ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3 ಸಾವಿರ ಕೋಟಿ ದಾಟಿತು ಬಿಬಿಎಂಪಿ ವಾರ್ಷಿಕ ವರಮಾನ

ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ದಾಖಲೆ ಆದಾಯ
Last Updated 14 ಏಪ್ರಿಲ್ 2021, 20:51 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ವಾರ್ಷಿಕ ವರಮಾನ ಮೊದಲ ಬಾರಿ ₹ 3 ಸಾವಿರ ಕೋಟಿ ದಾಟಿದೆ. ಒಂದೇ ಆರ್ಥಿಕ ವರ್ಷದಲ್ಲಿ ಪಾಲಿಕೆಗೆ ಇಷ್ಟೊಂದು ವರಮಾನ ಬಂದಿರುವುದು ಇದೇ ಮೊದಲು. ಕೋವಿಡ್‌ ಹರಡುವಿಕೆಯಿಂದ ಸೃಷ್ಟಿಯಾಗಿದ್ದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಇಷ್ಟೊಂದು ವರಮಾನ ಬಂದಿರುವುದು ವಿಶೇಷ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಬಿಬಿಎಂಪಿಯು 2020–21ನೇ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ, ಖಾತಾ ವರ್ಗಾವಣೆ, ಖಾತಾ ಪ್ರಮಾಣ ಪತ್ರ ನೀಡುವಿಕೆ ಹಾಗೂ ಸುಧಾರಣಾ ಶುಲ್ಕಗಳಿಂದ ಒಟ್ಟು ₹ 3001.06 ಕೋಟಿ ಸಂಗ್ರಹಿಸಿದೆ.

ಪಾಲಿಕೆಯಲ್ಲಿ 2019–20ನೇ ಸಾಲಿಗೆ ಹೋಲಿಸಿದರೆ, ಕಳೆದ ಆರ್ಥಿಕ ವರ್ಷದ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವೂ ₹ 97.57 ಕೋಟಿಗಳಷ್ಟು ಹೆಚ್ಚಿದೆ. ಆದರೆ, ಆಸ್ತಿ ತೆರಿಗೆಯ ಹಳೆ ಬಾಕಿ ಸಂಗ್ರಹದ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ₹2.02 ಕೋಟಿಗಳಷ್ಟು ಕಡಿಮೆ ಆಗಿದೆ. ಆಸ್ತಿ ತೆರಿಗೆಯಿಂದ ಬರುವ ಒಟ್ಟು ವರಮಾನದಲ್ಲಿ ₹108.54 ಕೋಟಿಗಳಷ್ಟು ಹೆಚ್ಚಳ ಕಂಡುಬಂದಿದೆ. 2019–20ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ಒಟ್ಟು ₹ 2747.06 ಕೋಟಿ ವರಮಾನ ಬಂದಿತ್ತು. ಅದು 2020–21ನೇ ಸಾಲಿನಲ್ಲಿ ₹ 2855.60 ಕೋಟಿಗೆ ಹೆಚ್ಚಿದೆ.

‘ನಗರದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಕಂಡುಬಂದಿದ್ದ ರಿಂದ ಹಾಗೂ ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ವ್ಯಾಪಾರ ವಹಿವಾಟುಗಳು ಕುಸಿ ದಿದ್ದರಿಂದ ಪಾಲಿಕೆಯ ವರಮಾನ ಇಳಿಕೆ ಆಗಬಹುದು ಎಂದು ನಿರೀಕ್ಷೆ ಮಾಡಿದ್ದೆವು. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ಆರ್ಥಿಕ ವರ್ಷ ದಲ್ಲಿ ₹ 100 ಕೋಟಿಗಳಷ್ಟು ವರಮಾನ ಹೆಚ್ಚಳವಾಗಿದೆ’ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಎಸ್‌. ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೇ ಆರ್ಥಿಕ ವರ್ಷದಲ್ಲಿ ₹ 3001 ಕೋಟಿ ವರಮಾನ ಬಂದಿ ರುವುದು ಇದೇ ಮೊದಲು. ವರಮಾನ ಹೆಚ್ಚಳದಲ್ಲಿ ಅಧಿಕಾರಿಗಳ ಶ್ರಮವೂ ಇದೆ. ಪ್ರತಿ ಬುಧವಾರ ತೆರಿಗೆ ಸಂಗ್ರಹ ಅಭಿಯಾನ ಕೈಗೊಳ್ಳುವ ಮೂಲಕ ಹಳೆ ಬಾಕಿ ವಸೂಲಿಗೂ ವಿಶೇಷ ಪ್ರಯತ್ನ ನಡೆಸಿದ್ದರು. ಜನರು ಸಕಾಲದಲ್ಲಿ ತೆರಿಗೆ ಪಾವತಿಸಿ ನಗರದ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ’ ಎಂದರು.

‘ಬಿಬಿಎಂಪಿ ಆಡಳಿತಾಧಿಕಾರಿ ಹಾಗೂ ಮುಖ್ಯ ಆಯುಕ್ತರ ಮಾರ್ಗದರ್ಶನದಲ್ಲಿ ಈ ಆರ್ಥಿಕ ವರ್ಷದಲ್ಲೂ ಪಾಲಿಕೆ ವರಮಾನ ಹೆಚ್ಚಿಸುವುದಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ
ಕೊಳ್ಳಲಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT