ಬ್ರ್ಯಾಂಡ್ ಬೆಂಗಳೂರು: ವಿದ್ಯುತ್ ಪರಿವರ್ತಕ: ಈ ಪರಿ ಅಸಡ್ಡೆ ಸರಿಯೇ?

ಬೆಂಗಳೂರು: ರಸ್ತೆ ಪಕ್ಕ, ಎಲ್ಲೆಂದರಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳು ನಗರದ ನಾಗರಿಕರಿಗೆ ಅಪಾಯ ಸೃಷ್ಟಿಸುತ್ತಿವೆ. ಹಲವೆಡೆ ಪಾದಚಾರಿಗಳ ಜೀವಕ್ಕೆ ಇವು ಕಂಟಕಪ್ರಾಯವಾಗಿವೆ. ಅನೇಕ ಕಡೆ ಸಂಚಾರಕ್ಕೆ ಸಂಚಕಾರ ತರಬಲ್ಲ ಸ್ಥಿತಿಯಲ್ಲಿ ಇವುಗಳನ್ನು ಸ್ಥಾಪಿಸಲಾಗಿದೆ.
ಮಂಗನಹಳ್ಳಿ ಕ್ರಾಸ್ ಬಳಿ ವಿದ್ಯುತ್ ಪರಿವರ್ತಕ ಸ್ಫೋಟಗೊಂಡು ಸಂಭವಿಸಿದ ದುರಂತದ ಬಳಿಕ ವಿದ್ಯುತ್ ಪರಿವರ್ತಕಗಳ ಸುರಕ್ಷತೆಗೆ ಸಂಬಂಧಿಸಿದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಬೆಸ್ಕಾಂ, ಅಪಾಯಕಾರಿ ಸ್ಥಳಗಳಲ್ಲಿನ ವಿದ್ಯುತ್ ಪರಿವರ್ತಕಗಳ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿತ್ತು. ಹೈಕೋರ್ಟ್ ಸಹ ಈ ವಿಷಯದ ಬಗ್ಗೆ ಬೆಸ್ಕಾಂಗೆ ಚಾಟಿ ಬೀಸಿತ್ತು.
ರಸ್ತೆ ಬದಿ, ರಾಜಕಾಲುವೆಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿರುವ ವಿದ್ಯುತ್ ಪರಿವರ್ತಕಗಳನ್ನು ಹಲವೆಡೆ ನೆಲಮಟ್ಟದಲ್ಲೇ ಸ್ಥಾಪಿಸಲಾಗಿದೆ. ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿರಿಸಿದೆ. ಹಲವೆಡೆ ಬಯಲು ಪ್ರದೇಶದಲ್ಲಿರುವ ಈ ವಿದ್ಯುತ್ ಪರಿವರ್ತಕಗಳಿಗೆ ಸುರಕ್ಷತೆಯ ಚೌಕಟ್ಟು ಕೂಡ ಇಲ್ಲ. ಕನಿಷ್ಠ ಇವುಗಳ ಸುತ್ತ ತಂತಿ ಬೇಲಿಯೂ ಇಲ್ಲ. ಪ್ರಯಾಣಿಕರ ತಂಗುದಾಣಗಳ ಸಮೀಪದಲ್ಲೂ ಇವುಗಳನ್ನು ಅಳವಡಿಸಲಾಗಿದೆ ಎನ್ನುವುದು ನಾಗರಿಕರ ದೂರು.
ಕೆಲವೆಡೆ ಇಂದಿಗೂ ಹಳೆಯ ಕಂಬಗಳಲ್ಲೇ ವಿದ್ಯುತ್ ಪರಿವರ್ತಕಗಳಿದ್ದು, ಅಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ವಾಹನಗಳು ಸಂಚರಿಸುವಾಗ ತಂತಿ ತಗುಲುವ ಸಾಧ್ಯತೆ ಹೆಚ್ಚಿದೆ. ಪರಿವರ್ತಕಗಳ ಸಮೀಪ ಇದ್ದಾಗ ಮಕ್ಕಳ ಮೇಲೆ ನಿಗಾ ವಹಿಸಲೇಬೇಕು. ಅನಾಹುತಗಳು ಸಂಭವಿಸಿದರೆ ಯಾರು ಹೊಣೆ. ವಿದ್ಯುತ್ ಪರಿವರ್ತಕಗಳನ್ನು ಎತ್ತರಿಸಿದ ಸ್ಥಳದಲ್ಲಿರಿಸುವ ಮೂಲಕ ಅಪಾಯ ತಡೆಗಟ್ಟಬೇಕು ಎನ್ನುವ ಬಹುದಿನಗಳ ಆಗ್ರಹವೂ ಪರಿಪೂರ್ಣವಾಗಿ ಈಡೇರಿಲ್ಲ ಎನ್ನುವುದು ನಾಗರಿಕರ ದೂರು.
ನಗರದಲ್ಲಿ 8,659 ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 3,000 ಟ್ರಾನ್ಸ್‌ಫಾರ್ಮರ್‌ಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಅಥವಾ ಅವುಗಳ ಮಟ್ಟವನ್ನು ಎತ್ತರಿಸಲಾಗಿದೆ. ವಿದ್ಯುತ್ ಪರಿವರ್ತಕಗಳ ಸಂಪೂರ್ಣ ಸ್ಥಳಾಂತರ ಕಾರ್ಯಕ್ಕೆ ಸುಮಾರು ₹ 100 ಕೋಟಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ ಎಂದು ಬೆಸ್ಕಾಂ ಇತ್ತೀಚೆಗೆ ಹೈಕೋರ್ಟ್‌ಗೆ ತಿಳಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.