ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಆಸ್ಪತ್ರೆ ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗೆ ಆದೇಶ

ಕೋವಿಡ್‌ ಚಿಕಿತ್ಸೆ: ಶೇ 50ರಷ್ಟು ಹಾಸಿಗೆ ಬಿಟ್ಟುಕೊಡದ ಆಸ್ಪತ್ರೆಗಳು
Last Updated 24 ಸೆಪ್ಟೆಂಬರ್ 2020, 22:24 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದ ಆದೇಶದ ಪ್ರಕಾರ ಒಟ್ಟು ಹಾಸಿಗೆಗಳಲ್ಲಿ ಶೇ 50ರಷ್ಟನ್ನು ಸರ್ಕಾರ ಸೂಚಿಸುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಿಟ್ಟುಕೊಡದ ನಾಲ್ಕು ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಆದೇಶ ಮಾಡಿದ್ದಾರೆ.

ಲ್ಯಾಂಗ್‌ಫೋರ್ಡ್ ಗಾರ್ಡನ್‌ನ ರಿಪಬ್ಲಿಕ್‌ ಆಸ್ಪತ್ರೆ, ಬನ್ನೇರುಘಟ್ಟ ರಸ್ತೆ ಬಳಿಯ ಫೋರ್ಟಿಸ್ ಆಸ್ಪತ್ರೆ, ಪದ್ಮನಾಭನಗರದ ಎನ್‌ಯು ಆಸ್ಪತ್ರೆ ಹಾಗೂ ಮಿಲ್ಲರ್ಸ್‌ ರಸ್ತೆ ಬಳಿಯ ವಿಕ್ರಂ ಆಸ್ಪತ್ರೆ ಶಿಸ್ತುಕ್ರಮ ಎದುರಿಸುತ್ತಿರುವ ಆಸ್ಪತ್ರೆಗಳು.

ಸರ್ಕಾರದ ಆದೇಶ ಪಾಲಿಸದ 36 ಆಸ್ಪತ್ರೆಗಳಿಗೆ ಬಿಬಿಎಂಪಿ ಆಯುಕ್ತರು ಇದೇ 16ರಂದು ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದರು.

‘ಹೆಚ್ಚಿನ ಆಸ್ಪತ್ರೆಗಳು ನೋಟಿಸ್‌ಗೆ ಪ್ರತಿಕ್ರಿಯಿಸಿದ್ದವು. ಕೆಲವು ಆಸ್ಪತ್ರೆಗಳು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಕೆಲವು ಆಸ್ಪತ್ರೆಗಳು ನೀಡಿದ ಉತ್ತರ ಸಮಾಧಾನಕರವಾಗಿರಲಿಲ್ಲ. ಅಂತಹ ಆಸ್ಪತ್ರೆಗಳ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆದೇಶ ಮಾಡಿದ್ದೇನೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ನಾವು ಅಡ್ಡಿಪಡಿಸುವುದಿಲ್ಲ. ಹಾಗಾಗಿ ಅವುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಯಾವುದೇ ತೊಂದರೆಯಾಗದು. ಆದರೆ, ಆಸ್ಪತ್ರೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ರಿಪಬ್ಲಿಕ್‌ ಆಸ್ಪತ್ರೆಯ ಆಡಳಿತ ನಿರ್ದೇಶನ ಮತ್ತು ವೈದ್ಯ ಡಾ.ಶಶಿಧರ್‌, ‘ನನಗೆ ಬಿಬಿಎಂಪಿಯಿಂದ ಯಾವುದೇ ಆದೇಶ ಬಂದಿಲ್ಲ’ ಎಂದರು.

ಪಾಲಿಕೆಯ ಆದೇಶದ ಪ್ರತಿಯನ್ನು ತೋರಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ‘ ಇದು ಅನವಶ್ಯಕವಾಗಿತ್ತು. ನಮ್ಮ ಆಸ್ಪತ್ರೆಯಲ್ಲಿರುವ 55 ಹಾಸಿಗೆಗಳಲ್ಲಿ 28 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಕಾಯ್ದಿರಿಸಿದ್ದೇವೆ. ಬಿಬಿಎಂಪಿಯು ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿತರನ್ನು ಕಳುಹಿಸಿಕೊಡುತ್ತಿಲ್ಲ. ಬಿಬಿಎಂಪಿಯು ಕಳುಹಿಸಿರುವ ಯಾವುದೇ ರೋಗಿಯನ್ನು ದಾಖಲಿಸಿಕೊಳ್ಳಲು ನಾವು ನಿರಾಕರಿಸಿಲ್ಲ.ಈ ಹಾಸಿಗೆಗಳು ಖಾಲಿ ಬಿದ್ದಿವೆ. ಹಾಗಾಗಿ ನಮಗೆ ಯಾವುದೇ ಪಾವತಿಯೂ ಬಂದಿಲ್ಲ. ನಮ್ಮಲ್ಲಿ ಸಿಬ್ಬಂದಿಯ ಕೊರತೆಯೂ ತೀವ್ರವಾಗಿದೆ’ ಎಂದು ಪರಿಸ್ಥಿತಿ ವಿವರಿಸಿದರು.

ಬಿಬಿಎಂಪಿಯಿಂದ ಯಾವುದೇ ನೋಟಿಸ್‌ ಬಂದಿಲ್ಲ ಎಂದು ವಿಕ್ರಂ ಆಸ್ಪತ್ರೆ ಹಾಗೂ ಫೋರ್ಟಿಸ್‌ ಆಸ್ಪತ್ರೆಗಳು ತಿಳಿಸಿವೆ.

ಪಾಲಿಕೆ ಆಯುಕ್ತರ ಆದೇಶದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಫೋರ್ಟಿಸ್‌ ಆಸ್ಪತ್ರೆ, ‘ಬನ್ನೇರುಘಟ್ಟ ರಸ್ತೆ ಬಳಿಯ ನಮ್ಮ ಆಸ್ಪತ್ರೆಯ ಘಟಕಕ್ಕೆ ಬಿಬಿಎಂಪಿ ಕಳುಹಿಸಿರುವ ಆದೇಶದ ಪ್ರತಿ ಇನ್ನೂ ಕೈಸೇರಿಲ್ಲ. ಆದೇಶದ ಪ್ರತಿ ಕೈಸೇರಿದ ಬಳಿಕ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇವೆ’ ಎಂದು ಹೇಳಿದೆ.

ಬಿಬಿಎಂಪಿ ಆದೇಶದ ಪ್ರಕಾರ ಬನ್ನೇರುಘಟ್ಟ ರಸ್ತೆ ಬಳಿಯ ಫೋರ್ಟಿಸ್‌ ಆಸ್ಪತ್ರೆಯು 90 ಹಾಸಿಗೆ, ವಿಕ್ರಂ ಆಸ್ಪತ್ರೆಯು 225 ಹಾಸಿಗೆ ಹಾಗೂ ಎನ್‌.ಯು.ಆಸ್ಪತ್ರೆಯು 170 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ.

ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಬಳಸುತ್ತಿರುವ ಒಟ್ಟು ಹಾಸಿಗೆಗಳಲ್ಲಿ ಶೇ 50ರಷ್ಟನ್ನು ತಾವು ಸೂಚಿಸುವ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಮೀಸಲಿಡಬೇಕು ಎಂದು ಸರ್ಕಾರ ಜೂ 23ರಂದು 2005ರ ವಿಕೋಪ ನಿರ್ವಹಣೆ ಕಾಯ್ದೆಯ ಸೆಕ್ಷನ್‌ 22ರ ಅನ್ವಯ ಆದೇಶ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT