ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಜ್ಜಾ ಆರ್ಡರ್ ಮಾಡಿ ₹95 ಸಾವಿರ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ

Last Updated 5 ಡಿಸೆಂಬರ್ 2019, 4:13 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಡರ್ ಮಾಡಿದ ಪಿಜ್ಜಾ ರದ್ದು ಮಾಡಿ ಹಣ ವಾಪಸ್‌ ಪಡೆಯಲು ಹೋಗಿ ಇಲ್ಲಿನ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರು ₹95 ಸಾವಿರ ಕಳೆದುಕೊಂಡಿದ್ದಾರೆ.

ಡಿಸೆಂಬರ್‌ 1ರ ಮಧ್ಯಾಹ್ನ 3.30ಕ್ಕೆ ಸಾಫ್ಟ್‌ವೇರ್‌ ಉದ್ಯೋಗಿ ಶೈಕ್‌ ಪಿಜ್ಜಾ ತಿನ್ನುವುದಕ್ಕಾಗಿ ಫುಡ್‌ ಡೆಲಿವರಿ ಆ್ಯಪ್‌ ತೆಗೆದು ಪಿಜ್ಜಾ ಆರ್ಡರ್ ಮಾಡಿದ್ದಾರೆ. ಒಂದು ಗಂಟೆಯಾದರೂ ಪಿಜ್ಜಾ ಡೆಲಿವರಿ ಆಗದ್ದನ್ನು ನೋಡಿ, ಆನ್‌ಲೈನ್‌ನಲ್ಲಿ ಆ ಆ್ಯಪ್‌ನ ಕಸ್ಟಮರ್‌ ಕೇರ್ ನಂಬರ್‌ ಹುಡುಕಿ ಕರೆ ಮಾಡಿದ್ದಾರೆ. ಇದಾದ ಎರಡು ಗಂಟೆಯೊಳಗೆ ಶೈಕ್‌ ಬ್ಯಾಂಕ್‌ ಖಾತೆಯಿಂದ ₹95 ಸಾವಿರ ಮಾಯವಾಗಿದೆ.

ತಿಂಗಳ ಸಂಬಳ ಮತ್ತು ಉಳಿತಾಯವನ್ನು ಕಳೆದುಕೊಂಡ ಶೈಕ್‌ , ಮಡಿವಾಳ ಪೊಲೀಸ್ ಠಾಣೆಗೆ ಹೋಗಿ ಈ ಆನೈಲೈನ್ ವಂಚನೆ ಬಗ್ಗೆ ದೂರು ದಾಖಲಿಸಿದ್ದಾರೆ. ‘ಈ ಬಗ್ಗೆ ದೂರು ನೀಡಲು ಸೈಬರ್‌ ಕ್ರೈಂ ಠಾಣೆಗೆ ಹೋದರೆ, ಅಲ್ಲಿ ದೂರು ದಾಖಲಿಸಿಕೊಳ್ಳಲಿಲ್ಲ. ಆದ್ದರಿಂದಮಡಿವಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ’ ಎಂದರು.

‘ಕಸ್ಟಮರ್‌ಕೇರ್‌ಗೆ ಕರೆ ಮಾಡಿದಾಗ ಅವರು, ಸದ್ಯ ನಾವು ಪಿಜ್ಜಾ ಆರ್ಡರ್‌ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಹಣವನ್ನು ಮರುಸಂದಾಯ ಮಾಡುತ್ತೇವೆ. ಶೀಘ್ರ ಹಣ ವಾಪಸ್‌ ಆಗಬೇಕೆಂದರೆ, ನಾವು ಕಳುಹಿಸುವ ಲಿಂಕ್‌ನಲ್ಲಿನ ವಿವರಗಳನ್ನು ಭರ್ತಿ ಮಾಡಿ ಕಳುಹಿಸಿಎಂದು ಹೇಳಿದರು,’ ಎಂದುಶೈಕ್‌ ದೂರಿನಲ್ಲಿ ವಿವರಿಸಿದ್ದಾರೆ.

ವಂಚಕರೊಂದಿಗೆ ಮಾತನಾಡುತ್ತಿದ್ದೇನೆ ಎನ್ನುವ ಸಣ್ಣ ಸುಳಿವು ಶೈಕ್‌ ಅವರಿಗೆ ಇರಲಿಲ್ಲ. ಅವರು ಹೇಳಿದಂತೆ ಲಿಂಕ್‌ನಲ್ಲಿನ ವಿವರಗಳನ್ನು ಭರ್ತಿ ಮಾಡುತ್ತಿದ್ದಂತೆ ಅವರ ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆಯಿಂದ ₹45 ಸಾವಿರ ಕಡಿತಗೊಂಡಿದೆ. ಆ ಖಾತೆಯಲ್ಲಿದ್ದ ಉಳಿದ ₹50 ಸಾವಿರನ್ನು ಮತ್ತೊಂದು ಬ್ಯಾಂಕ್‌ ಖಾತೆಗೆ ವರ್ಗಾಯಿಸಬೇಕು ಎನ್ನುವಷ್ಟರಲ್ಲಿ ಅದೂ ಸಹ ಕಡಿತವಾಗಿದೆ. ಹೀಗೆ ₹95 ಸಾವಿರ ಕಳೆದುಕೊಂಡಿದ್ದಾರೆ.

‘ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ ವಂಚಕರು ಕಳುಹಿಸಿದಲಿಂಕ್‌ನಲ್ಲಿ, ಯಾವ ಖಾತೆಗೆ ಹಣ ಮರುಪಾವತಿಸಬೇಕು ಎನ್ನುವ ವಿವರ ಹಾಗೂ ನನ್ನ ಫೋನ್‌ಪೇ ಬಳಕೆದಾರರ ಹೆಸರು(ಯೂಸರ್‌ನೇಮ್)ನಮೂದಿಸಬೇಕಿತ್ತು. ಅದನ್ನು ಭರ್ತಿ ಮಾಡಿದೆ. ಆದರೆ, ನನ್ನ ಖಾತೆಯಿಂದ ಹಣ ಹೋಗುತ್ತದೆ ಎನ್ನುವ ಸಣ್ಣ ಕಲ್ಪನೆಯೂ ನನಗೆ ಇರಲಿಲ್ಲ,’ ಎಂದು ತಿಳಿಸಿದ್ದಾರೆ.

‘ನವೆಂಬರ್ 29ರಂದು ಸಂಬಳವಾಗಿತ್ತು. ನನ್ನ ತಾಯಿಯ ಆರೋಗ್ಯ ಸರಿ ಇರಲಿಲ್ಲ. ಅವರ ಚಿಕಿತ್ಸೆಗಾಗಿ ಹಣ ಕೂಡಿಟ್ಟಿದ್ದೆ. ಅದೆಲ್ಲವೂ ಹೋಯಿತು. ಯಾವ ಖಾತೆಗೆ ತನ್ನ ಹಣ ಹೋಗಿ ಎನ್ನುವ ವಿವರವೂ ನನ್ನ ಬಳಿ ಇದೆ. ವಂಚಕರನ್ನು ದಯವಿಟ್ಟು ಪತ್ತೆ ಹಚ್ಚಿ’ ಎಂದು ಪೊಲೀಸರ ಬಳಿ ಅವಲೊತ್ತುಕೊಂಡಿದ್ದಾರೆ.

ಮಡಿವಾಳ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಮಾಲ್ವೇರ್ ಮೂಲಕ ವಂಚಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT