ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಇಸಿ: ಹಾಸಿಗೆ–ದಿಂಬು ಬಾಡಿಗೆಗೆ ₹24.24 ಕೋಟಿ!

ಬೃಹತ್ ಗಾತ್ರದ ಕೋವಿಡ್ ಆರೈಕೆ ಕೇಂದ್ರಕ್ಕೆ ಅಂದಾದುಂದಿ ವೆಚ್ಚ: ಆರೋಪ
Last Updated 13 ಜುಲೈ 2020, 18:35 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಬೃಹತ್‌ ಗಾತ್ರದ ಕೋವಿಡ್‌ ಆರೈಕೆ ಕೇಂದ್ರ ನಿರ್ಮಿಸುವ ಮುನ್ನ ಸೂಕ್ತ ಯೋಜನೆ ರೂಪಿಸದೇ ಇದ್ದುದರಿಂದ ಸಾರ್ವಜನಿಕರ ತೆರಿಗೆ ಹಣದ ದುಂದುವೆಚ್ಚಕ್ಕೆ ಕಾರಣವಾಗಿದೆ ಎಂಬ ಟೀಕೆ ಅಧಿಕಾರಿಗಳ ವಲಯದಲ್ಲೇ ವ್ಯಕ್ತವಾಗಿದೆ.

ಮಂಚ, ಹಾಸಿಗೆ, ಬೆಡ್‌ಸ್ಪ್ರೆಡ್, ದಿಂಬು, ಖುರ್ಚಿ ಮತ್ತು ಫ್ಯಾನ್‌ಗಳನ್ನು ಖಾಸಗಿ ಏಜೆನ್ಸಿಯೊಂದರಿಂದ ಬಾಡಿಗೆ ಆಧಾರದಲ್ಲಿ ಬಿಬಿಎಂಪಿ ಪಡೆದುಕೊಂಡಿದೆ.

ಬಿಐಇಸಿಯಲ್ಲಿ 10,100 ಹಾಸಿಗೆಗಳನ್ನು ಅಳವಡಿಸಲಾಗಿದ್ದು, ಒಬ್ಬರಿಗೆ ₹800ರಂತೆ ದಿನಕ್ಕೆ ₹80.80 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.ಆಹಾರ (ದಿನಕ್ಕೆ ₹250), ನೀರು, ಔಷಧ, ವೈದ್ಯಕೀಯ ಸಿಬ್ಬಂದಿ, ಹಾಸಿಗೆ ಬಟ್ಟೆಗಳನ್ನು ತೊಳೆಯುವುದು, ಸ್ವಚ್ಛತಾ ಕಾರ್ಯದ ವೆಚ್ಚವನ್ನು ಪ್ರತ್ಯೇಕವಾಗಿ ಭರಿಸಲಾಗುತ್ತದೆ.

10,100 ಹಾಸಿಗೆ, ಹೊದಿಕೆ ಬಾಡಿಗೆಮೊತ್ತವೇ ತಿಂಗಳಿಗೆ ₹24.24 ಕೋಟಿ ಆಗಲಿದೆ. ತಾತ್ಕಾಲಿಕವಾಗಿ ನಾಲ್ಕು ತಿಂಗಳ ಅವಧಿಗೆ ಬಾಡಿಗೆ ಪಡೆಯುವ ಉದ್ದೇಶವಿದೆ. ಅಷ್ಟು ತಿಂಗಳು ಪಡೆದಲ್ಲಿ ₹96.96 ಕೋಟಿ ಪಾವತಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ 30 ಸಾವಿರ ರೋಗಿಗಳಿಗೆ ಹಾಸಿಗೆ ಸೌಕರ್ಯ ಒದಗಿಸಲು ಬಿಬಿಎಂಪಿ ಉದ್ದೇಶಿಸಿದೆ. ಹಾಸಿಗೆ ಲೆಕ್ಕದಲ್ಲಿ ಬಾಡಿಗೆ ಪಡೆದು ವೆಚ್ಚ ಮಾಡಿದರೆ 30 ಸಾವಿರ ಜನರಿಗೆ ಸೌಲಭ್ಯ ಒದಗಿಸಲು ₹288 ಕೋಟಿ‌ ಪಾವತಿಸಬೇಕಾಗುತ್ತದೆ.

‘ಒಂದು ತಿಂಗಳಿಗೆ ಬಾಡಿಗೆ ಪಾವತಿಸುವ ಮೊತ್ತದಲ್ಲಿಅಷ್ಟೂ ಸಾಮಗ್ರಿಗಳನ್ನು ಖರೀದಿ ಮಾಡಬಹುದು. ಎಷ್ಟು ಕಾಲ ಬೇಕಿದ್ದರೂ ಅವುಗಳನ್ನು ಉಪಯೋಗಿಸಿಕೊಳ್ಳಬಹುದು. ಕೋವಿಡ್ ಕಾಲ ಮುಗಿದ ಬಳಿಕ ಅವುಗಳನ್ನು ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಬಳಕೆ ಮಾಡಿಕೊಳ್ಳಬಹುದು’ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸಿ.ಎಂ ತರಾಟೆ: ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ಈ ವಿಷಯ ಮುಟ್ಟಿಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಬಿಎಂಪಿ ಅಧಿಕಾರಿಗಳ ಜತೆ ಭಾನುವಾರ ಸಭೆ ನಡೆಸಿದ್ದಾರೆ. ‘ಹಾಸಿಗೆ, ದಿಂಬುಗಳಿಗೆ ಇಷ್ಟು ದುಬಾರಿ ಬಾಡಿಗೆ ಪಾವತಿಸುವ ಬದಲು ಖರೀದಿ ಮಾಡಲು ನಿಮಗೆ ಏನು ಕಷ್ಟ ಎಂದು ತರಾಟೆಗೆ ತೆಗೆದುಕೊಂಡರು’ ಎಂದು ಮೂಲಗಳು ತಿಳಿಸಿವೆ.

‘ಬಾಡಿಗೆಗೆ ಪಡೆಯುವ ನಿರ್ಧಾರ ಕೈಬಿಟ್ಟು,ಖರೀದಿ ಮಾಡಲು ಬೇಕಿರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ’ ಎಂದು ಹೇಳಿವೆ.

ದಿಢೀರ್ಬದಲಾವಣೆ ಸಾಧ್ಯವೇ:ಮಂಚ, ಹಾಸಿಗೆ, ದಿಂಬು, ಹೊದಿಕೆ ಎಲ್ಲವನ್ನೂ ಈಗಾಗಲೇ ಬಾಡಿಗೆ ಆಧಾರದಲ್ಲಿ ಪಡೆಯಲಾಗಿದ್ದು, ಆರೈಕೆ ಕೇಂದ್ರದಲ್ಲಿ ಅಳವಡಿಸಿಯೂ ಆಗಿದೆ. ಗುರುವಾರ ಭೇಟಿ ನೀಡಿದ್ದ ಮುಖ್ಯಮಂತ್ರಿಯವರು ಇನ್ನೊಂದು ವಾರದಲ್ಲಿ ಆರೈಕೆ ಕೇಂದ್ರ ಕಾರ್ಯಾರಂಭಗೊಳ್ಳಲಿದೆ ಎಂದು ಹೇಳಿದ್ದರು. ಕೊನೆಯ ಕ್ಷಣದಲ್ಲಿ ಬಾಡಿಗೆ ಪಡೆಯುವುದು ಕೈಬಿಟ್ಟು ಖರೀದಿ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.

ಕೇಂದ್ರಕ್ಕೆ ಬೇಕಿರುವ ಸಲಕರಣೆಗಳ ಖರೀದಿಗೆಅಲ್ಪಾವಧಿ ಟೆಂಡರ್ ಕರೆದರೂ ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು. ಅದು ರಾಜ್ಯಪತ್ರದಲ್ಲಿ ಪ್ರಕಟವಾಗಬೇಕು. ಬಿಡ್‌ದಾರರು ಅಂತಿಮಗೊಂಡು ಸಲಕರಣೆ ಪೂರೈಸುವಷ್ಟರಲ್ಲಿ ಆಗಸ್ಟ್ ಬರಲಿದೆ. ಹಾಸಿಗೆಗಳು ಸಿಗದೆ ಸೋಂಕಿತರು ಈಗಾಗಲೇ ಬೀದಿ ಬೀದಿ ಅಲೆಯುವ ಸ್ಥಿತಿ ಇದೆ. ಬಿಐಇಸಿ ಆರೈಕೆ ಕೇಂದ್ರ ಆರಂಭವಾಗುವುದು ಇನ್ನಷ್ಟು ವಿಳಂಬವಾದರೆ ಸೋಂಕಿತರು ಮತ್ತಷ್ಟು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಬಾಡಿಗೆಗೆ ಪಡೆಯುವುದಿಲ್ಲ: ಆಯುಕ್ತ

‘ಬಿಐಇಸಿ ಕೋವಿಡ್ ಆರೈಕೆ ಕೇಂದ್ರಕ್ಕೆ ಮಂಚ ಮತ್ತು ಹಾಸಿಗೆಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯುವುದಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.

‘ಬಾಡಿಗೆಗೆ ಪಡೆಯಬೇಕು ಎಂಬ ನಿರ್ಧಾರವನ್ನು ಆರಂಭದಲ್ಲಿ ಮಾಡಿದ್ದು ನಿಜ. ಈಗ ಅಲ್ಪಾವಧಿ ಟೆಂಡರ್ ಕರೆದು ಖರೀದಿ ಮಾಡುತ್ತೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

’ವಿವೇಚನೆ ಇಲ್ಲದ ಆಡಳಿತ‘

‘ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿವೇಚನೆ ಇಲ್ಲದೆ ಕೆಲಸ ಮಾಡುತ್ತಿದೆ ಹಾಗೂ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಯೋಚನೆಯನ್ನೇ ಮಾಡಿಲ್ಲ ಎಂಬುದಕ್ಕೆ ಇದೇ ಉದಾಹರಣೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್. ದೀಪಕ್ ಹೇಳಿದರು.

‘ದಿನಕ್ಕೆ ₹800 ಪಾವತಿಸುವ ಮೊತ್ತದಲ್ಲಿ ಖರೀದಿಯನ್ನೇ ಮಾಡಬಹುದು ಎಂಬ ಲೆಕ್ಕಾಚಾರ ಅಧಿಕಾರಿಗಳಿಗೆ ಏಕೆ ಹೊಳೆಯುವುದಿಲ್ಲ. ಇದರ ಹಿಂದಿನ ಉದ್ದೇಶ ಎಲ್ಲರಿಗೂ ಅರ್ಥವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT