋವಿಡ್‌ ಎರಡನೇ ಅಲೆಯಲ್ಲಿ ಯುವಜನರೂ ಸಾಕಷ್ಟು ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ ಶೇ 80ರವರೆಗೆ ಇಳಿಕೆ ಕಂಡರೂ ಯುವಜನರಿಗೆ ಪಕ್ಕ ಗೊತ್ತಾಗುವುದಿಲ್ಲ. ಹಾಗಾಗಿ ಅವರು ತಮಗೇನೂ ಆಗಿಲ್ಲ ಎಂದು ನಿರಾತಂಕದಿಂದ ಇರುತ್ತಾರೆ. ಈ ಲಕ್ಷಣವನ್ನು ‘ಹ್ಯಾಪಿ ಹೈಪೋಕ್ಸಿಯ‘ ಎನ್ನುತ್ತಾರೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ ದಿಢೀರ್‌ ಇಳಿಕೆ ಕಂಡಾಗ ತುರ್ತಾಗಿ ತೀವ್ರ ನಿಗಾ ವಹಿಸುವ ಅಗತ್ಯ ಇರುತ್ತದೆ. ಆದರೆ, ತುರ್ತಾಗಿ ಐಸಿಯು ಹಾಸಿಗೆ ಸಿಗದೇ ಹೋದರೆ ಸಾವು ಖಚಿತ’ ಎಂದು ಬಿಬಿಎಂ‍ಪಿ ಅಧಿಕಾರಿ ವಿವರಿಸಿದರು.

‘ಸಾವಿನ ದರ ಇಳಿಯಲಿದೆ’
’ನಗರದಲ್ಲಿ ಇಗಲೂ ಕೋವಿಡ್‌ ದೃಢಪಟ್ಟರ ಸಾವಿನ ದರ ಶೇ 1.07 ರಷ್ಟಿದೆ. ಇದು ಕಳೆದ ಜುಲೈನಲ್ಲಿ ಶೇ 1.84ರಷ್ಟಿತ್ತು. ಕಳೆದ ಎರಡು ದಿನಗಳಲ್ಲಿ ಸೋಂಕು ಪತ್ತೆಯಾದವರಿಗಿಂತ ರೋಗದಿಂದ ಚೇತರಿಸಿಕೊಂಡವರೇ ಹೆಚ್ಚು ಇತ್ತು. ಬುಧವಾರ 16,286 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ 18,089 ಮಂದಿ ಗುಣಮುಖರಾಗಿದ್ದರು. ಗುರುವಾರ 15,191 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ 16,084 ಮಂದಿಯಲ್ಲಿ ರೋಗ ವಾಸಿಯಾಗಿತ್ತು. ಸೋಂಕು ಪತ್ತೆ ಪ್ರಮಾಣವೂ ಐದು ದಿನಗಳಿಂದ ಕಡಿಮೆಯಾಗುತ್ತಿದೆ. ಇದು ಎರಡನೇ ಅಲೆಯ ತೀವ್ರತೆ ಕಡಿಮೆಯಾಗುವುದರ ಸೂಚನೆ. ಕ್ರಮೇಣ ಸಾವಿನ ದರವೂ ಇಳಿಯಲಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಆಶಾವಾದ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು