ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ, ಒಣ ಕಸ ಬೇರ್ಪಡಿಸದಿದ್ದರೆ ₹2 ಲಕ್ಷದವರೆಗೆ ದಂಡ

ಕರ್ನಾಟಕ ನಗರಪಾಲಿಕೆಗಳ ಕಾಯ್ದೆಗೆ ತಿದ್ದುಪಡಿ: ಮಸೂದೆಗೆ ಒಪ್ಪಿಗೆ
Last Updated 25 ಸೆಪ್ಟೆಂಬರ್ 2020, 23:31 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಣ, ಹಸಿ ಕಸ ವಿಂಗಡಣೆ ಮತ್ತು ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲರಾಗುವ ಮನೆಯವರು ಮತ್ತು ಇತರರ ಮೇಲೆ ₹2 ಲಕ್ಷದವರೆಗೆ ದಂಡ ವಿಧಿಸುವ ಕರ್ನಾಟಕ ನಗರಪಾಲಿಕೆಗಳ (ಎರಡನೇ ತಿದ್ದುಪಡಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.

ಮಸೂದೆ ಮಂಡಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉದ್ದೇಶ ವಿವರಿಸಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದಿಸಿದ ಘನ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಆಗುತ್ತಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿಯ ರಿಟ್‌ ಅರ್ಜಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದು, ನ್ಯಾಯಾಲಯ ಈ ಪ್ರಕರಣಗಳನ್ನು ಈಗಲೂ ಆಲಿಸುತ್ತಿದೆ ಎಂದರು.

ಒಣ ಮತ್ತು ಹಸಿ ಕಸವನ್ನು ವಿಂಗಡಿಸಲು ವಿಫಲರಾದ ಮನೆಯವರಿಗೆ ಜುಲ್ಮಾನೆ ವಿಧಿಸಲು 2012 ರಲ್ಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ. ಹೀಗಾಗಿ, ಜುಲ್ಮಾನೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ ಇದನ್ನು ಮಂಡಿಸಿರುವುದಾಗಿ ಅವರು ಹೇಳಿದರು.

‘ಘನತ್ಯಾಜ್ಯ ನಿರ್ವಹಣೆಯ ಯೋಜನೆಗಳನ್ನು ಪಾಲಿಸಲು ವಿಫಲರಾದರೆ ಅಥವಾ ಪಾಲಿಸಲು ಅಡ್ಡಿಪಡಿಸಿದ ಅಪರಾಧ ನಿರೂಪಿತವಾದರೆ ₹ 2 ಲಕ್ಷಗಳವರೆಗೆ ಜುಲ್ಮಾನೆ ವಿಧಿಸಬಹುದು’ ಎಂದು ಮಸೂದೆ ವಿವರಿಸಿದೆ.

'ಯಾರಿಗೆಲ್ಲ ದಂಡ ಅನ್ವಯವಾಗುತ್ತದೆ'

*ಕಸ ಹಾಕುವುದು, ಉಗಿಯುವುದು, ಬಯಲು ಪ್ರದೇಶದಲ್ಲಿ ಮಲ–ಮೂತ್ರ ವಿಸರ್ಜನೆ

*ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಅದನ್ನು
ಸಂಗ್ರಹಕಾರನಿಗೆ ನೀಡುವಲ್ಲಿ ವಿಫಲರಾಗುವ ಮನೆ ಮತ್ತು ವಾಣಿಜ್ಯ ಸಂಕೀರ್ಣದವರು

*ರಸ್ತೆ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಬೀದಿ, ಆಟದ ಮೈದಾನ, ಉದ್ಯಾನವನ ಮತ್ತು ಸಾರ್ವಜನಿಕ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ವಿಫಲರಾಗುವವರು

*ತ್ಯಾಜ್ಯವನ್ನು ನಿಭಾಯಿಸುವ ಮತ್ತು ಸಾಗಿಸುವ ಉದ್ದೇಶಕ್ಕಾಗಿ ಉದ್ಯಾನವನ ತ್ಯಾಜ್ಯ, ಜಡತ್ಯಾಜ್ಯ, ಜೈವಿಕವಾಗಿ ಕೊಳೆಯದ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ಸಂಬಂಧಿಸಿದ ನಿಗಮಕ್ಕೆ ನೀಡದೇ ಇರುವುದು

*ಕಸ ಮತ್ತು ಯಾವುದೇ ಘನತ್ಯಾಜ್ಯವನ್ನು ಅನಿಯಮಿತವಾಗಿ ರಾಶಿಗೂಡಿಸುವುದು, ಬೀದಿಗಳಲ್ಲಿ ಹೊಲಸು ಹರಿಯುವುದಕ್ಕೆ ಅವಕಾಶ ನೀಡುವುದು

*ಯುಕ್ತವಲ್ಲದ ಸ್ಥಳದಲ್ಲಿ ಸತ್ತ ಪ್ರಾಣಿಯನ್ನು ಹಾಕುವುದು

*ಕಟ್ಟಡದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಗುಡ್ಡೆ ಹಾಕುವುದು

ಈ ಎಲ್ಲ ಅಪರಾಧ ಎಸಗಿದವರಿಗೆ ಮೊದಲ ಬಾರಿಗೆ ₹100 ರಿಂದ ₹1000 ದವರೆಗೆ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ₹2 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT