ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಾಳೆ ರಾತ್ರಿ 8ರಿಂದ ವಾಹನ ಸಂಚಾರ ನಿರ್ಬಂಧ; ಮೇಲ್ಸೇತುವೆಗಳು ಬಂದ್

ಹೊಸ ವರ್ಷಾಚರಣೆ
Last Updated 30 ಡಿಸೆಂಬರ್ 2020, 13:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊಸ ವರ್ಷಾಚರಣೆ ವೇಳೆ ಹೆಚ್ಚು ಜನ ಸೇರದಂತೆ ತಡೆಯಲು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌ಗಳಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಜ.1ರ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಮುಂಗಡ ಟಿಕೆಟ್ ಹಾಗೂ ಪಾಸ್‌ ಇದ್ದವರಿಗೆ ಮಾತ್ರ ರೆಸ್ಟೋರೆಂಟ್‌, ಪಬ್‌, ಪಾರ್ಟಿಗಳಿಗೆ ಅವಕಾಶ ನೀಡಲಾಗುವುದು. ನಿಷೇಧಿತ ರಸ್ತೆಗಳಲ್ಲಿ ಪಾರ್ಟಿಗಳಿಗೆ ಹೋಗುವವರು, ವಾಹನಗಳನ್ನು ಬಿಟ್ಟು, ನಡೆದು ಹೋಗಬಹುದು’ ಎಂದು ವಿವರಿಸಿದರು.

‘ಹೊಸ ವರ್ಷದ ಆಚರಣೆ ವೇಳೆ ಮೋಜು ಮಾಡಲು ನೈಸ್‌ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಜನ ಸೇರುತ್ತಾರೆ. ಕೆಲವರು ಬೈಕ್‌ ರೇಸ್, ವೀಲಿಂಗ್‌ ಮಾಡುತ್ತಾರೆ. ಅಂತಹವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. 191 ಕಡೆ ನಾಕಾಬಂದಿ ಹಾಕಲಾಗುವುದು.2,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಸಂಚಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಹೊಸ ವರ್ಷದ ನೆಪದಲ್ಲಿ ಮದ್ಯ ಸೇವಿಸಿ, ವಾಹನ ಚಾಲನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮದ್ಯ ಸೇವಿಸಿರುವುದು ತಿಳಿದು ಬಂದರೆ, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು’ ಎಂದೂ ಎಚ್ಚರಿಸಿದರು.

ಎಲ್ಲ ಮೇಲ್ಸೇತುವೆಗಳು ಬಂದ್‌: ‘ನಗರದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರುವುದರಿಂದ ನಗರದ ಹೊರಭಾಗಗಳತ್ತ ಜನ ಹೊರಡುತ್ತಾರೆ. ಅಲ್ಲಿಯೂ ಸಂಭ್ರಮಾಚರಣೆಗೆ ತಡೆ ಇರಲಿದೆ. ಇದಕ್ಕಾಗಿ ನಗರದ ಎಲ್ಲ ಮೇಲ್ಸೇತುವೆಗಳನ್ನು ಗುರುವಾರ ರಾತ್ರಿ 10ರಿಂದ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಲಾಗುವುದು. ಸರ್ವೀಸ್‌ ರಸ್ತೆಗಳಲ್ಲಿ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವಾಹನ ನಿಲುಗಡೆ ನಿಷೇಧ ಎಲ್ಲೆಲ್ಲಿ? ಕಬ್ಬನ್‌ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್, ಇನ್‌ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಮ್ಯೂಸಿಯಂ ರಸ್ತೆ, ಸೇಂಟ್ ಮಾರ್ಕ್‌ ರಸ್ತೆ, ಮ್ಯಾಗ್ರತ್ ರಸ್ತೆ, ಕಮಿಷನರೇಟ್ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ರೆಸ್ಟ್‌ ಹೌಸ್ ರಸ್ತೆ, ಡಿಸ್ಪೆನ್ಸರಿ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT