ಬೆಂಗಳೂರು: ಥಣಿಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಯ ನಡುವಿರುವ ರಾಜಕಾಲುವೆಯ ಬಫರ್ ಝೋನ್‌ನಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲು ಬಿಬಿಎಂಪಿ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ.
ಹೆಬ್ಬಾಳ ರಕ್ಷಣಾ ಪ್ರದೇಶದಿಂದ (ಸರೋವರ ಲೇಔಟ್) ಥಣಿಸಂದ್ರ ಮುಖ್ಯ ರಸ್ತೆವರೆಗಿನ ರಾಜಕಾಲುವೆ ಬಫರ್ ಝೋನ್‌ನಲ್ಲಿ ಸರ್ವೀಸ್ ರಸ್ತೆ ನಿರ್ಮಾಣ, ಥಣಿಸಂದ್ರ ಮುಖ್ಯರಸ್ತೆಯಿಂದ ಹೆಣ್ಣೂರು ಮುಖ್ಯರಸ್ತೆವರೆಗಿನ ರಾಜಕಾಲುವೆಯ ರಕ್ಷಣೆ, ಮರು ಅಭಿವೃದ್ಧಿ ಹಾಗೂ ಸರ್ವೀಸ್ ರಸ್ತೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್
ಆಹ್ವಾನಿಸಲಾಗಿದೆ.
ಒಟ್ಟಾರೆ 7.75 ಕಿ.ಮೀ ಉದ್ದವಿರುವ ರಾಜಕಾಲುವೆ ಅಭಿವೃದ್ಧಿ, ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ ಟಿಡಿಆರ್ ಸೇರಿದಂತೆ ಯೋಜನೆಯ ಒಟ್ಟು ವೆಚ್ಚವನ್ನು ಒಳಗೊಂಡ 3ಡಿ ಪರಿಕಲ್ಪನೆಯ ಡಿಪಿಆರ್ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಯಲಹಂಕ ವಲಯದ ಬೃಹತ್ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು ಆಗಸ್ಟ್ 1ರಂದು ಟೆಂಡರ್ ಆಹ್ವಾನಿಸಿದ್ದಾರೆ. ಆಗಸ್ಟ್ 12ರವರೆಗೆ ಬಿಡ್ ಸಲ್ಲಿಸಲು ಅವಕಾಶವಿದ್ದು, ಆರು ತಿಂಗಳಲ್ಲಿ ಡಿಪಿಆರ್ ಪೂರ್ಣಗೊಳಿಸಬೇಕು ಎಂದು ಹೇಳಲಾಗಿದೆ.