ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit | ಡಿಜಿಟಲ್‌ ಕಂದರ ನಿವಾರಣೆಗೆ ಕ್ರಮ: ಸಿಎಂ ಸಿದ್ದರಾಮಯ್ಯ

Published 29 ನವೆಂಬರ್ 2023, 16:06 IST
Last Updated 29 ನವೆಂಬರ್ 2023, 16:06 IST
ಅಕ್ಷರ ಗಾತ್ರ

ಬೆಂಗಳೂರು: ‘ತಂತ್ರಜ್ಞಾನದ ಸೌಲಭ್ಯಗಳು ರಾಜ್ಯದ ಎಲ್ಲ ನಾಗರಿಕರಿಗೂ ತಲುಪಬೇಕಿದೆ. ಇದಕ್ಕಾಗಿ ಡಿಜಿಟಲ್‌ ಕಂದರ ನಿವಾರಣೆಗೆ ಅಗತ್ಯವಿರುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಗರದ ಬೆಂಗಳೂರು ಅರಮನೆ ಆವರಣದಲ್ಲಿ ಬುಧವಾರ ಆರಂಭವಾದ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2023’ ಉದ್ಘಾಟಿಸಿ ಮಾತನಾಡಿದ ಅವರು, ‘ಡಿಜಿಟಲ್‌ ಕಂದರವನ್ನು ಮುಚ್ಚಲು ಕೆಲವು ನಿರ್ದಿಷ್ಟ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ದತ್ತಾಂಶ ಮತ್ತು ಅವುಗಳ ವಿಶ್ಲೇಷಣೆಯನ್ನು ಬಳಸಿಕೊಂಡು ಆಡಳಿತದಲ್ಲಿ ಮಾಹಿತಿ ಆಧಾರಿತ ಅಭಿಯಾನ ಕೈಗೊಳ್ಳುತ್ತೇವೆ. ಬೆಂಗಳೂರಿನ ಆಚೆಗೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಈ ಕಂದರವನ್ನು ತೊಡೆದುಹಾಕಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ಮುಂದಿನ ನಾವೀನ್ಯತಾ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸಜ್ಜಾಗಲಿದೆ. ಅದಕ್ಕೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮತ್ತು ಇತರ ನೆರವು ಒದಗಿಸಲಾಗುವುದು. ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ನಡುವೆ ಸಮನ್ವಯ ಸಾಧಿಸುವುದು ಹಾಗೂ ಪೂರಕವಾದ ನೀತಿಗಳನ್ನು ರೂಪಿಸುವ ಕೆಲಸವನ್ನೂ ಸರ್ಕಾರ ಮಾಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹವಾಮಾನ ಸಂಬಂಧಿ ತಂತ್ರಜ್ಞಾನ ಮತ್ತು ಫಿನ್‌ಟೆಕ್‌ ಕ್ಷೇತ್ರಗಳಲ್ಲಿ ವೇಗವಾದ ಬೆಳವಣಿಗೆ ಇದೆ. ಈಗ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರಿಂದ ಫಿನ್‌ಟೆಕ್‌ ಕ್ಷೇತ್ರಕ್ಕೆ ಅನುಕೂಲಗಳಾಗಲಿದೆ.
ಪ್ರಶಾಂತ್‌ ಪ್ರಕಾಶ್‌, ನವೋದ್ಯಮಗಳಿಗೆ ಸಂಬಂಧಿಸಿದ ವಿಷನ್‌ ಗ್ರೂಪ್‌ ಅಧ್ಯಕ್ಷ

ಕರ್ನಾಟಕದಲ್ಲಿ 5,500 ಉದ್ದಿಮೆಗಳು ಮತ್ತು 750 ಬಹುರಾಷ್ಟ್ರೀಯ ಕಂಪನಿಗಳಿವೆ. ರಾಜ್ಯದಿಂದ 8,500 ಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು ಮೌಲ್ಯದ ಮಾಹಿತಿ ತಂತ್ರಜ್ಞಾನದ ಉತ್ಪನ್ನಗಳ ರಫ್ತು ನಡೆಯುತ್ತಿದೆ. ವಿಭಿನ್ನ ವಲಯಗಳಲ್ಲಿ ಹೊಸ ಉದ್ಯಮಗಳನ್ನು ಬೆಂಬಲಿಸುವ ಕೆಲಸ ಮಾಡಬೇಕಿದೆ. ಹೊಸ ಹೂಡಿಕೆ ಮತ್ತು ಹೊಸ ವಹಿವಾಟುಗಳ ಮೂಲಕ ಮಿತಿಗಳನ್ನು ಮೀರುವ ಸವಾಲು ಇದೆ. ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ರೂಪಿಸುವ ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದರು.

ಕಝಕಿಸ್ತಾನದ ಡಿಜಿಟಲ್‌ ಅಭಿವೃದ್ಧಿ ಸಚಿವ ಬಾಗ್ದಾತ್‌ ಮುಸ್ಸಿನಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಏಕರೂಪ್‌ ಕೌರ್‌ ಉಪಸ್ಥಿತರಿದ್ದರು.

‘ಸಿಎಸ್‌ಆರ್‌ ನಿಧಿ ಗ್ರಾಮೀಣ ಶಾಲೆಗಳಿಗಿರಲಿ’

‘ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಗ್ರಾಮೀಣ ಪ್ರದೇಶಗಳ ಶಾಲೆಗಳ ಅಭಿವೃದ್ಧಿಗೆ ಮೀಸಲಿಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಉದ್ಯಮಿಗಳಲ್ಲಿ ಮನವಿ ಮಾಡಿದರು. ಶೃಂಗಸಭೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ರಾಜ್ಯದಲ್ಲಿ ಹೊಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಶಾಲೆಗಳ ಅಭಿವೃದ್ಧಿಗೆ ಕಾರ್ಪೋರೇಟ್‌ ಕಂಪನಿಗಳು ಕೈಜೋಡಿಸಬೇಕು’ ಎಂದರು. ಗ್ರಾಮೀಣ ಪ್ರದೇಶದ ಶಾಲೆಗಳ ಗುಣಮಟ್ಟ ಹೆಚ್ಚಾದರೆ ಆ ಭಾಗದ ಮಕ್ಕಳು ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಸಜ್ಜಾಗುತ್ತಾರೆ. ಸಿಎಸ್ಆರ್‌ ನಿಧಿ ಬಳಕೆಗೆ ಸಂಬಂಧಿಸಿದಂತೆ ಅಜೀಂ ಪ್ರೇಮ್‌ಜಿ ಸೇರಿದಂತೆ ಹಲವರ ಬಳಿ ಚರ್ಚಿಸಲಾಗಿದೆ. ₹2000 ಕೋಟಿಗೂ ಹೆಚ್ಚು ನೆರವಿನ ಭರವಸೆ ದೊರಕಿದೆ ಎಂದು ಹೇಳಿದರು.

ಕಳೆದ ವರ್ಷ ಆರ್ಥಿಕ ಕುಸಿತವಿದ್ದ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಶೇಕಡ 9ರಷ್ಟು ಪ್ರಗತಿ ದಾಖಲಿಸಿತ್ತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ಹೊಂದಿರುವ ನಾಯಕತ್ವವನ್ನು ಉಳಿಸಿಕೊಳ್ಳಲು ಸೂಕ್ತವಾದ ಕಾರ್ಯತಂತ್ರ ರೂಪಿಸಬೇಕು.
ಕ್ರಿಸ್‌ ಗೋಪಾಲಕೃಷ್ಣನ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷನ್‌ ಗ್ರೂಪ್‌ ಅಧ್ಯಕ್ಷ
ಪ್ರತಿ ವರ್ಷ ಐ.ಟಿ ಕ್ಷೇತ್ರದಲ್ಲಿ ಕೆಲಸ ಮಾಡಲು ಕರ್ನಾಟಕಕ್ಕೆ ಬರುವವರ ಸಂಖ್ಯೆ ನಾಲ್ಕು ಲಕ್ಷದಷ್ಟಿದೆ. ಇದರಿಂದಾಗಿ ರಾಜ್ಯದ ಮೇಲೆ ಹೆಚ್ಚು ಒತ್ತಡವಿದೆ. ಅದಕ್ಕೆ ಪೂರಕವಾಗಿ ಮೂಲಸೌಕರ್ಯ ಅಭಿವೃದ್ಧಿ ಆಗಬೇಕಿದೆ.
ರಿಷಾದ್‌ ಪ್ರೇಮ್‌ಜಿ, ವಿಪ್ರೊ ಕಾರ್ಯಕಾರಿ ಅಧ್ಯಕ್ಷ

‘ಆವಿಷ್ಕಾರದಿಂದ ಉತ್ಪಾದನೆವರೆಗೆ ಮುಂಚೂಣಿಯಲ್ಲಿ’

‘ಬೆಂಗಳೂರು ಬಿಪಿಒಗಳ ಕೇಂದ್ರವಾಗಿತ್ತು. ನಂತರದಲ್ಲಿ ಸಂಶೋಧನೆ ಅಭಿವೃದ್ಧಿ ಆವಿಷ್ಕಾರಗಳ ತಾಣವಾಯಿತು. ಈಗ ಉತ್ಪಾದನೆಯಲ್ಲೂ ಮುಂಚೂಣಿ ಸ್ಥಾನ ಗಳಿಸಿದೆ. ರಾಜ್ಯದ ಪಾಲಿಗೆ ಇದೊಂದು ಮಹತ್ತರವಾದ ಸಾಧನೆ’ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ಎಲೆಕ್ಟ್ರಾನಿಕ್ಸ್‌ ವಿನ್ಯಾಸ ಯಂತ್ರೋಪಕರಣಗಳ ಬಿಡಿ ಭಾಗಗಳ ಉತ್ಪಾದನೆ ಏರೋಸ್ಪೇಸ್‌ ಮತ್ತು ರಕ್ಷಣಾ ವಲಯ ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಆಡಳಿತದಲ್ಲಿನ ಬದ್ಧತೆಯ ಕಾರಣದಿಂದ ಇದೆಲ್ಲವೂ ಸಾಧ್ಯವಾಗಿದೆ’ ಎಂದರು. ‘ಅಭಿವೃದ್ಧಿಪರ ವಾತಾವರಣ ಸೃಷ್ಟಿ’ ‘ಉದ್ಯಮಶೀಲತೆ ಮತ್ತು ಹೂಡಿಕೆ ಆಕರ್ಷಣೆಗೆ ಪೂರಕವಾದ ಕ್ರಮಗಳ ಮೂಲಕ ಅಭಿವೃದ್ಧಿಪರ ವಾತಾವರಣ ಸೃಷ್ಟಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕ ಸರ್ಕಾರವು ನಿರಂತರ ಬೆಂಬಲ ನೀಡುತ್ತಿದೆ. ನವೋದ್ಯಮಗಳ ಬೆಂಬಲಕ್ಕೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ.
ಅರವಿಂದಕುಮಾರ್‌, ಸಾಫ್ಟ್‌ವೇರ್‌ ಪಾರ್ಕ್‌ ಆಫ್‌ ಇಂಡಿಯಾದ ಮಹಾನಿರ್ದೇಶಕ
ಉದ್ಯಮ ಮತ್ತು ಸರ್ಕಾರದ ನಡುವಣ ಉತ್ತಮ ಸಂಬಂಧವೇ ಕರ್ನಾಟಕವು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎತ್ತರಕ್ಕೆ ಬೆಳೆಯಲು ಕಾರಣ. ಕರ್ನಾಟಕವು ಜೈವಿಕ ತಂತ್ರಜ್ಞಾನ ಕ್ಷೇತ್ರದ ಬೃಹತ್‌ ಉದ್ದಿಮೆಗಳು ಹಾಗೂ ನವೋದ್ಯಮಗಳ ತವರಾಗಿದೆ. ಸರ್ಕಾರವು ಆರಂಭದ ಹಂತದಲ್ಲಿ ಮಾಡಿದ್ದ ಹೂಡಿಕೆ ಈಗ ಫಲ ನೀಡುತ್ತಿದೆ.
ಕಿರಣ್‌ ಮಜುಂದಾರ್‌ ಷಾ, ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷನ್‌ ಗ್ರೂಪ್‌ ಅಧ್ಯಕ್ಷೆ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರತಿನಿಧಿಗಳು
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ವೇಳೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರತಿನಿಧಿಗಳು
ಭಾರತವು ಬಳಕೆದಾರ ಕೇಂದ್ರಿತ ಆರ್ಥಿಕತೆಯಿಂದ ಉತ್ಪಾದನಾ ಕೇಂದ್ರಿತ ಆರ್ಥಿಕತೆಯತ್ತ ಸಾಗುತ್ತಿದೆ. ಈ ದಿಸೆಯಲ್ಲಿ ಸಾಮರ್ಥ್ಯ ವೃದ್ಧಿ ಸೇರಿದಂತೆ ಹಲವು ಸವಾಲುಗಳಿವೆ. ವಿಶೇಷ ಉತ್ತೇಜನಗಳನ್ನು ನೀಡುವ ಮೂಲಕ ಉತ್ಪಾದನಾ ಕ್ಷೇತ್ರವನ್ನು ಸರ್ಕಾರವು ಬೆಂಬಲಿಸಬೇಕು.
ನಿವೃತಿ ರೈ , ವ್ಯವಸ್ಥಾಪಕ ನಿರ್ದೇಶಕಿ, ಇನ್‌ವೆಸ್ಟ್‌ ಇಂಡಿಯಾ
ಕರ್ನಾಟಕದಲ್ಲಿ ಉದ್ಯಮಸ್ನೇಹಿ ಆಡಳಿತವಿದೆ. ಅಧಿಕಾರಶಾಹಿಯಲ್ಲಿ ತೊಡಕುಗಳಿಲ್ಲ. ಇದರಿಂದಾಗಿ ಹೂಡಿಕೆದಾರರು ಕರ್ನಾಟಕದಲ್ಲಿ ಕೆಲಸ ಮಾಡಲು ಬಯಸುತ್ತಾರೆ.
ಮಾರ್ಕ್‌ ಪೇಪರ್‌ಮಾಸ್ಟರ್‌, ಕಾರ್ಯಕಾರಿ ಉಪಾಧ್ಯಕ್ಷ ಎಎಂಡಿ ಸಮೂಹ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರತಿನಿಧಿ
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT