ಶುಕ್ರವಾರ, ಮಾರ್ಚ್ 24, 2023
30 °C

₹600 ಕೋಟಿ ಸಾಲಕ್ಕೆ ಬಿಬಿಎಂಪಿ ನಿರ್ಧಾರ: ಗುತ್ತಿಗೆದಾರರ ಹಣ ಪಾವತಿಗೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹುಂಡಿ ವ್ಯವಸ್ಥೆ’ಯಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡಲು ಬಿಬಿಎಂಪಿ ₹600 ಕೋಟಿ ಸಾಲ ಪಡೆಯಲು ನಿರ್ಧರಿಸಿದ್ದು, ಸರ್ಕಾರದಿಂದ ಆದೇಶ ಬಂದ ಕೂಡಲೇ ಪ್ರಕ್ರಿಯೆ ಆರಂಭಿಸುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

‘24 ತಿಂಗಳಿಗಿಂತ ಹೆಚ್ಚು ಬಿಲ್‌ ಬಾಕಿ ಇರಿಸಿಕೊಳ್ಳಬಾರದು ಎಂದು ನಾವು ನಿರ್ಧರಿಸಿದ್ದೇವೆ. ಹೀಗಾಗಿ ‘ಹುಂಡಿ ವ್ಯವಸ್ಥೆ’ ಜಾರಿ ಮಾಡಲು ಹಣಕಾಸು ಇಲಾಖೆಗೆ ಮನವಿ ಮಾಡಿದ್ದೆವು. ಅವರು ಒಪ್ಪಿಗೆ ನೀಡಿದ್ದು, ಮುಖ್ಯಮಂತ್ರಿಯವರ ಸಮ್ಮತಿಗೆ ಕಾಯಲಾಗುತ್ತಿದೆ’ ಎಂದು ಸುದ್ದಿಗಾರರಿಗೆ ಗುರುವಾರ ವಿವರ ನೀಡಿದರು.

‘ಈಗ ಬಾಕಿ ಇರುವ ₹200 ಕೋಟಿ ಹಾಗೂ ಮುಂದಿನ ಮಾರ್ಚ್‌ವರೆಗೆ ಬಿಲ್‌ ಪಾವತಿ ಮಾಡಬೇಕಾದರೆ ಸುಮಾರು ₹600 ಕೋಟಿ ಅಗತ್ಯ. 6 ತಿಂಗಳ ಒಳಗೆ ಏನೇನು ಬಿಲ್‌ ಬರುತ್ತೋ ಅದನ್ನು ಬ್ಯಾಂಕ್‌ನವರು ಕೊಡುತ್ತಾ ಹೋಗುತ್ತಾರೆ. ಹಣ ಬೇಗ ಬೇಕು ಎನ್ನುವ ಗುತ್ತಿಗೆದಾರರು ಬಡ್ಡಿ ಪಾವತಿಸಬೇಕು’ ಎಂದರು.

‘ಮುಖ್ಯಮಂತ್ರಿಯವರಿಂದ ಸಮ್ಮತಿ ಬಂದಮೇಲೆ ಯಾವ ಬ್ಯಾಂಕ್‌ ಕಡಿಮೆ ಬಡ್ಡಿಯಲ್ಲಿ ಹಣ ನೀಡುತ್ತದೋ ಅವರಿಗೆ ಈ ವ್ಯವಸ್ಥೆ ವಹಿಸಲಾಗುತ್ತದೆ. ಇದಕ್ಕಾಗಿ ಟೆಂಡರ್‌ ಕರೆಯಲಾಗುತ್ತದೆ. ಬಿಬಿಎಂಪಿ ಎಸ್ಕ್ರೊ ಖಾತೆಯನ್ನು ತೆರೆದು ಬಿಲ್‌ ಪಾವತಿಯ ವ್ಯವಸ್ಥೆ ಮಾಡುತ್ತದೆ’ ಎಂದು ಹೇಳಿದರು.

ಹಣ ಬಿಡುಗಡೆಗೆ ಒತ್ತಾಯ: ‘ಬಿಲ್‌ ಬಾಕಿಯನ್ನು ಕೂಡಲೇ ಪಾವತಿಸುವಂತೆ ನಿರ್ದೇಶಿಸಬೇಕು’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಅವರಲ್ಲಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಅವರೊಂದಿಗೆ ಪದಾಧಿಕಾರಿಗಳು ಗುರುವಾರ ಮನವಿ ಮಾಡಿಕೊಂಡರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಷಯವನ್ನು ವಿವರಿಸಲಾಗುತ್ತದೆ ಎಂದು ಮಂಜುನಾಥ್‌ ಪ್ರಸಾದ್‌ ಭರವಸೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರನ್ನೂ ನಾವು ಭೇಟಿ ಮಾಡುತ್ತೇವೆ’ ಎಂದು ಸಂಘದ ಕಾರ್ಯಾಧ್ಯಕ್ಷ ರವೀಂದ್ರ ಹಾಗೂ ಪ್ರಧಾನ ಕಾರ್ಯದರ್ಶಿ ನಂದಕುಮಾರ್‌ ತಿಳಿಸಿದರು.

ಆಸ್ತಿ ತೆರಿಗೆ ಸಂಗ್ರಹ ಹೆಚ್ಚಿಸಲು ಸೂಚನೆ
ಬೆಂಗಳೂರು:
ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಸ್ವಾಧೀನಾನುಭವ ಪತ್ರ (ಒಸಿ) ಪಡೆದಿರುವ ಸ್ವತ್ತುಗಳಿಂದ ನಿಗದಿತ ಆಸ್ತಿ ತೆರಿಗೆ ಸಂಗ್ರಹಿಸಲು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಆಸ್ತಿ ತೆರಿಗೆ ಸಂಗ್ರಹಿಸುವ ಬಗ್ಗೆ ವರ್ಚ್ಯುಯಲ್‌ ಸಭೆಯಲ್ಲಿ ಮಾತನಾಡಿ, ಎಲ್ಲಾ 8 ವಲಯಗಳಲ್ಲೂ ಅತಿಹೆಚ್ಚು ಬಾಕಿ ಉಳಿಸಿಕೊಂಡಿರುವ 10 ಮಾಲೀಕರಿಂದ ತ್ವರಿತವಾಗಿ ಆಸ್ತಿ ತೆರಿಗೆ ಸಂಗ್ರಹಿಸಲು ಹೇಳಿದರು.

ಆಯಾ ವಲಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದ ವಾರದ ಗುರಿಯನ್ನು ಕಂದಾಯ ಅಧಿಕಾರಿಗಳು ತಲುಪಬೇಕು. ಆಯಾ ವಲಯ ಆಯುಕ್ತರು ಪ್ರತಿನಿತ್ಯ ಪರಿಶೀಲನಾ ಸಭೆ ನಡೆಸಬೇಕು ಎಂದರು.

‌ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕಂದಾಯ ಅಧಿಕಾರಿ ಹಾಗೂ ಸಹಾಯ ಕಂದಾಯ ಅಧಿಕಾರಿಗಳಿಗೆ ವಾರದ ಗುರಿ ನೀಡಿ ಆಸ್ತಿ ತೆರಿಗೆ ಸಂಗ್ರಹಿಸಬೇಕು. ಈ ಪೈಕಿ ಪ್ರತಿ ವಾರವೂ ಆಸ್ತಿ ತೆರಿಗೆ ಸಂಗ್ರಹಿಸಿರುವ ಬಗ್ಗೆ ಪರಿಶೀಲನಾ ಸಭೆ ನಡೆಸಬೇಕೆಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.

₹2,757 ಕೋಟಿ ಸಂಗ್ರಹ:‌ ಪ್ರಸಕ್ತ ಸಾಲಿನಲ್ಲಿ ₹4,189.78 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಜ.11ರವರೆಗೆ ₹2,766.55 ಕೋಟಿ (ಶೇ 66.03ರಷ್ಟು) ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಂದಾಯ ವಿಭಾಗದ ವಿಶೇಷ ಆಯುಕ್ತ ಡಾ. ಆರ್.ಎಲ್. ದೀಪಕ್, ವಲಯ ಆಯುಕ್ತರಾದ ಡಾ. ಹರೀಶ್ ಕುಮಾರ್, ರೆಡ್ಡಿ ಶಂಕರ ಬಾಬು, ಪಿ.ಎನ್.ರವೀಂದ್ರ, ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತರು, ಕಂದಾಯ ವಿಭಾಗದ ಉಪ ಆಯುಕ್ತರು, ಕಂದಾಯ ವಿಭಾಗದ ಜಂಟಿ ಆಯುಕ್ತರು, ಎಲ್ಲಾ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು