ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮನಹಳ್ಳಿ: ಕಾಂಕ್ರೀಟ್‌ ಕುಸಿದು ಗುಂಡಿ ಬಿದ್ದ ಮೇಲ್ಸೇತುವೆ

ಕಟ್ಟಿದ 11 ವರ್ಷಕ್ಕೆ ಹೊರವರ್ತುಲ ರಸ್ತೆಯ ಸೇತುವೆ ಶಿಥಿಲ *ವಾಹನ ಸಂಚಾರ ನಿರ್ಬಂಧ
Last Updated 2 ನವೆಂಬರ್ 2019, 21:27 IST
ಅಕ್ಷರ ಗಾತ್ರ

ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿ ಮಾಗಡಿ ರಸ್ತೆಗೆ ಅಡ್ಡಲಾಗಿ ಸುಮನಹಳ್ಳಿ ಬಳಿ ನಿರ್ಮಿಸಿರುವ ಮೇಲ್ಸೇತುವೆಯಲ್ಲಿ ಕಾಂಕ್ರೀಟ್‌ ಸಡಿಲಗೊಂಡು ಕುಸಿದುಬಿದ್ದಿದೆ. ಇದರಿಂದಾಗಿ ಸುಮಾರು ಐದು ಅಡಿ ಸುತ್ತಳತೆಯ ಗುಂಡಿ ಉಂಟಾಗಿದ್ದು, ಸೇತುವೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

ಹೊರವರ್ತುಲ ರಸ್ತೆ ನಿರ್ಮಾಣದ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಮೇಲ್ಸೇತುವೆ ನಿರ್ಮಿಸಿತ್ತು. ಚೆನ್ನೈನ ಈಸ್ಟ್‌ ಕೋಸ್ಟ್ ಕಾಂಟ್ರ್ಯಾಕ್ಟರ್ಸ್‌ ಸಂಸ್ಥೆ ಈ ಕಾಮಗಾರಿಯನ್ನು ನಿರ್ವಹಿಸಿತ್ತು. ಬಿಡಿಎ 2016ರಲ್ಲೇ ಈ ರಸ್ತೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿತ್ತು.

‘ಈ ಸೇತುವೆಗೆ ಬಳಸಿದ್ದ ಕಾಂಕ್ರೀಟ್‌ ಗುಣಮಟ್ಟ ಕಳಪೆ ಆಗಿರುವುದರಿಂದ ಈ ರೀತಿ ಆಗಿದೆ. ಮೂರು ತಿಂಗಳ ಹಿಂದೆಯೇ ಕಾಂಕ್ರೀಟ್‌ನ ಕೆಲವು ತುಂಡುಗಳು ಕೆಳಗೆ ಬಿದ್ದಿದ್ದವು. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದೆವು. ಅವರು ತಲೆಕೆಡಿಸಿಕೊಂಡಿರಲಿಲ್ಲ. ಶುಕ್ರವಾರ ರಾತ್ರಿ 10 ಗಂಟೆ ಸುಮಾರು ಇನ್ನಷ್ಟು ಕಾಂಕ್ರೀಟ್‌ ಕುಸಿದು ಬಿದ್ದಿತ್ತು. ಇದನ್ನು ಕಂಡು ನಾವು ಪೊಲೀಸರು ಗಮನಕ್ಕೆ ತಂದೆವು. ಬಳಿಕ ಅವರು ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರು’ ಎಂದು ಸ್ಥಳಿಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗುಂಡಿಯ ಸುತ್ತಲು ಬ್ಯಾರಿಕೇಡ್ ಅಳವಡಿಸಲಾಗಿದೆ. ಗುಂಡಿಯ ದುರಸ್ತಿ ಕಾರ್ಯ ಆರಂಭವಾಗಿದೆ.

'10 ದಿನಗಳಲ್ಲಿ ದುರಸ್ತಿ'
‘ಮೇಲ್ಸೇತುವೆಯನ್ನು 10 ದಿನಗಳಲ್ಲಿ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ತಿಳಿಸಿದರು.

ಸುಮನಹಳ್ಳಿ ಮೇಲ್ಸೇತುವೆಯನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ನಾಯಂಡಹಳ್ಳಿಯಿಂದ ಗೊರಗುಂಟೆ ಪಾಳ್ಯ ಕಡೆಗೆ ಸಂಪರ್ಕ ಕಲ್ಪಿಸುವ ಸುಮನಹಳ್ಳಿ ಮೇಲ್ಸೇತುವೆ ಮಾರ್ಗದಲ್ಲಿ ಗುಂಡಿ ಬಿದ್ದಿರುವ ಪರಿಣಾಮ ಆ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸಂಚಾರ ಪೊಲೀಸರು ವಾಹನ ಸವಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ’ ಎಂದರು.

‘ಮೇಲ್ಸೇತುವೆಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದ ಪರಿಣಾಮ ರಸ್ತೆಯಲ್ಲಿ ಗುಂಡಿ ಉಂಟಾಗಿದೆ. ಈ ಸಂಬಂಧ ಮೇಲ್ಸೇತುವೆ ದೃಢತೆ ಬಗ್ಗೆ ಪರಿಶೀಲನಾ ವರದಿ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

‘ರಸ್ತೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಿದ ಬಳಿಕ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಈ ಕಾರ್ಯವನ್ನು ಪಾಲಿಕೆ ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲ. ಮೇಲ್ಸೇತುವೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಹೊಣೆ’ ಎಂದರು.

ಕೊಟ್ಟಿಗೆಪಾಳ್ಯ ವಾರ್ಡ್‌ನ ಪಾಲಿಕೆ ಸದಸ್ಯ ಜಿ.ಮೋಹನ್ ಕುಮಾರ್ ಜತೆಗಿದ್ದರು.

ಕಾರಣಗಳೇನು?

ಮೇಲ್ಸೇತುವೆ ಕಾಂಕ್ರೀಟ್‌ ಕುಸಿದು ಗುಂಡಿ ಕಾಣಿಸಿಕೊಳ್ಳುವುದರ ಹಿಂದಿನ ಸಂಭಾವ್ಯ ಕಾರಣಗಳ ಬಗ್ಗೆ ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಎಸ್‌. ಸೋಮಶೇಖರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

* ಇಂತಹ ಮೇಲ್ಸೇತುವೆಗಳ ನಿರ್ಮಾಣಕ್ಕೆ ರೆಡಿ ಮಿಕ್ಸ್‌ ಕಾಂಕ್ರೀಟ್‌ ಬಳಸಲಾಗುತ್ತದೆ. ರೆಡಿ ಮಿಕ್ಸ್‌ ಕಾಂಕ್ರೀಟ್‌ ಅನ್ನು ನಿರ್ದಿಷ್ಟ ಅವಧಿಯೊಳಗೆ ಬಳಸಬೇಕು. ಇಲ್ಲದಿದ್ದರೆ ಅದು ಗಟ್ಟಿಯಾಗುತ್ತದೆ. ಅದು ಗಟ್ಟಿಯಾಗುವ ಅವಧಿಯನ್ನು ಮುಂದೂಡಲು ಅಡ್‌ಮಿಕ್ಸರ್‌ ಎಂಬ ಪದಾರ್ಥವನ್ನು ಮಿಶ್ರ ಮಾಡುತ್ತಾರೆ. ರೆಡಿ ಮಿಕ್ಸ್‌ ಕಾಂಕ್ರೀಟ್‌ಗೆ ಮಿಶ್ರ ಮಾಡುವ ಅಡ್‌ಮಿಕ್ಸರ್‌ ಪ್ರಮಾಣದಲ್ಲಿ ಏರುಪೇರಾದರೆ ಅದರಿಂದ ಕಾಂಕ್ರೀಟ್‌ನ ದೃಢತೆ ಮೇಲೆ ಪರಿಣಾಮ ಉಂಟಾಗುತ್ತದೆ.

* ಕಾಂಕ್ರೀಟ್‌ ಮಿಶ್ರಣ ಮಾಡುವಾಗ ಕೆಲವೆಡೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇರಿದ್ದರೆ ಜಲ್ಲಿ, ಮರಳು ಹಾಗೂ ಸಿಮೆಂಟ್‌ ಬೇರ್ಪಡುತ್ತವೆ. ಅದರಿಂದಲೂ ಕಾಂಕ್ರೀಟ್‌ನ ದೃಢತೆ ಕಡಿಮೆ ಆಗಬಹುದು.

* ಕಾಂಕ್ರೀಟ್‌ ಹಾಕಿದ ಬಳಿಕ ಸರಿಯಾಗಿ ಕ್ಯೂರಿಂಗ್‌ ಮಾಡದಿದ್ದರೂ ಅದರ ದೃಢತೆ ಕಡಿಮೆಯಾಗುತ್ತದೆ.

*
ಕಾಂಕ್ರೀಟ್‌ನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ತಜ್ಞರು ಪರಿಶೀಲಿಸಿ ವರದಿ ನೀಡಿದ ಬಳಿಕವಷ್ಟೇ ಕುಸಿತದ ನಿಖರ ಕಾರಣ ಏನೆಂಬುದು ತಿಳಿಯಲಿದೆ.
-ಎಸ್‌.ಸೋಮಶೇಖರ್, ಮುಖ್ಯ ಎಂಜಿನಿಯರ್‌, ರಸ್ತೆ ಮೂಲಸೌಕರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT