ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮುಂಗಾರಿಗೆ ವಿದೇಶಿ ಬದಲು ದೇಶಿ ತಳಿ ಸಸಿ

ನೆಡಲು ಸಿದ್ಧ 10 ಲಕ್ಷ ಸಸಿ * ಮಳೆಗಾಲದ ಅವಘಡಗಳಿಗೆ ಶಾಶ್ವತ ಪರಿಹಾರ* ಬಿಬಿಎಂಪಿ ಹೊಸ ಪ್ರಯೋಗ
Last Updated 9 ಜೂನ್ 2020, 10:47 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ಮುಂಗಾರು ಋತುವಿನಲ್ಲಿ ಬೀಸುವ ಭಾರಿ ಗಾಳಿ ಮತ್ತು ಸುರಿಯುವ ಮಳೆಗೆ ಬೇರು ಸಮೇತ ಉರುಳುವ‌ ಗಿಡ, ಮರ ಮತ್ತು ಅನಾಹುತಗಳಿಗೆ ಲೆಕ್ಕವಿಲ್ಲ.

ಮಳೆಗಾಲದಲ್ಲಿ ಮರಗಳು ಬಿದ್ದು ಸಂಭವಿಸುವ ಅನಾಹುತಗಳಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸ ಮಾರ್ಗ ಹುಡುಕಿದೆ.

ನಗರದ ರಸ್ತೆಯ ಇಕ್ಕೆಲಗಳಲ್ಲಿ ವಿದೇಶಿ ಮರಗಳ ಬದಲು ದೇಶಿ ತಳಿಯ ಸಸ್ಯಗಳನ್ನು ಬೆಳೆಸಲು ಮುಂದಾಗಿದೆ. ಈ ಮಳೆಗಾಲದಲ್ಲಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಇಂಥ 10 ಲಕ್ಷ ಸಸಿಗಳನ್ನು ನೆಡಲು ಮುಂದಾಗಿದೆ.

ಐದಾರು ದಿನಗಳಿಂದ ಸತತವಾಗಿ ಬೀಸುತ್ತಿರುವ ಭಾರಿ ಗಾಳಿ ಮತ್ತು ಮಳೆಗೆ ನೆಲಕ್ಕೊರಗಿದ್ದು ಗುಲ್‌ಮೋಹರ್‌, ಮಳೆಮರ, ಕಾಪರ್‌ ಪಾಡ್‌ ಮುಂತಾದ ವಿದೇಶಿ ಮೂಲದ (ಎಕ್ಸೋಟಿಕ್‌ ಸ್ಪೀಸಿಸ್‌) ಮೆತ್ತನೆಯ ಮರಗಳು.

ಅರಳಿ, ಸಂಪಿಗೆ, ಬೇವು, ಹುಣಸೆ, ರೋಸಿಯಾದಂತಹ ದೇಶಿ ತಳಿಯ ಮರಗಳುಎಂತಹ ಗಾಳಿ, ಮಳೆಗೂ ಉರುಳದೆ ನೂರಾರು ವರ್ಷ ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿವೆ. ಈ ಮರಗಳ ಬೇರುಗಳು ಭೂಮಿಯ ಸಾಕಷ್ಟು ಆಳಕ್ಕೆ ಇಳಿಯುವುದರಿಂದ ಎಂತಹ ಗಾಳಿ, ಮಳೆಗೂ ಅಲಗಾಡುವುದಿಲ್ಲ.

ಇದೇ ಕಾರಣದಿಂದ ಬಿಬಿಎಂಪಿ‘ಕೋಟಿವೃಕ್ಷ ಸೈನ್ಯ’ ಎಂಬ ಕಾರ್ಯಕ್ರಮದ ಅಡಿ ನಗರದಲ್ಲಿ ದೇಶಿ ಸಸ್ಯಗಳನ್ನು ಬೆಳೆಸಲು ಮುಂದಾಗಿದೆ. ಈ ಮುಂಗಾರಿನಲ್ಲಿ ನಗರದಲ್ಲಿ 10 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ.

ಬಿಬಿಎಂಪಿಗೆ ಸೇರಿದ ಯಲಹಂಕ ವಲಯದ ಅಟ್ಟೂರು ಸಸ್ಯಕ್ಷೇತ್ರದಲ್ಲಿ ಈಗಾಗಲೇ 10 ಲಕ್ಷ ದೇಶಿ ತಳಿಯ ಸಸಿಗಳನ್ನು ಬೆಳೆಸಲಾಗಿದೆ ಎಂದು ಬಿಬಿಎಂಪಿ ಆಯುಕ್ತಬಿ. ಹೆಚ್. ಅನಿಲ್ ಕುಮಾರ್ ಹೇಳುತ್ತಾರೆ.

ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್‌ ಮರಗಳು ಉರುಳಿ ಸಂಭವಿಸುವ ಅನಾಹುತಗಳನ್ನು ತಡೆಗಟ್ಟುವ ಉದ್ದೇಶದಿಂದ ಮಹಾಘನಿ, ರೋಸಿಯಾ,ಅರಳಿ, ಸಂಪಿಗೆಯಂತಹ ಸ್ಥಳೀಯ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್‌ ಎಚ್‌.ಎಸ್‌. ರಂಗನಾಥ ಸ್ವಾಮಿ ಮಾಹಿತಿ ನೀಡಿದರು.

ನಗರದಲ್ಲಿರುವ ಹೆಚ್ಚಿನ ಮರಗಳು ವಿದೇಶಿ ತಳಿಗಳ ಸಂಖ್ಯೆ ಜಾಸ್ತಿ. ಅವುಗಳ ಬೇರು ಆಳಕ್ಕಿಳಿದಿರುವುದಿಲ್ಲ. ಕಾಂಡ ಗಟ್ಟಿಯಾಗಿರುವುದಿಲ್ಲ. ತಾಯಿ ಬೇರು ಗಟ್ಟಿ ಇಲ್ಲದ ಗಿಡಗಳು ಒಂದು ಸಣ್ಣ ಗಾಳಿ ಬೀಸಿದರೂ ಬೀಳುತ್ತವೆ. ಇನ್ನು ಮಳೆಗಾಲ ಅಥವಾ ಚಂಡಮಾರುತ, ಬಿರುಗಾಳಿಯಂತಹ ಸಂದರ್ಭದಲ್ಲಿಗಂಟೆಗೆ ನೂರರಿಂದ ನೂರೈವತ್ತು ಕಿ. ಮೀ ವೇಗದಲ್ಲಿ ಬೀಸುವ ಗಾಳಿಗೆ ಹೇಗೆ ನಿಲ್ಲುತ್ತವೆ ಎಂದು ಪ್ರಶ್ನಿಸುತ್ತಾರೆ.

ಒಂದು ಕಾಲಕ್ಕೆ ಬೆಂಗಳೂರು ಸುತ್ತಮುತ್ತ 25 ಸಾವಿರ ಅಶ್ವತ್ಥಕಟ್ಟೆ, ಗುಂಡುತೋಪುಗಳಿದ್ದವು. ಅವುಗಳನ್ನು ಅಭಿವೃದ್ಧಿ ನುಂಗಿ ಹಾಕಿದೆ ಎಂದು ಪರಿಸರ ತಜ್ಞ ಡಾ. ಅ.ನ. ಯಲ್ಲಪ್ಪ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಮರಗಳ ಎತ್ತರಕ್ಕೆ ಅನುಗುಣವಾಗಿ ನೆಲದ ಅಡಿ ಅವುಗಳ ಬೇರು ಇಳಿದಿರಬೇಕು. ಗಿಡದಲ್ಲಿ ಎಷ್ಟು ಎಲೆಗಳಿರುತ್ತವೆಯೋ ಅಷ್ಟು ಬೇರುಗಳಿರಬೇಕು. ಬೆಂಗಳೂರಿನಲ್ಲಿಯ ಹೆಚ್ಚಿನ ಮರಗಳಿಗೆ ಎಲೆಗಳಿವೆ, ಆದರೆ ಬೇರುಗಳಿಲ್ಲ.ರಸ್ತೆ, ಮೋರಿ, ಚರಂಡಿಗಳಿಗಾಗಿ ಬೇರುಗಳನ್ನು ಕಡಿಯಲಾಗಿದೆ. ಇದರಿಂದ ಬೇರುಗಳು ಸಡಿಲಾಗುತ್ತವೆ ಎನ್ನುತ್ತಾರೆ ರೆಡ್ಡಿ.

ದೇಶಿ ತಳಿಯ ಸಸಿಗಳು ಬೆಳೆದು ದೊಡ್ಡವಾದರೆ ಮಳೆಗಾಲದಲ್ಲಿ ನೆಲಕ್ಕೊರಗುವ ಅಪಾಯ ಇರುವುದಿಲ್ಲ ಎನ್ನುವುದು ರಂಗನಾಥ ಅವರ ವಿಶ್ವಾಸ.

‘ಮಳೆಗಾಲಕ್ಕೆ ಒಂದಿಷ್ಟು ಸಸಿಗಳನ್ನು ನೆಡುವುದು ನಮ್ಮಲ್ಲಿ ಸಂಪ್ರದಾಯವಾಗಿದೆ. ಹಾಗೆ ನೆಟ್ಟ ಸಸಿಗಳಲ್ಲಿ ಉಳಿಯುವುದು ಶೇ 10ರಷ್ಟು ಮಾತ್ರ. ಹಾಗಾಗಿ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನೆಪ ಮಾತ್ರಕ್ಕೆ ಸಸಿಗಳನ್ನು ನೆಡುವುದನ್ನು ಬಿಟ್ಟು ಅವುಗಳ ಸಂರಕ್ಷಣೆಯತ್ತ ಗಮನ ಹರಿಸುವುದು ಒಳ್ಳೆಯದು’ ಎನ್ನುತ್ತಾರೆ ಪರಿಸರ ಪ್ರೇಮಿಗಳಾದ ಅಲೋಕ್‌ ಗರ್ಗ್‌ ಮತ್ತು ಪ್ರಿಯಂವದಾ ನಟರಾಜನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT