ಗುರುವಾರ , ಅಕ್ಟೋಬರ್ 1, 2020
20 °C

ಎನ್‌ಎಚ್‌ಯುಎಂ ಗುತ್ತಿಗೆ ಸಿಬ್ಬಂದಿ ಸೇವೆ ವಿಲೀನ; ಬಿಬಿಎಂಪಿ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯ ಸಿಬ್ಬಂದಿ –ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಯುಎಂ) ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಕಿರಿಯ ಆರೋಗ್ಯ ಸಹಾಯಕಿ ಸಿಬ್ಬಂದಿಯ ಸೇವೆಯನ್ನು ಬಿಬಿಎಂಪಿಯಲ್ಲಿ ವಿಲೀನಗೊಳಿಸುವುದಕ್ಕೆ ಕೌನ್ಸಿಲ್‌ ಸಭೆ ಹಸಿರು ನಿಶಾನೆ ತೋರಿದೆ.

ಈ ಕುರಿತು ಕಾನೂನುಬದ್ಧತೆಯನ್ನು ಪರಿಶೀಲಿಸಿ ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಬಹುದು ಎಂದು ಸಭೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.

ಎನ್‌ಎಚ್‌ಯುಎಂ ಅಡಿ ಕೋವಿಡ್‌ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಅವರ ಹುದ್ದೆಗೆ ಅನುಗುಣವಾಗಿ ಕೋವಿಡ್‌ ಭತ್ಯೆ ನೀಡುವುದಕ್ಕೂ ಬಿಬಿಎಂಪಿ ಸಮ್ಮತಿಸಿದೆ.  

ಬಿಬಿಎಂಪಿ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧೀಕಾರಿಗಳಿಗೆ ತಿಂಗಳಿಗೆ ₹ 45 ಸಾವಿರ ಗೌರವಧನ ನೀಡಲಾಗುತ್ತಿದೆ. ಕೆಲವರು ಐದು ವರ್ಷಗಳಿಂದ ಬಿಬಿಎಂಪಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ಕರ್ತವ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ವೈದ್ಯರಿಗೆ ಪಾಲಿಕೆ ತಿಂಗಳಿಗೆ ₹ 80 ಸಾವಿರ ಗೌರವಧನ ನೀಡುತ್ತಿದೆ.

ತಮ್ಮ ಸೇವೆ ಕಾಯಂಗೊಳಿಸುವಂತೆ ಕೋರಿ ಎನ್‌ಎಚ್‌ಯುಎಂ ನೌಕರರ ಸಂಘದವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮೇಯರ್‌ ಎಂ.ಗೌತಮ್‌ ಕುಮಾರ್‌ ಹಾಗೂ ಬಿಬಿಎಂಪಿ ಆಯುಕ್ತರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಗೌರವಧನ ಪಾವತಿ ವಿಚಾರದಲ್ಲಿ ತಮಗೆ ಹಾಗೂ ಪಾಲಿಕೆಯು ಕೋವಿಡ್‌ ನಿಯಂತ್ರಣದ ಸಲುವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನಡುವಿನ ವ್ಯತ್ಯಾಸ ನೀಗಿಸುವಂತೆಯೂ ಮನವಿ ಮಾಡಿದ್ದರು.

‘ನಗರದ ಬಹುತೇಕ ಫಿವರ್‌ ಕ್ಲಿನಿಕ್‌ಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ವಹಿಸುತ್ತಿರುವವರು ಗುತ್ತಿಗೆ ಆಧಾರದಲ್ಲಿ ನೇಮಕವಾದ ವೈದ್ಯರೇ. ಅನೇಕ ವೈದ್ಯರು ಎಂ.ಡಿ ಪದವಿಯನ್ನೂ ಪಡೆದಿದ್ದಾರೆ. ಕೋವಿಡ್‌ ನಿಯಂತ್ರಣದಲ್ಲಿ ಅಪಾಯ ಲೆಕ್ಕಿಸದೇ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದೇವೆ. ನಮಗೂ ಸೇವಾ ಭದ್ರತೆ ಅಗತ್ಯವಿದೆ. ನಮ್ಮ ಸೇವೆಯನ್ನು ವಿಲೀನಗೊಳಿಸುವುದಕ್ಕೆ ಬಿಬಿಎಂಪಿ ಕೌನ್ಸಿಲ್‌ ಸಭೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ’ ಎಂದು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ ಅಂಶ

44

ಎನ್‌ಎಚ್‌ಯುಎಂ ಅಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳು

87

ಫಾರ್ಮಸಿಸ್ಟ್‌ಗಳು

138

ಶುಶ್ರೂಷಕಿಯರು

92

ಪ್ರಯೋಗಾಲಯ ತಂತ್ರಜ್ಞರು

167

ಕಿರಿಯ ಆರೋಗ್ಯ ಸಹಾಯಕಿಯರು

ಮಾಗಡಿ ರಸ್ತೆ ಮೆಟ್ರೊ ನಿಲ್ದಾಣಕ್ಕೆ ರಾಜ್‌ಕುಮಾರ್‌ ಹೆಸರು

ಮಾಗಡಿ ರಸ್ತೆ ಮೆಟ್ರೊ ರೈಲು ನಿಲ್ದಾಣಕ್ಕೆ ‘ಡಾ.ರಾಜ್‌ಕುಮಾರ್‌ ಮೆಟ್ರೊ ನಿಲ್ದಾಣ’ ಎಂದು ಹೆಸರು ಇಡಲು ಹಾಗೂ ಕುಮಾರಸ್ವಾಮಿ ಬಡಾವಣೆಯಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣದ ಶಟಲ್‌ ಕೋರ್ಟ್‌ಗೆ ‘ಅನಂತ್‌ ಕುಮಾರ್‌ ಒಳಾಂಗಣ ಕ್ರೀಡಾಂಗಣ’ ಎಂದು ಹೆಸರು ಇಡಲು ಬಿಬಿಎಂಪಿ ತೀರ್ಮಾನಿಸಿದೆ. 

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅರಮನೆ ನಗರ ವಾರ್ಡ್‌ನ ಮಾರಮ್ಮನ ವೃತ್ತದ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಸ್ಥಾಪಿಸಲು, ಮತ್ತಿಕೆರೆ ವಾರ್ಡ್‌ನ ದಿವಾನರ ಪಾಳ್ಯದಲ್ಲಿರುವ ಅಟಲ್‌ಜಿ ಉದ್ಯಾನದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರತಿಮೆ ಸ್ಥಾಪಿಸಲು ಬಿಬಿಎಂಪಿ ನಿರ್ಣಯ ಕೈಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು