ಮಂಗಳವಾರ, ಆಗಸ್ಟ್ 16, 2022
29 °C

ಬೆಂಗಳೂರು ಮಳೆ: ದಶಕದ ನಂತರ ದಾಖಲೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರಕ್ಕೆ ಕುಡಿಯುವ ನೀರು ಒದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯಗಳಲ್ಲಿ ದಶಕದ ನಂತರ ದಾಖಲೆ ಮಟ್ಟಕ್ಕೆ ನೀರು ತುಂಬಿದೆ.

ಜುಲೈ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಸುರಿದ ಮಳೆಯಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಆ.5ರ ಅವಧಿಯಲ್ಲಿ 46.5 ಅಡಿ ನೀರು ಸಂಗ್ರಹ ವಾಗಿದೆ. ಇದರ ಗರಿಷ್ಠ ಮಟ್ಟ 69 ಅಡಿ. ಹೆಸರಘಟ್ಟ ಜಲಾಶಯದಲ್ಲಿ 19 ಅಡಿ (ಗರಿಷ್ಠ ಮಟ್ಟ 50 ಅಡಿ) ನೀರಿದೆ.

ತಿಪ್ಪಗೊಂಡನಹಳ್ಳಿಗೆ ಆ.5ರ ಶುಕ್ರವಾರ ಒಂದೇ ದಿನ 4.5 ಅಡಿ ನೀರು ಬಂದಿದೆ. ಮಳೆ ಮುಂದುವರಿದಿದ್ದು, ಜಲಾಶಯಕ್ಕೆ ನೀರು ಬರುತ್ತಲೇ ಇದೆ. ಆಗಸ್ಟ್‌ ಮೊದಲನೇ ವಾರದಲ್ಲಿ ಇಷ್ಟು ನೀರು ತುಂಬಿರುವುದು ಸುಮಾರು 12 ವರ್ಷಗಳಿಂದೀಚೆಗೆ ಇದೇ ಮೊದಲು. ಸೆಪ್ಟೆಂಬರ್‌– ಅಕ್ಟೋಬರ್‌ ವೇಳೆಯಲ್ಲಿ ಸುಮಾರು 50 ಅಡಿಯಷ್ಟು ಗರಿಷ್ಠ ಸಂಗ್ರಹವನ್ನು ಕಾಣುತ್ತಿತ್ತು. ಆದರೆ, ಈ ಬಾರಿ ಆಗಸ್ಟ್‌ ಆರಂಭದಲ್ಲೇ ಹೆಚ್ಚು ನೀರು ಸಂಗ್ರಹವಾಗಿದೆ ಎಂದು ಅಧಿಕಾರಿಗಳು
ತಿಳಿಸಿದರು.

ತುಮಕೂರು ಹಾಗೂ ಶಿವಗಂಗೆ ಭಾಗದಲ್ಲಿ ಮಳೆಯಾದರೆ, ಅರ್ಕಾವತಿ ನದಿಯ ಉಪ ನದಿಯಾದ ಕುಮುದ್ವತಿ ಮೂಲಕ ತಿಪ್ಪಗೊಂಡನಹಳ್ಳಿಗೆ ನೀರು ಹರಿಯುತ್ತದೆ. ಆ ಭಾಗದಲ್ಲಿ ಇದೀಗ ಮಳೆ ಹೆಚ್ಚಾಗುತ್ತಿರುವುದರಿಂದ ನೀರಿನ ಹರಿವು ಈ ಬಾರಿ ಅಧಿಕವಾಗಿದೆ.

15 ವರ್ಷ: ‘ಕಾಕೋಳು ಕೆರೆ ಕೋಡಿ ಬಿದ್ದಿದೆ. ಬ್ಯಾತಾ ಕೆರೆ ತುಂಬುವ ಹಂತದಲ್ಲಿದೆ. ಕಳೆದ ಮೂರು ದಿನಗಳಿಂದ ಮಳೆ ಕಡಿಮೆಯಾಗಿದೆ. ಹೀಗಾಗಿ ಹರಿವು ಕಡಿಮೆಯಾಗಿದೆ. ಆಗಸ್ಟ್‌ ಮೊದಲ ವಾರದಲ್ಲೇ ಈ ಮಟ್ಟದಲ್ಲಿ ಹೆಸರಘಟ್ಟ ಕೆರೆಗೆ ನೀರು ತುಂಬಿರುವುದು 15 ವರ್ಷಗಳಲ್ಲೇ ಇದೇ ಮೊದಲು’ ಎಂದು ಸ್ಥಳೀಯರಾದ ಮನು ಹೇಳಿದರು.

ದೊಡ್ಡಬಳ್ಳಾಪುರ ಭಾಗದಲ್ಲಿ ಅತಿಹೆಚ್ಚು ಮಳೆಯಾದರೆ ಹೆಸರಘಟ್ಟಕ್ಕೆ ನೀರು ಬರುತ್ತದೆ. ಈ ಹಿಂದೆ ಅಕ್ಟೋಬರ್‌, ನವೆಂಬರ್‌ನಲ್ಲಿ ಸುಮಾರು 10ರಿಂದ 12 ಅಡಿ ನೀರು ಬಂದರೆ ಅದೇ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಆಗಸ್ಟ್‌ ಮೊದಲ ವಾರದಲ್ಲೇ 19 ಅಡಿ ನೀರು ಬಂದಿದೆ. ಹೀಗಾಗಿ ಹಿಂಗಾರು ಮಳೆ ಮುಗಿಯುವ ವೇಳೆಗೆ ದಾಖಲೆಯ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದರು.

ಅಳತೆಗೋಲು (ಸಮುದ್ರ ಮಟ್ಟದಿಂದ) ಪ್ರಕಾರ, ಹೆಸರಘಟ್ಟದ ಗರಿಷ್ಠ ಮಟ್ಟ 72 ಅಡಿ. ಅದರಂತೆ ಈಗ 56 ಅಡಿ ನೀರಿದೆ. ಆದರೆ ಭೌತಿಕವಾಗಿ 19 ಅಡಿ ನೀರು ಜಲಾಶಯದಲ್ಲಿದೆ. ಇದು 50 ಅಡಿ ಮೀರಿದರೆ ಕೋಡಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು