ಬೆಂಗಳೂರು: ಡಬಲ್ ಡೆಕರ್ ಬಸ್‌ಗಳನ್ನು ನಗರದಲ್ಲಿ ಮತ್ತೆ ರಸ್ತೆಗಿಳಿಸುವ ಬಿಎಂಟಿಸಿಯ ಕನಸು ನನಸಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಸತತ ಮೂರು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಿದರೂ ಬಿಡ್‌ದಾರರು ಆಸಕ್ತಿ ವಹಿಸಿಲ್ಲ. ಬಿಡ್ ಮಾಡಿದವರೂ ಅತಿಯಾದ ದರ ದಾಖಲಿಸಿದ್ದರಿಂದ ಯೋಜನೆ ಕಾರ್ಯಗತಗೊಳ್ಳುವುದೇ ಅನುಮಾನವಾಗಿದೆ.
ಪ್ರವಾಸಿಗರನ್ನು ಸೆಳೆಯಲು ರಾಜ್ಯ ಸರ್ಕಾರವೇ ವರ್ಷದ ಹಿಂದೆ ಡಬಲ್ ಡೆಕರ್ ಬಸ್ ಯೋಜನೆಗೆ ಅನುಮತಿ ನೀಡಿತ್ತು. ನಗರದ ಪ್ರವಾಸಿ ತಾಣಗಳು ಇರುವ ಮಾರ್ಗಗಳಲ್ಲಿ 10 ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲು ನಿರ್ಧರಿಸಲಾಗಿತ್ತು. 65 ಸೀಟುಗಳ ಈ ಬಸ್ ದಿನಕ್ಕೆ 150 ಕಿ.ಮೀ. ಸಂಚಾರ ನಡೆಸುವಂತೆ ಯೋಜನೆ ರೂಪಿಸಲಾಗಿತ್ತು. 1970–80ರಲ್ಲಿ ಡಬಲ್ ಡೆಕರ್ ಬಸ್‌ಗಳು ಪ್ರಸಿದ್ಧ
ವಾಗಿದ್ದವು. ಮತ್ತೆ ಬೆಂಗಳೂರಿನಲ್ಲಿ ಡಬಲ್ ಡೆಕರ್ ಸಂಚರಿಸಲಿವೆ ಎಂಬುದು ಪ್ರಯಾಣಿಕರಲ್ಲಿ ಕುತೂಹಲವನ್ನು ಮೂಡಿಸಿತ್ತು.
‘ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮ’ದ (ಎನ್‌ಸಿಎಪಿ) ಅಡಿಯಲ್ಲಿ ಐದು ಬಸ್‌ಗಳು, ನಗರ ಭೂ ಸಾರಿಗೆ ನಿರ್ದೇಶನಾಲಯದ (ಡಲ್ಟ್) ಸಹಕಾರದಲ್ಲಿ ಐದು ಡಬಲ್ ಡೆಕರ್ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸಲು ಟೆಂಡರ್ ಆಹ್ವಾನಿಸಿದರೂ ಬಿಡ್‌ದಾರರಿಂದ ಉತ್ತಮ ಸ್ಪಂದನೆ ಬಂದಿರಲಿಲ್ಲ. ಒಂದೇ ಕಂಪನಿ ಭಾಗವಹಿಸಿತ್ತು. ಆನಂತರ ಮತ್ತೆರಡು ಬಾರಿ ಟೆಂಡರ್ ಆಹ್ವಾನಿಸಿದಾಗ ಬೆರಳೆಣಿಕೆಯ ಕಂಪನಿಗಳಷ್ಟೇ ಭಾಗವಹಿಸಿದ್ದವು. ಪ್ರತಿ ಕಿ.ಮೀಗೆ ₹ 102.5 ದರ ಪ್ರಸ್ತಾಪಿಸಿದ್ದವು.
‘ಡಬಲ್ ಡೆಕರ್ ಬಸ್‌ಗಳು ಹವಾನಿಯಂತ್ರಣ ರಹಿತವಾಗಿರುತ್ತವೆ. ಹಾಗಾಗಿ ದುಬಾರಿ ಟಿಕೆಟ್ ದರ ಇರಿಸಲು ಸಾಧ್ಯವಿಲ್ಲ. ಸಾಮಾನ್ಯ ದರದಲ್ಲಿಯೇ ಕಾರ್ಯಾಚರಣೆ ಆರಂಭಿಸಿದರೆ ಬಿಎಂಟಿಸಿಗೆ ಭಾರಿ ನಷ್ಟವಾಗಲಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
‘ನಿಗಮವೇ ಈ ಬಸ್ ಖರೀದಿಸುವುದೂ ಲಾಭದಾಯಕವಲ್ಲ. ಅಲ್ಲದೇ ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೇಲ್ಸೇತುವೆಗಳೇ ಹೆಚ್ಚಾಗಿರುವುದರಿಂದ ನಿಗದಿತ ಸ್ಥಳಗಳನ್ನು ನೋಡಲು ಸುತ್ತು ಹಾಕಿಕೊಂಡು ಬರಬೇಕಾಗಿದೆ. ನಿಗಮಕ್ಕೆ ಲಾಭ ತರದೇ ಹೋದರೂ ನಷ್ಟವಾಗದೇ, ಪ್ರಯಾಣಿಕರಿಗೂ ಹೊರೆ
ಯಾಗದಂತೆ ಟಿಕೆಟ್ ದರ ಇರಿಸುವಷ್ಟು ಬಿಡ್ ಇದ್ದಿದ್ದರೆ ಈ ಯೋಜನೆ ಕಾರ್ಯಗತಗೊಳಿಸಬಹುದಿತ್ತು’ ಎಂದು ಅಧಿಕಾರಿಗಳು ಕೈಚೆಲ್ಲಿದ್ದಾರೆ.
‘ಬಿಳಿಯಾನೆಯಾದರೆ ಕಷ್ಟ’
‘ದಶಕಗಳ ಹಿಂದೆ ಡಬಲ್ ಡೆಕರ್ ಬಸ್‌ಗಳು ಇದ್ದವು. ಇದೇ ಮಾದರಿಯ ಬಸ್‌ಗಳನ್ನು ಮತ್ತೆ ರಸ್ತೆಗಿಳಿಸಿ ಪ್ರಯಾಣಿಕರನ್ನು ಆಕರ್ಷಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಟೆಂಡರ್‌ನಲ್ಲಿ ಬಿಡ್‌ದಾರರು ಸಲ್ಲಿಸಿರುವ ದರ ನೋಡಿದರೆ ಯೋಜನೆಯು ಬಿಳಿಯಾನೆ ಆಗುವ ಸಾಧ್ಯತೆ ಕಾಣುತ್ತಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
‘ಡಬಲ್ ಡೆಕರ್ ಯೋಜನೆಯನ್ನು ಮುಂದುವರಿಸುವ ಅಥವಾ ಕೈಬಿಡುವ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳು, ತಜ್ಞರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.