ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಖಾಲಿ ನಿವೇಶನ ಸ್ವಚ್ಛತೆಗೆ ಏಳು ದಿನ ಗಡುವು ನೀಡಿದ ಬಿಬಿಎಂಪಿ

ಬಿಬಿಎಂಪಿ ಸ್ವಚ್ಛ ಮಾಡಿದರೆ ಶುಲ್ಕ, ದಂಡದ ಹಣ ಆಸ್ತಿ ತೆರಿಗೆಗೆ ಸೇರ್ಪಡೆ
Published 7 ಆಗಸ್ಟ್ 2024, 15:39 IST
Last Updated 7 ಆಗಸ್ಟ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ ಖಾಲಿ ನಿವೇಶನಗಳ ಸ್ವಚ್ಛತೆಗೆ ಏಳು ದಿನಗಳ ಗಡುವು ನೀಡಲಾಗಿದ್ದು, ತದನಂತರ ತೆರವು ಶುಲ್ಕ, ದಂಡ ವಿಧಿಸಲು ಬಿಬಿಎಂಪಿ ಆದೇಶ ಹೊರಡಿಸಿದೆ.

ಖಾಲಿ ನಿವೇಶನಗಳಲ್ಲಿರುವ ತ್ಯಾಜ್ಯ, ಗಿಡ–ಗಂಟಿಗಳನ್ನು ತೆರವು ಮಾಡಲು ಮಾಲೀಕರಿಗೆ ಒಂದು ವಾರದ ಗಡುವು ನೀಡಿ ನೋಟಿಸ್‌ ಜಾರಿ ಮಾಡಲಾಗುತ್ತದೆ. ತದನಂತರ, ಪಾಲಿಕೆ ವತಿಯಿಂದಲೇ ತೆರವು ಕಾರ್ಯಾಚರಣೆ ಮಾಡಿ, ಅದಕ್ಕೆ ತಗಲುವ ವೆಚ್ಚ ಹಾಗೂ ದಂಡವನ್ನು ಮಾಲೀಕರ ಆಸ್ತಿ ತೆರಿಗೆಯಲ್ಲಿ ನಮೂದಿಸಿ ಸಂಗ್ರಹಿಸಲು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶ ಹೊರಡಿಸಿದ್ದಾರೆ.

ಖಾಲಿ ನಿವೇಶನಗಳಿಂದ ತ್ಯಾಜ್ಯ ವಿಲೇವಾರಿಗಾಗಿ, ಮಾಲೀಕರಿಂದ ಆಸ್ತಿ ತೆರಿಗೆ ಭಾಗವಾಗಿ ದಂಡ ಮತ್ತು ವಿಲೇವಾರಿಗೆ ತಗುಲಿದ ವೆಚ್ಚ ಸಂಗ್ರಹಿಸಲು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016, ಘನತ್ಯಾಜ್ಯ ನಿರ್ವಹಣೆ ಬೈ-ಲಾ 2020 ಮತ್ತು ಬಿಬಿಎಂಪಿ ಕಾಯ್ದೆ 2020ರ ಅಡಿಯಲ್ಲಿ ಹೊಸ ಆದೇಶ ಹೊರಡಿಸಲಾಗಿದೆ.

ಆದೇಶದಂತೆ ವಲಯ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳು ಇಂತಿವೆ:

*ಖಾಲಿ ನಿವೇಶನಗಳು ಹಾಗೂ ಘನತ್ಯಾಜ್ಯ/ ಕಟ್ಟಡ ಮತ್ತು ಭಗ್ನಾವಶೇಷ (ಸಿ ಆ್ಯಂಡ್‌ ಡಿ) ತ್ಯಾಜ್ಯ ಸುರಿದಿರುವ ಪ್ರದೇಶಗಳನ್ನು ಪಟ್ಟಿ ಮಾಡಬೇಕು. ಅಹಿತಕರ ಅಥವಾ ಅನಾರೋಗ್ಯಕರ ಸ್ಥಿತಿ, ಹಾನಿಕಾರಕ ಸಸ್ಯವರ್ಗ, ಮರಗಳು ಅಥವಾ ಗಿಡಗಂಟಿಗಳಿರುವ ಸಾರ್ವಜನಿಕ ಸ್ಥಳಗಳು ಅಥವಾ ನೆರೆಹೊರೆಯವರಿಗೆ ತೊಂದರೆಯನ್ನುಂಟು ಮಾಡುವ ಸ್ಥಳಗಳನ್ನು ಗುರುತಿಸಬೇಕು.

*ನಿರ್ದಿಷ್ಟ ನಿಯಮಗಳ ಉಲ್ಲಂಘನೆಗೆ ಘನತ್ಯಾಜ್ಯ ನಿರ್ವಹಣಾ ಬೈ-ಲಾ ಶ್ಯೆಡೂಲ್-7ಕ್ಕೆ ಅನುಗುಣವಾಗಿ ದಂಡ ವಿಧಿಸಬೇಕು.

*ಖಾಲಿ ನಿವೇಶನದಲ್ಲಿನ ತ್ಯಾಜ್ಯವನ್ನು ತೆಗೆದುಹಾಕಲು ಅಥವಾ ತೆರವುಗೊಳಿಸಲು ಏಳು ದಿನಗಳ ನಿರ್ದಿಷ್ಟ ಅವಧಿಯೊಂದಿಗೆ ಸೂಚನೆ ನೀಡಬೇಕು.

*ವ್ಯಕ್ತಿ/ ಮಾಲೀಕರು ನಿರ್ದೇಶನಗಳನ್ನು ಪಾಲಿಸಲು ವಿಫಲರಾದರೆ, ನಂತರ ಪಾಲಿಕೆಯಿಂದ ಸ್ಥಳದಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಬೇಕು. ಅದರ ವೆಚ್ಚ ಮತ್ತು ದಂಡವನ್ನು ಪಾವತಿಸಲು ಆಸ್ತಿ ತೆರಿಗೆಯ ಬೇಡಿಕೆ ಸೂಚನೆಯಲ್ಲಿ ಪ್ರತ್ಯೇಕ ಕೋಷ್ಠಕದಲ್ಲಿ ನಮೂದಿಸಿ ಏಳು ದಿನಗಳೊಳಗೆ ಆಸ್ತಿ ಮಾಲೀಕರಿಗೆ ನೀಡಬೇಕು.

*ದಂಡ ಮತ್ತು ವೆಚ್ಚವನ್ನು ಆಸ್ತಿ ತೆರಿಗೆಯ ಪುಸ್ತಕಗಳಲ್ಲಿ ನಮೂದಿಸಬೇಕು. ಆಸ್ತಿ ತೆರಿಗೆ ಸಂಗ್ರಹಣೆಯೊಂದಿಗೆ ಬಾಕಿ ಮೊತ್ತ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿ, ಸಂಗ್ರಹಿಸಬೇಕು.

* ನಿಗದಿತ ಅವಧಿಯಲ್ಲಿ ಪಾವತಿಸಲು ವಿಫಲವಾದಲ್ಲಿ ವಲಯ ಆಯುಕ್ತರು ಅನ್ವಯಿತ ಬಡ್ಡಿಯನ್ನೂ ವಿಧಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT