ಸೋಮವಾರ, ಮೇ 23, 2022
24 °C
3 ವರ್ಷದಲ್ಲಿ 4,696 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪೂರ್ಣ: ಬಿಬಿಎಂಪಿ

ಬೆಂಗಳೂರು: ₹6,768 ಕೋಟಿ ಸುರಿದರೂ ಗುಂಡಿ ಮುಕ್ತವಾಗಿಲ್ಲ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಿಗೆ 2018–2021ರ ನಡುವೆ ಮೂರು ವರ್ಷಗಳಲ್ಲಿ ಸರ್ಕಾರ ₹ 6,768 ಕೋಟಿ ಅನುದಾನ ಒದಗಿಸಿದೆ. ಇದರಲ್ಲಿ 7,011 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, 4,696 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಪೂರ್ಣಗೊಂಡಿದೆ ಎನ್ನುತ್ತದೆ ಬಿಬಿಎಂಪಿ.

ಇಷ್ಟಾಗಿಯೂ ಗುಂಡಿಗಳಿಲ್ಲದ ರಸ್ತೆಗಳನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ನಗರದಲ್ಲಿದೆ ಎಂದು ದೂರುತ್ತಾರೆ ಸಾರ್ವಜನಿಕರು.

ವಿಧಾನ ಪರಿಷತ್ತಿನ ಸದಸ್ಯ ಕೆ.ಗೋವಿಂದರಾಜ್‌ ಅವರ ಪ್ರಶ್ನೆಗೆ ಮುಖ್ಯಮಂತ್ರಿಯವರು ವಿವರವಾದ ಉತ್ತರ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಯ 4,761 ಕಾಮಗಾರಿಗಳನ್ನು ಮೂರು ವರ್ಷಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. 3,655 ಕಾಮಗಾರಿಗಳು ಪೂರ್ಣಗೊಂಡಿವೆ. ಈ ತಿಂಗಳ ಅಂತ್ಯಕ್ಕೆ 180 ಕಿ.ಮೀ ಉದ್ದದ ಮುಖ್ಯರಸ್ತೆ ಹಾಗೂ ಉಪಮುಖ್ಯ ರಸ್ತೆಗಳ ಡಾಂಬರೀಕರಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಆದರೆ, ವಾಸ್ತವ ಸ್ಥಿತಿ ಇದನ್ನು ಪುಷ್ಟೀಕರಿಸುವಂತಿಲ್ಲ.

ಸಾಕಷ್ಟು ಗಡುವುಗಳ ಬಳಿಕವೂ ಈಗಲೂ ನಗರದ ಅನೇಕ ಮುಖ್ಯ ರಸ್ತೆಗಳಲ್ಲೂ ಗುಂಡಿಗಳು ಹಾಗೆಯೇ ಇವೆ. ಉದಾಹರಣೆಗೆ ಮಹಾಕವಿ ಕುವೆಂಪು ರಸ್ತೆಯಲ್ಲಿ ಗುಂಡಿಗಳಿಗೆ ತೇಪೆ ಹಾಕುವ ಕಾರ್ಯ ಎರಡು ಬಾರಿ ನಡೆದಿದೆ. ಆ ಬಳಿಕವು ಈ ರಸ್ತೆ ಗುಂಡಿ ಮುಕ್ತವಾಗಿಲ್ಲ. ಮಲ್ಲೇಶ್ವರದಲ್ಲಿ, ವಯ್ಯಾಲಿಕಾವಲ್‌, ಗುಟ್ಟಹಳ್ಳಿ, ಜವರೇಗೌಡನಗರ, ಶ್ರೀನಗರ, ರಾಜರಾಜೇಶ್ವರಿನಗರ, ಕಾಳಿದಾಸ ಬಡಾವಣೆ, ಆರ್.ಆರ್‌.ನಗರ ಪ್ರದೇಶಗಳಲ್ಲಿ ರಸ್ತೆ ಇನ್ನೂ ಅಧ್ವಾನ ಸ್ಥಿತಿಯಲ್ಲಿವೆ.

ವೈಟ್‌ ಟಾಪಿಂಗ್‌ಗೆ ಜೂನ್‌ ಗಡುವು:

ಬಿಬಿಎಂಪಿ ಹೇಳುವ ಪ್ರಕಾರ, ಡಾಂಬರೀಕರಣಗೊಂಡ ರಸ್ತೆಗಳು ಐದು ವರ್ಷ ಹಾಗೂ ವೈಟ್‌ಟಾಪಿಂಗ್‌ ಮಾಡಲಾದ ರಸ್ತೆಗಳು 30 ವರ್ಷ ಬಾಳಿಕೆ ಬರುತ್ತವೆ. ನಗರದಲ್ಲಿ 144.72 ಕಿ.ಮೀ ಉದ್ದದ 69 ಆಯ್ದ ರಸ್ತೆಗಳನ್ನು ವೈಟ್‌ಟಾಪಿಂಗ್‌ ಮಾಡಲು ಕ್ರಮಕೈಗೊಳ್ಳಲಾಗಿದೆ. ಇದುವರೆಗೆ 98.97 ಕಿ.ಮೀ ಉದ್ದದ ರಸ್ತೆಗಳ ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಕಾಮಗಾರಿಗಳನ್ನು ಮುಂಬರುವ ಜೂನ್‌ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಉತ್ತರದಲ್ಲಿ ತಿಳಿಸಲಾಗಿದೆ. 

ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ 30.40 ಕಿ.ಮೀ ಉದ್ದದ ರಸ್ತೆಗಳನ್ನು ಟೆಂಡರ್ ಶ್ಯೂರ್‌ ಮಾದರಿಯಲ್ಲಿ ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, 26.87 ಕಿ.ಮೀ ಉದ್ದದ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ.

ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಕೊಳವೆ ಅಳವಡಿಸಲು ಅಗೆದ ರಸ್ತೆಗಳನ್ನು ₹ 1,000 ಕೋಟಿ ವಿನಿಯೋಗಿಸಲಾಗುತ್ತಿದೆ. ಒಟ್ಟು 875 ಕಿ.ಮೀ ಉದ್ದದ ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ರಸ್ತೆ ದುಃಸ್ಥಿತಿ: ಪಾಲಿಕೆ ಪಟ್ಟಿ ಮಾಡಿದ ಕಾರಣಗಳು

l ನಗರದಲ್ಲಿ ಹಿಂದೆ ಅ೦ದಿನ ಜನಸಂಖ್ಯೆ ಹಾಗೂ ವಾಹನ ಸಾಂದ್ರತೆಗೆ ಅನುಗುಣವಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ. ನಗರವು ವೇಗವಾಗಿ ಬೆಳವಣಿಗೆ ಹೊಂದಿದ ಬಳಿಕ ಅತಿ ಹೆಚ್ಚು ಜನ ಸಾಂದ್ರತೆ ಮತ್ತು ವಾಹನ ದಟ್ಟಣೆಯ ನಗರವಾಗಿ ಮಾರ್ಪಾಡಾಗಿದೆ.

l ಮುಖ್ಯ ರಸ್ತೆ ಮತ್ತು ಸಂಪರ್ಕ ರಸ್ತೆಗಳ ಅಗಲಕ್ಕೆ ಅನುಗುಣವಾಗಿ ಸಂಚರಿಸಬೇಕಾದ ವಾಹನಗಳ ಸಾಮರ್ಥ್ಯಕಿಂತ 4 ಪಟ್ಟು ಹೆಚ್ಚು ಸಾಂದ್ರತೆಯ ವಾಹನಗಳು ಸಂಚರಿಸುತ್ತಿವೆ.

l ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಕೆಲವೊಮ್ಮೆ ರಸ್ತೆಯ ಒ೦ದು ಪಾರ್ಶ್ವದಲ್ಲಿ ಮಾತ್ರ ಕಾಮಗಾರಿ ಕೈಗೊಳ್ಳಬೇಕಾಗುತ್ತದೆ.

l ಬಹುತೇಕ ರಸ್ತೆಗಳು ಕಿರಿದಾಗಿವೆ. ರಸ್ತೆಯನ್ನು ವಾಹನ ಸಂಚಾರಕ್ಕೆ ಮಾತ್ರ ಬಳಸದೇ, ಹಲವಾರು ಮೂಲಸೌಕರ್ಯ ಸೇವಾ ಸಂಸ್ಥೆಗಳು ಅನ್ಯ ಉದ್ದೇಶಗಳಿಗೂ ಇವುಗಳನ್ನು ಬಳಸುತ್ತಿವೆ.

l ಪ್ರಮುಖ ರಸ್ತೆಗಳನ್ನು ಕಾಲಕಾಲಕ್ಕೆ ಅವಶ್ಯಕತೆಗೆ ಅನುಗುಣವಾಗಿ ವಿಸ್ತರಿಸಿಲ್ಲ. ವಿವಿಧ ಇಲಾಖೆಗಳು ಅಳವಡಿಸಿದ್ದ ವಿವಿಧ ಸೌಕರ್ಯಗಳು ಶಿಥಿಲಗೊಳ್ಳುವುದರಿಂದಲೂ ರಸ್ತೆಗಳು ಆಗಾಗ ಹಾಳಾಗುತ್ತಿವೆ

l ಬೆಸ್ಕಾಂ, ಕೆಪಿಟಿಸಿಎಲ್‌ ಸಂಸ್ಥೆಗಳ ವಿದ್ಯುತ್‌ ಕೇಬಲ್‌, ವಿದ್ಯುತ್ ಕ೦ಬ, ವಿದ್ಯುತ್ ಪರಿವರ್ತಕಗಳನ್ನು ಹೊಸದಾಗಿ ಅಳವಡಿಸುವಾಗ ಮತ್ತು ಸ್ಥಳಾಂತರ ಮಾಡುವಾಗ ರಸ್ತೆ ಹದಗೆಡುತ್ತಿದೆ. 

l ಬೆ೦ಗಳೂರು ಜಲಮಂಡಳಿಯ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳನ್ನು ಅಳವಡಿಸುವಾಗ ಮತ್ತು ಸ್ಥಳಾಂತರ ಮಾಡುವಾಗ ರಸ್ತೆ ಹಾಳಾಗುತ್ತಿದೆ. 

l ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಹಾಗೂ ಇತರೆ ಕೇಬಲ್‌ ಅಥವಾ ಕೊಳವೆಗಳ ಳವಡಿಕೆ ಮತ್ತು ಸ್ಥಳಾಂತರದಿಂದ ರಸ್ತೆ ಹಾಳಾಗುತ್ತಿದೆ.

l 2021ರಲ್ಲಿ ಸತತವಾಗಿ ಸುರಿದ ಮಳೆಯಿಂದ ಮತ್ತು ಅಕಾಲಿಕ ಮಳೆಯಿಂದ ರಸ್ತೆ

l ಜಲಮಂಡಳಿಯು 110 ಹಳ್ಳಿಗಳ ಪ್ರದೇಶಗಳಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆ ಅಳವಡಿಸುತ್ತಿದ್ದು, ಇದಕ್ಕಾಗಿ ಹೊರ ವಲಯಗಳ ಬಹುತೇಕ ರಸ್ತೆಗಳನ್ನು ಕತ್ತರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು