ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಒಂದು ಲಕ್ಷ ಆಸ್ತಿಗೆ ‘ಎ’ ಖಾತೆ ರದ್ದು!

ಬಿಬಿಎಂಪಿ: ನಿಯಮ ಮೀರಿ ನೋಂದಣಿ; ಅಕ್ರಮಕ್ಕೆ ಶಿಕ್ಷೆ
Last Updated 8 ಮಾರ್ಚ್ 2023, 20:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಹತೆ ಇಲ್ಲದಿದ್ದರೂ ‘ಎ’ ಖಾತೆ ನೀಡಿರುವುದು ‘ಪರಿಶೀಲನಾ ಸಮಿತಿಯ’ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, 243 ವಾರ್ಡ್‌ಗಳಲ್ಲಿ ಸುಮಾರು ಒಂದು ಲಕ್ಷ ‘ಎ’ ಖಾತೆಗಳು ಅಕ್ರಮವಾಗಿ ನೋಂದಣಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ಅಕ್ರಮವಾಗಿ ‘ಎ’ ಖಾತೆಗಳನ್ನು ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಲ್ಲ ಖಾತೆಗಳನ್ನು ಪರಿಶೀಲಿಸಲು ‘ಪರಿಶೀಲನಾ ಸಮಿತಿ’ ರಚಿಸಿದ್ದಾರೆ. ಈ ಸಮಿತಿಯ ಆರಂಭಿಕ ತನಿಖೆಯಲ್ಲೇ ಸಾವಿರಾರು ಅಕ್ರಮಗಳು ಪತ್ತೆಯಾಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಯೊಂದಕ್ಕೆ ಖಾತೆ ನೀಡಬೇಕೆಂದರೆ ಅಭಿವೃದ್ಧಿ ಶುಲ್ಕ ಸೇರಿದಂತೆ ಕೆಲವು ಶುಲ್ಕ, ದಾಖಲೆಗಳನ್ನು ನೀಡಬೇಕು. ಆದರೆ ಇದ್ಯಾವುದನ್ನೂ ಪರಿಗಣಿಸದೆ ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಆಸ್ತಿಯ ಮಾಹಿತಿಯನ್ನು ‘ಎ’ ವಹಿಯಲ್ಲಿ (ರಿಜಿಸ್ಟರ್‌) ನಮೂದಿಸಿದ್ದಾರೆ. ಆದರೆ ಶುಲ್ಕಗಳು ಪಾಲಿಕೆಗೆ ಸಂದಾಯವಾಗಿಲ್ಲ.

ಹೊಸ ಆಸ್ತಿಗಳನ್ನು ರಿಜಿಸ್ಟರ್‌ನಲ್ಲಿ ಹಿಂದೆ ನಮೂದಾಗಿರುವ ಆಸ್ತಿಗಳ ಮಧ್ಯೆ ಉಪ–ಸಂಖ್ಯೆಯಾಗಿ ನಮೂದಿಸಿ ‘ಎ’ ಖಾತೆ ನೀಡಿರುವುದು ಗೊತ್ತಾಗಿದೆ. ಉದಾಹರಣೆಗೆ, 31 ಮತ್ತು 32 ಸಂಖ್ಯೆಯಲ್ಲಿ ಬೇರೆ ಆಸ್ತಿಗಳ ಖಾತೆ ನಮೂದಾಗಿದ್ದರೆ, ಅದರ ಮಧ್ಯೆ 31/1 ಎಂದು ಹೊಸದಾಗಿ ಖಾತೆಯನ್ನು ಮಾಡಿಕೊಡಲಾಗಿದೆ. ಹಳೆಯ ನೋಂದಣಿ ಎಂದು ಸುಮ್ಮನಾಗುತ್ತಾರೆ ಎಂಬ ಉದ್ದೇಶ ಇದರಲ್ಲಿದೆ. ರಿಜಿಸ್ಟರ್‌ನ ಒಂದು ಪುಟದಲ್ಲಿ 3 ಅಥವಾ 4 ಆಸ್ತಿಯ ಮಾಹಿತಿಯನ್ನಷ್ಟೇ ದಾಖಲಿಸಲಾಗುತ್ತದೆ. ಆದರೆ, ಕೆಲವು ಪುಟಗಳಲ್ಲಿ ನಡುವಿರುವ ಸ್ಥಳವನ್ನು ಉಪಯೋಗಿಸಿಕೊಂಡು ಉಪ–ಸಂಖ್ಯೆಯಾಗಿ ಬೇರೆ ಆಸ್ತಿಯನ್ನು ನಮೂದಿಸಲಾಗಿದೆ.

ಕೆಲವು ‘ಎ’ ರಿಜಿಸ್ಟರ್‌ನಲ್ಲಿ ಮಾಲೀಕರ ಹೆಸರು, ಖಾತೆ ಸಂಖ್ಯೆ ಮಾತ್ರ ನಮೂದಾಗಿದ್ದು, ಷರಾ ಸೇರಿದಂತೆ ಯಾವುದೇ ರೀತಿಯ ಆದೇಶವನ್ನೂ ನೀಡಲಾಗಿಲ್ಲ. ಇನ್ನು, ಒಂದೇ ರಿಜಿಸ್ಟರ್‌ನ ಹಲವು ಪುಟಗಳಲ್ಲಿ ವ್ಯಕ್ತಿಯೊಬ್ಬರ ಹೆಸರನ್ನು ನಮೂದಿಸಿ, ‘ಎ’ ಖಾತೆ ನೀಡಲಾಗಿದೆ. ಇವೆಲ್ಲವೂ ಉಪ–ಸಂಖ್ಯೆಯನ್ನೇ ಹೊಂದಿವೆ. ರಿಜಿಸ್ಟರ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದರೆ ಮತ್ತಷ್ಟು ಅಕ್ರಮ ಹೊರಬರುತ್ತವೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ‘ಎ’ ಖಾತೆ ರದ್ದು: ‘ಎ’ ಖಾತೆಗಳ ಅಕ್ರಮವನ್ನು ಪರಿಶೀಲಿಸಲಾಗುತ್ತಿದೆ. ಭೂಪರಿವರ್ತನೆ ಹಾಗೂ ಅಭಿವೃದ್ಧಿ ಶುಲ್ಕ ಸೇರಿದಂತೆ ನಮ್ಮ ನಿಯಮಾವಳಿಗಳಂತೆ ಯಾವುದೇ ದಾಖಲೆ ಇಲ್ಲದಿದ್ದರೆ, ಅಂತಹ ಆಸ್ತಿಯ ‘ಎ’ ಖಾತೆಯನ್ನು ರದ್ದುಪಡಿಸಲಾಗುತ್ತದೆ’ ಎಂದು ‘ಪರಿಶೀಲನಾ ಸಮಿತಿಯ’ ಅಧ್ಯಕ್ಷ ಜಯರಾಂ ರಾಯಪುರ ಹೇಳಿಸಿದರು.

‘ಇನ್ನು 15 ದಿನದಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಪೂರ್ಣಗೊಳಿಸಲಾಗುತ್ತದೆ. ನಂತರ ಎಷ್ಟು ಅಕ್ರಮ ಖಾತೆಗಳಿವೆ ಎಂಬುದನ್ನು ಬಹಿರಂಗಪಡಿಸಲಾಗುತ್ತದೆ’ ಎಂದು ಅವರು ಹೇಳಿದರು.

ಅಂಜನಾಪುರ ವಿಭಾಗದಲ್ಲೇ 800 ಅಕ್ರಮ!
ಬಿಬಿಎಂಪಿಯ ಬೊಮ್ಮನಹಳ್ಳಿ ವಲಯದ ಅಂಜನಾಪುರ ಉಪ–ವಿಭಾಗ ಕಡಿಮೆ ಆಸ್ತಿಗಳ ವ್ಯಾಪ್ತಿ ಒಳಗೊಂಡಿದೆ. ಇಲ್ಲಿರುವ ಎರಡು ವಾರ್ಡ್‌ಗಳಲ್ಲೇ 800ಕ್ಕೂ ಹೆಚ್ಚು ಖಾತೆಗಳು ‘ಎ’ ರಿಜಿಸ್ಟರ್‌ನಲ್ಲಿ ಅಕ್ರಮವಾಗಿ ನೋಂದಣಿಯಾಗಿರುವುದು ‘ಪರಿಶೀಲನಾ ಸಮಿತಿಯ’ ಪ್ರಾಥಮಿಕ ತನಿಖೆಯಿಂದಲೇ ಹೊರಬಂದಿದೆ. ಅವುಗಳನ್ನೆಲ್ಲ ಬಿಬಿಎಂಪಿ ಸಮಿತಿ ವಶಪಡಿಸಿಕೊಂಡು ಪರಿಶೀಲಿಸುತ್ತಿದೆ. ಈ ಮೊದಲು ಹೊಸ ಐದು ವಲಯಗಳಲ್ಲಿ ಮಾತ್ರ ಅಕ್ರಮವಾಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಎಲ್ಲೆಡೆ ದೂರುಗಳಿರುವುದರಿಂದ ಎಲ್ಲ 243 ವಾರ್ಡ್‌ಗಳಲ್ಲೂ ತಪಾಸಣೆ ನಡೆಸಲು ಸಮಿತಿ ನಿರ್ಧರಿಸಿದೆ.

ಒಂದು ವಾರ ಗಡುವು: ಜಯರಾಂ ರಾಯಪುರ
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ‘ಎ’ ಖಾತೆ ನೀಡಿರುವ ಮಾಹಿತಿಯನ್ನು ಎಲ್ಲ ವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಒಂದು ವಾರದಲ್ಲಿ ನೀಡಬೇಕು. ಅವರಲ್ಲಿ ಎಲ್ಲ ರೀತಿಯ ಮಾಹಿತಿ ಇರುತ್ತದೆ. ಇವರು ಮಾಹಿತಿ ನೀಡದಿದ್ದರೆ ಸಮಿತಿ ವತಿಯಿಂದ ತನಿಖೆ ನಡೆಸಿದಾಗ ಅಕ್ರಮ ಕಂಡುಬಂದರೆ ಆಯಾ ಎಆರ್‌ಒಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ‘ಪರಿಶೀಲನಾ ಸಮಿತಿಯ’ ಅಧ್ಯಕ್ಷರಾಗಿರುವ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ‘ಎ’ ಖಾತೆ ನೀಡಿರುವ ಮಾಹಿತಿಯನ್ನು ಎಲ್ಲ ವಿಭಾಗಗಳ ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಒಂದು ವಾರದಲ್ಲಿ ನೀಡಬೇಕು. ಅವರಲ್ಲಿ ಎಲ್ಲ ರೀತಿಯ ಮಾಹಿತಿ ಇರುತ್ತದೆ. ಇವರು ಮಾಹಿತಿ ನೀಡದಿದ್ದರೆ ಸಮಿತಿ ವತಿಯಿಂದ ತನಿಖೆ ನಡೆಸಿದಾಗ ಅಕ್ರಮ ಕಂಡುಬಂದರೆ ಆಯಾ ಎಆರ್‌ಒಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ‘ಪರಿಶೀಲನಾ ಸಮಿತಿಯ’ ಅಧ್ಯಕ್ಷರಾಗಿರುವ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT