ಸೋಮವಾರ, ಜುಲೈ 26, 2021
21 °C

ಬಿಬಿಎಂಪಿ: 55 ಸೂಕ್ಷ್ಮ ಕಂಟೈನ್‌ಮೆಂಟ್ ವಲಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲು ಗುರುತಿಸಿರುವ ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯಗಳಲ್ಲಿ  55 ವಲಯಗಳು ಈಗಲೂ ಸಕ್ರಿಯವಾಗಿವೆ.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಒಂದೇ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ಒಟ್ಟು 549 ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ 494 ವಲಯಗಳು ಈಗ ಸಕ್ರಿಯವಾಗಿಲ್ಲ. ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಸಂಖ್ಯೆಯ (19) ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯಗಳು ಸಕ್ರಿಯವಾಗಿವೆ. ದಾಸರಹಳ್ಳಿ ಹಾಗೂ ಪಶ್ಚಿಮ ವಲಯಗಳಲ್ಲಿ ಯಾವುದೇ ಕಂಟೈನ್‌ಮೆಂಟ್‌ ವಲಯಗಳಿಲ್ಲ.

ಬೆಳ್ಳಂದೂರು, ಹೊರಮಾವು, ಹಗದೂರು, ಶಾಂತಲಾನಗರ, ವರ್ತೂರು, ದೊಡ್ಡನೆಕ್ಕುಂದಿ, ರಾಮಮೂರ್ತಿನಗರ, ಹೆಮ್ಮಿಗೆಪುರ, ಹೂಡಿ ಹಾಗೂ ಅರಕೆರೆ ವಾರ್ಡ್‌ಗಳಲ್ಲಿ 10 ದಿನಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

‘ಎರಡನೇ ಅಲೆಯಲ್ಲಿ ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಿ ಸೋಂಕು ನಿಯಂತ್ರಿಸಲಾಗುತ್ತಿದೆ. ರೋಗ ಹರಡುವುದನ್ನು ನಿಯಂತ್ರಿಸಲು ಸೋಂಕಿತರನ್ನು ಪ್ರತ್ಯೇಕಪಡಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಪಾಲಿಕೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ರೋಗ ನಿಯಂತ್ರಣಕ್ಕಾಗಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

‘ಬಿಬಿಎಂಪಿಯ ವೈದ್ಯರು ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳ ಮನೆಗೇ ಭೇಟಿ ನೀಡಿ ಚಿಕಿತ್ಸೆಯ ಅಗತ್ಯತೆ ನಿರ್ಧರಿಸಲು (ಟ್ರಯಾಜಿಂಗ್‌) ನೆರವಾಗುತ್ತಿದ್ದಾರೆ. ಪ್ರಸ್ತುತ ಕೋವಿಡ್‌ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಕಾಯ್ದಿರಿಸುವ ಹಾಸಿಗೆಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ರೋಗಿಗಳು ಈ ವಿಧಾನವ ಮೂಲಕವೇ ಹಾಸಿಗೆ ಪಡೆದಿದ್ದಾರೆ’ ಎಂದು ತಿಳಿಸಿದರು.  

‘ಮುಂಬರುವ ದಿನಗಳಲ್ಲಿ ಕೋವಿಡ್‌ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಮನೆ ಮನೆ ಭೇಟಿಗೆ ಹಾಗೂ ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯಗಳನ್ನು ಗುರುತಿಸಿ ಸೋಂಕು ಹರಡುವಿಕೆ ನಿಯಂತ್ರಿಸುವುದಕ್ಕೆ ಇನ್ನಷ್ಟು ಆದ್ಯತೆ ನೀಡಲಿದ್ದೇವೆ. ಜನ ದಟ್ಟಣೆ ಹೆಚ್ಚು ಇರುವ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷೆ  ಹೆಚ್ಚಿಸುತ್ತೇವೆ. ಆಸ್ಪತ್ರೆಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲಿದ್ದೇವೆ’ ಎಂದು ಅವರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು